ಸೋಮವಾರಪೇಟೆ, ಮಾ. 24: ಹಿಂದೂ ಹಾಗೂ ಮುಸ್ಲಿಂ ಸಮುದಾಯದ ನಡುವೆ ವಿವಾದದ ಕಿಡಿಹೊತ್ತಿಸಿರುವ ಉತ್ತರ ಪ್ರದೇಶದ ಅಯೋಧ್ಯೆ ಪ್ರಕರಣವನ್ನು ನ್ಯಾಯಾಲಯದ ಹೊರಗೆ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಸುಪ್ರೀಂ ಕೋರ್ಟ್ ನೀಡಿರುವ ಸಲಹೆಯನ್ನು ಎರಡೂ ಸಮುದಾಯಗಳು ಪಾಲಿಸಬೇಕು ಎಂದು ಕೊಡ್ಲಿಪೇಟೆಯ ಜಾಮಿಯಾ ಮಸೀದಿ ಮಾಜಿ ಅಧ್ಯಕ್ಷ, ಚೇಂಬರ್ ಆಫ್ ಕಾಮರ್ಸ್‍ನ ನಿರ್ದೇಶಕ ಎಂ.ವಿ. ಉಸ್ಮಾನ್ ಶಫಿ ಆಗ್ರಹಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆ ವಿವಾದವನ್ನು ಬಗೆಹರಿಸಿಕೊಳ್ಳಲು ಸುಪ್ರೀಂ ಕೋರ್ಟ್ ಉತ್ತಮ ಅವಕಾಶ ನೀಡಿದೆ. ಇದನ್ನು ಸ್ವಾಗತಿಸುತ್ತೇನೆ. ಧರ್ಮದ ಅಹಂ, ರಾಜಕೀಯ ಹಿತಾಸಕ್ತಿಗಳನ್ನು ಬಿಟ್ಟು ವಿವಾದವನ್ನು ಬಗೆಹರಿಸಿಕೊಳ್ಳಲು ಎಲ್ಲರೂ ಮುಂದಾಗಬೇಕು. ಈ ಬಗ್ಗೆ ದಿಟ್ಟ ನಿರ್ಧಾರ ಕೈಗೊಳ್ಳುವಂತೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆಯುವದಾಗಿ ತಿಳಿಸಿದರು.

ಜಾತಿ, ಧರ್ಮದ ಹೆಸರಿನ ಹೋರಾಟದ ಬದಲು ಎಲ್ಲರೂ ಭಾರತೀಯತೆಯನ್ನು ಮೊದಲು ಮೈಗೂಡಿಸಿಕೊಳ್ಳಬೇಕು. ದೇಶದ ಅಭಿವೃದ್ಧಿಯ ದೃಷ್ಟಿಕೋನ ಹೊಂದಬೇಕು. ಒಗ್ಗಟ್ಟಿನಿಂದ ಮಾತ್ರ ಉಜ್ವಲ ಭವಿಷ್ಯ ಸಾಧ್ಯ. ಧರ್ಮಗಳ ನಡುವಿನ ಕಂದಕಗಳಿಂದ ಸಾಮಾಜಿಕ ನೆಮ್ಮದಿ ಹಾಳಾಗುತ್ತದೆ. ಈ ಹಿನ್ನೆಲೆ ಸರ್ವೋಚ್ಛ ನ್ಯಾಯಾಲಯದ ಸಲಹೆಯನ್ನು ತಕ್ಷಣ ಪಾಲಿಸಬೇಕು ಎಂದರು.

ಗೋಷ್ಠಿಯಲ್ಲಿ ಕೊಡ್ಲಿಪೇಟೆ ಹೋಬಳಿ ವರ್ತಕರ ಸಂಘದ ಅಧ್ಯಕ್ಷ ಯತೀಶ್‍ಕುಮಾರ್ ಇದ್ದರು.