ಮಡಿಕೇರಿ, ಮಾ. 24 : ನಗರಸಭಾ ಸದಸ್ಯ ಸ್ಥಾನದಲ್ಲಿರುವ ತಜಸುಂ ಅವರ ಸುಳ್ಳು ಜಾತಿ ದೃಢೀಕರಣ ಪತ್ರಕ್ಕೆ ಸಂಬಂಧಿಸಿದಂತೆ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಮಾ.17 ರಂದು ತೀರ್ಪು ನೀಡಿದ್ದು, ಸುಳ್ಳು ಜಾತಿ ದೃಢೀಕರಣ ಪತ್ರವನ್ನು ರದ್ದುಪಡಿಸುವಂತೆ ಆದೇಶಿಸಲಾಗಿದೆ ಎಂದು ತಿಳಿಸಿರುವ ನಗರ ಬಿಜೆಪಿ ಪ್ರಮುಖರು ತಜಸುಂ ಅವರ ಸದಸ್ಯತ್ವವನ್ನು ಅನರ್ಹ ಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಜೈನಿ, ನಗರಸಭಾ ಚುಣಾವಣೆಯ ಫಲಿತಾಂಶದ ಸಂದರ್ಭ ಕಾಂಗ್ರೆಸ್‍ನ ತಜಸುಂ ಹಾಗೂ ಬಿಜೆಪಿಯ ಕಲಾವತಿ ಅವರಿಗೆ ಸಮಾನ ಮತಗಳು ದೊರೆತ ಹಿನ್ನೆಲೆಯಲ್ಲಿ ಲಾಟರಿ ಮೂಲಕ ತಜಸುಂ ಸದಸ್ಯರಾಗಿ ಆಯ್ಕೆಯಾಗಿದ್ದರು. ಬಿಸಿಎಂ(ಎ) ಸ್ಥಾನಕ್ಕೆ ಸೀಮಿತವಾಗಿದ್ದ 6ನೇ ವಾರ್ಡ್‍ನಲ್ಲಿ ಬಿಸಿಎಂ(ಬಿ)ಗೆ ಸೇರಿದ ತಜಸುಂ ಅವರು ಸ್ಪರ್ಧಿಸಿದ್ದ ಬಗ್ಗೆ ನಂತರದ ದಿನಗಳಲ್ಲಿ ಮಾಹಿತಿ ಲಭ್ಯವಾಗಿ ಸುಳ್ಳು ಜಾತಿ ದೃಢೀಕರಣ ಪತ್ರದ ಕುರಿತು ದೂರು ದಾಖಲಾಗಿತ್ತು.

ಸುಳ್ಳು ಜಾತಿ ದೃಢೀಕರಣ ಪತ್ರ ನೀಡಿದ್ದಾರೆ ಎನ್ನುವದು ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಈ ತೀರ್ಪಿನ ಹಿನ್ನೆಲೆಯಲ್ಲಿ ತಜಸುಂ ಅವರನ್ನು ಅನರ್ಹಗೊಳಿಸಿ ಕಲಾವತಿ ಅವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಬೇಕೆಂದು ಮಹೇಶ್ ಜೈನಿ ಒತ್ತಾಯಿಸಿದರು.

ಸದಸ್ಯ ಪಿ.ಡಿ.ಪೊನ್ನಪ್ಪ ಮಾತನಾಡಿ, ಜಿಲ್ಲಾಧಿಕಾರಿಗಳ ನ್ಯಾಯಾಲಯದಿಂದ ಮರು ವಿಚಾರಣೆಗಾಗಿ ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಪ್ರಕರಣವನ್ನು ಕಳುಹಿಸಿದ ನಂತರ ವಿಚಾರಣೆ ನಡೆದು ಮಾ.17 ರಂದು ತೀರ್ಪು ಹೊರಬಿದ್ದಿದೆ. ವ್ಯಾಸಂಗ ಮಾಡಿದ ಶಾಲೆಗಳಲ್ಲಿ ತಮ್ಮ ಜಾತಿ ದೃಢೀಕರಣ ಪತ್ರವನ್ನು ಕೂರ್ಗಿ, ಗೌಡ, ಮಡಿವಾಳ ಹೀಗೆ ವಿವಿಧ ರೀತಿಯಲ್ಲಿ ತಜಸುಂ ಅವರು ನೀಡಿದ್ದಾರೆ ಎಂದು ಆರೋಪಿಸಿದರು. ಇದೀಗ ಸುಳ್ಳು ಜಾತಿ ದೃಢೀಕರಣ ಪತ್ರ ಸೃಷ್ಟಿಸಿರುವದು ಸಾಬೀತಾಗಿರುವದರಿಂದ ಜಿಲ್ಲಾಧಿಕಾರಿಗಳು ತಜಸುಂ ಅವರನ್ನು ನಗರಸಭಾ ಸದಸ್ಯ ಸ್ಥಾನದಿಂದ ಅನರ್ಹ ಗೊಳಿಸಬೇಕೆಂದು ಆಗ್ರಹಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್.ರಮೇಶ್ ಮಾತನಾಡಿ, ರಾಜ್ಯ ಸರ್ಕಾರ ಹಾಗೂ ಇಲ್ಲಿಯವರೆಗೆ ಜಿಲ್ಲೆಗೆ ಬಂದ ಉಸ್ತುವಾರಿ ಸಚಿವರುಗಳ ಒತ್ತಡದಿಂದಾಗಿ ಪ್ರಕರಣ ಇತ್ಯರ್ಥ ವಿಳಂಬವಾಗಿದೆ ಎಂದು ಆರೋಪಿಸಿದರು. ನ್ಯಾಯಾಲಯ ಛೀಮಾರಿ ಹಾಕಬಹುದೆನ್ನುವ ಉದ್ದೇಶದಿಂದ ಇದೀಗ ಅಧಿಕಾರಿಗಳು ಆದೇಶ ನೀಡಿದ್ದಾರೆ ಎಂದು ಟೀಕಿಸಿದರು. ರಾಜಕೀಯ ಒತ್ತಡವಿದ್ದರೂ, ನ್ಯಾಯಕ್ಕೆ ಜಯ ಸಿಕ್ಕಿದ್ದು, ಚುನಾವಣಾಧಿಕಾರಿಗಳು ಯಾವದೇ ಒತ್ತಡಕ್ಕೆ ಮಣಿಯದೆ ತಜಸುಂ ಅವರ ಸದಸ್ಯತ್ವವನ್ನು ರದ್ದುಗೊಳಿಸಿ ಕಲಾವತಿ ಅವರನ್ನು ನೂತನ ಸದಸ್ಯರನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿದರು.

ಕಾಂಗ್ರೆಸ್ ಪ್ರಮುಖರು ತಜಸುಂ ಅವರಿಗೆ ರಾಜೀನಾಮೆ ನೀಡುವಂತೆ ಸೂಚನೆ ನೀಡಬೇಕು ಅಥವಾ ತಜಸುಂ ಅವರೇ ನ್ಯಾಯಾಲಯದ ಆದೇಶಕ್ಕೆ ತಲೆಬಾಗಿ ಖುದ್ದಾಗಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ತಜಸುಂ ಅವರ ಸದಸ್ಯತ್ವವನ್ನು ಅನರ್ಹಗೊಳಿಸುವಂತೆ ಒತ್ತಾಯಿಸಿ ಕಲಾವತಿ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದು, ನಗರ ಬಿಜೆಪಿ ಬೆಂಬಲ ಸೂಚಿಸಲಿದೆಯೆಂದು ಪೊನ್ನಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭಾ ಸದಸ್ಯರಾದ ಉಣ್ಣಿಕೃಷ್ಣನ್, ಮಾಜಿ ಸದಸ್ಯ ಉಮೇಶ್ ಸುಬ್ರಮಣಿ ಹಾಗೂ ಕಲಾವತಿ ಉಪಸ್ಥಿತರಿದ್ದರು.