ಕಾಲೇಜುಗಳಲ್ಲಿ ಸಲಹಾ ಪೆಟ್ಟಿಗೆ
ಮಡಿಕೇರಿ, ಮಾ. 24: ಮಾದಕ ವಸ್ತುಗಳ ಸೇವನೆಯಿಂದ ಸಮಾಜದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಯುವಜನರು ಮಾದಕ ವಸ್ತುಗಳಿಂದ ದೂರವಿರಬೇಕು. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಹೇಳಿದರು.
ರಾಜ್ಯ ಮದ್ಯಪಾನ ಸಂಯಮ ಮಂಡಳಿ ವತಿಯಿಂದ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಘಟಕ ಇವರ ಸಹಯೋಗದಲ್ಲಿ ‘ಮದ್ಯ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮ’ಗಳ ಕುರಿತು ನಗರದ ಜೂನಿಯರ್ ಕಾಲೇಜು ಆವರಣದಲ್ಲಿರುವ ಬಿ.ಆರ್.ಸಿ. ಕೇಂದ್ರದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಗಿಡಕ್ಕೆ ನೀರೆರೆಯುವ ಮೂಲಕ ಹಾಗೂ ರಾಜ್ಯ ಮದ್ಯಪಾನ ಸಂಯಮ ಮಂಡಳಿ ವತಿಯಿಂದ ಹೊರತರಲಾಗಿರುವ ಕೈಪಿಡಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಗಾಂಜಾ, ಹೆರಾಯಿನ್ ಮತ್ತಿತರ ಮಾದಕ ವಸ್ತುಗಳ ಮಾರಾಟ ಅಥವಾ ಸೇವನೆ ತುಂಬಾ ಕೆಟ್ಟದ್ದು, ಇದರ ಸಹವಾಸಕ್ಕೆ ಹೋಗಬಾರದು. ಮಾದಕ ವಸ್ತುಗಳ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಕಾನೂನು ತುಂಬಾ ಕಠಿಣವಾಗಿದ್ದು, ಮಾದಕ ವಸ್ತುಗಳ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ 20 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಕಾನೂನಿನ ಅರಿವು ಸಹ ಅತಿ ಮುಖ್ಯ ಎಂದು ಹೇಳಿದರು.
ಮದ್ಯಪಾನ ಮಾಡುವದರಿಂದ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಕಾಗುತ್ತದೆ. ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಕೆಟ್ಟ ಚಟಗಳಿಂದ ದೂರವಿರಬೇಕು ಎಂದು ಹೇಳಿದರು.
“ಮಾದಕ ವಸ್ತುಗಳ ಚಟುವಟಿಕೆ ಅಥವಾ ಯಾವದೇ ರೀತಿಯ ಅಪರಾಧ, ಸಂಚಾರ ಸುವ್ಯವಸ್ಥೆ ಇತರೆ ಚಟುವಟಿಕೆಗಳ ಬಗ್ಗೆ ಮಾಹಿತಿ/ಸಲಹೆ ಪಡೆಯುವಂತಾಗಲು ಜಿಲ್ಲೆಯ 60 ಕಾಲೇಜುಗಳಲ್ಲಿ ‘ಸಲಹಾ ಪೆಟ್ಟಿಗೆ’ ಇಡಲಾಗುವದು” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇದೇ ಸಂದರ್ಭ ತಿಳಿಸಿದರು.
ಮಾದಕ ವಸ್ತುಗಳ ಮಾರಾಟ, ಸೇವನೆ ಮತ್ತಿತರ ಚಟುವಟಿಕೆ ಸಂಬಂಧ ಸಲಹಾ ಪೆಟ್ಟಿಗೆಯಲ್ಲಿ ಮಾಹಿತಿ ಒದಗಿಸಬಹುದಾಗಿದೆ. ಇದರಿಂದ ಅಕ್ರಮ ಚಟುವಟಿಕೆಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಲಿದೆ ಎಂದು ವರಿಷ್ಠಾಧಿಕಾರಿ ನುಡಿದರು.
ಮದ್ಯಪಾನ ಸಂಯಮ ಮಂಡಳಿ ನಿರ್ದೇಶಕ ಕೆ.ಎ. ಯಾಕೂಬ್ ಮಾತನಾಡಿ, ಕುಡಿತದ ಚಟದಿಂದ ಬಿಡುಗಡೆ ಎಂದರೆ ಆತ್ಮ ಶುದ್ಧಿಯ ಒಂದು ಕ್ರಮ. ಕುಡಿತಕ್ಕೆ ತುತ್ತಾಗಬಾರದು ಎಂದು ಹೇಳಿದರು.
ಬೆಳ್ತಂಗಡಿಯ ಜನಜಾಗೃತಿ ವೇದಿಕೆ ಯೋಜನಾಧಿಕಾರಿ ತಿಮ್ಮಯ್ಯ ನಾಯಕ್ ಮಾತನಾಡಿ, ಮದ್ಯಪಾನ ಸಂಯಮ ಮಂಡಳಿ ಹಾಗೂ ಧರ್ಮಸ್ಥಳ ಜನಜಾಗೃತಿ ವೇದಿಕೆಯಿಂದ ಸುಮಾರು 1040 ಜನಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಸುಮಾರು 1.20 ಲಕ್ಷ ಜನರು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಶೇ. 80 ರಷ್ಟು ಜನರು ಉತ್ತಮ ಬದುಕು ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ತಜ್ಞ ಡಾ. ಪ್ರದೀಪ್ ಮಾತನಾಡಿ, ಮದ್ಯಪಾನದಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದ್ದು, ಅಜೀರ್ಣ, ಊಟದಲ್ಲಿ ನಿರಾಸಕ್ತಿ, ದೇಹದ ಜೀವಸತ್ವಗಳ ನಾಶ, ಅರೆ ಪ್ರಜ್ಞಾ ವ್ಯವಸ್ಥೆ, ಬುದ್ದಿ ಭ್ರಮಣೆ, ಲೈಂಗಿಕ ನಿರಾಸಕ್ತಿ, ದೃಷ್ಟಿದೋಷ, ಹೃದಯ ದೌರ್ಬಲ್ಯ, ಮೂತ್ರ ಜನಕಾಂಗಗಳ ವೈಫಲ್ಯ, ಮೆದುಳು ನರ ಮಂಡಲಕ್ಕೆ ಧಕ್ಕೆ, ನಡುಕ ಮತ್ತಿತರ ರೋಗಗಳು ಬರುತ್ತವೆ ಎಂದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಉಪಾಧ್ಯಕ್ಷ ಕೆ.ಟಿ. ಬೇಬಿ ಮ್ಯಾಥ್ಯೂ ಮಾತನಾಡಿ, ಬೆಂಕಿ ದೇಹವನ್ನು ನಾಶ ಮಾಡಿದರೆ. ಕುಡಿತ ದೇಹ ಮತ್ತು ಆತ್ಮ ಎರಡನ್ನು ನಾಶ ಮಾಡುತ್ತದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ. ವೈ. ಚೈತ್ರಾ ಮಾತನಾಡಿದರು. ಕ್ಷೇತ್ರ ಸಂಪನ್ಮೂಲ ಅಧಿಕಾರಿ ಸುಕ್ರು ದೇವೇಗೌಡ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಶಿವರಾಮ್ ಇತರರು ಇದ್ದರು.
ವಾರ್ತಾಧಿಕಾರಿ ಚಿನ್ನಸ್ವಾಮಿ ಸ್ವಾಗತಿಸಿ, ವಿದ್ಯಾರ್ಥಿನಿ ರೋಹಿಣಿ ನಿರೂಪಿಸಿದರು. ಕಲಾವಿದ ಈ. ರಾಜು ವಂದಿಸಿದರು. ಕೊಡಗು ವಿದ್ಯಾ ಸಾಗರ ಕಲಾ ವೇದಿಕೆಯ ತಂಡದವರು ಕುಡಿತದ ದುಷ್ಪರಿಣಾಮಗಳ ಕುರಿತು ಹಾಡು ಹಾಡಿದರು. ಮದ್ಯ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತ ಬೀದಿನಾಟಕ ಜಾಗೃತಿ ಅಭಿಯಾನಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಅವರು ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು.