ಮಡಿಕೇರಿ, ಮಾ. 22: ಕಾಸರಗೋಡುವಿನ ಚೂರಿ ಗ್ರಾಮದ ಮಸೀದಿ ಉಸ್ತಾದ್ ಹತ್ಯೆ ಖಂಡಿಸಿ ಪಿಎಫ್‍ಐ ವತಿಯಿಂದ ಇಲ್ಲಿನ ಇಂದಿರಾಗಾಂಧಿ ವೃತ್ತದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.

ಹೊದವಾಡದ ಅಜಾದ್‍ನಗರ ನಿವಾಸಿಯಾಗಿದ್ದ ಮೃತ ರಿಯಾಜ್ ಕುಟುಂಬಕ್ಕೆ ರೂ. 25 ಲಕ್ಷ ಪರಿಹಾರ ನೀಡುವಂತೆ ಮತ್ತು ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಪ್ರತಿಭಟನಾಕಾರರು ಆಗ್ರಹಪಡಿಸಿದರು.

ಪಿಎಫ್‍ಐ ಜಿಲ್ಲಾಧ್ಯಕ್ಷ ಟಿ.ಎ. ಹಾರೀಸ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ನಗರಸಭೆಯ ಎಸ್‍ಡಿಪಿಐ ಸದಸ್ಯರು ಸೇರಿದಂತೆ ವಿವಿಧ ಸಂಘÀಟನೆಗಳ ಯುವಕರು, ದಲಿತ ಪ್ರಮುಖರು ಪಾಲ್ಗೊಂಡಿದ್ದರು.

ಕೇರಳದಲ್ಲಿ ಉದ್ಯೋಗದಲ್ಲಿರುವ ಕೊಡಗಿನ ಮುಸ್ಲಿಂ ಜನಾಂಗಕ್ಕೆ ಸೂಕ್ತ ರಕ್ಷಣೆ ಒದಗಿಸುವಂತೆಯೂ ಪ್ರತಿಭಟನಾಕಾರರು ಒತ್ತಾಯಿಸಿದರು.

ಕಾಂಗ್ರೆಸ್ ಖಂಡನೆ

ಕಾಸರಗೋಡಿನ ಚೂರಿ ಗ್ರಾಮದಲ್ಲಿ ನಡೆದ ಮದ್ರಸ ಅಧ್ಯಾಪಕರಾದ ರಿಯಾಝ್ ಮುಸ್ಲಿಯಾರ್ ಅವರ ಹತ್ಯೆ ಪ್ರಕರಣವನ್ನು ಮಡಿಕೇರಿ ನಗರ ಕಾಂಗ್ರೆಸ್ ಘಟಕ ತೀವ್ರವಾಗಿ ಖಂಡಿಸಿದೆ.

ಪತ್ರಿಕಾ ಹೇಳಿಕೆ ನೀಡಿರುವ ಕಾಂಗ್ರೆಸ್ ನಗರಾಧ್ಯಕ್ಷ ಕೆ.ಯು. ಅಬ್ದುಲ್ ರಜಾಕ್ ಹತ್ಯೆಕೋರರನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿದ್ದಾರೆ.

ಕ್ರಮ ಕೈಗೊಳ್ಳಲಿ

ಸೋಮವಾರಪೇಟೆ: ಧಾರ್ಮಿಕ ಕೇಂದ್ರಗಳ ಸುರಕ್ಷತೆಗೆ ಸರ್ಕಾರ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಸೋಮವಾರಪೇಟೆ ವಲಯದ ವಿವಿಧ ಮದರಸಾಗಳ ಒಕ್ಕೂಟವಾದ ಸುನ್ನಿ ಜಮಿಯತ್ತುಲ್ ಮುಅಲ್ಲಿಮೀನ್ ಸಂಘಟನೆಯ ಮುಖಂಡ, ಎಸ್‍ಎಸ್‍ಎಫ್ ರಾಷ್ಟ್ರೀಯ ಕಾರ್ಯದರ್ಶಿ ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಆಗ್ರಹಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಕಾಸರಗೋಡಿನಲ್ಲಿ ಕೊಡಗಿನ ರಿಯಾಜ್ ಮುಸ್ಲಿಯಾರ್ ಅವರ ಹತ್ಯೆ ಅತ್ಯಂತ ಖಂಡನೀಯವಾಗಿದ್ದು, ಧಾರ್ಮಿಕ ಕೇಂದ್ರದೊಳಗೆ ನುಗ್ಗಿ ಬರ್ಬರವಾಗಿ ಕೊಲೆ ಮಾಡಿರುವದು ಹೇಯ ಕೃತ್ಯವಾಗಿದೆ. ಇಂತಹ ಕೃತ್ಯಗಳು ಘಟಿಸದಂತೆ ಸರ್ಕಾರ ಎಲ್ಲಾ ಧಾರ್ಮಿಕ ಕೇಂದ್ರಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕಿದೆ ಎಂದರು.

ಹತ್ಯೆಯಾದ ರಿಯಾಜ್ ಮುಸ್ಲಿಯಾರ್ ಹಾಗೂ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮರಣ ಹೊಂದಿದ 7ನೇ ಹೊಸಕೋಟೆಯ ಮದ್ರಸಾ ವಿದ್ಯಾರ್ಥಿ ಮಹಮ್ಮದ್ ಇಸಾಕ್ ಅವರ ಸ್ಮರಣಾರ್ಥ ತಾ. 26 ರಂದು ಬೆಳಿಗ್ಗೆ ಜಿಲ್ಲೆಯ ಎಲ್ಲಾ ಮದ್ರಸಾಗಳಲ್ಲಿ ಪ್ರಾರ್ಥನಾ ದಿನ ಆಚರಿಸಲು ತೀರ್ಮಾನಿಸಲಾಗಿದೆ ಎಂದರು.

ಗೋಷ್ಠಿಯಲ್ಲಿ ಸುನ್ನಿ ಜಮಿಯತ್ತುಲ್ ಮುಅಲ್ಲಿಮೀನ್ ಸಂಘಟನೆಯ ತಾಲೂಕು ಅಧ್ಯಕ್ಷ ಸುಂಟಿಕೊಪ್ಪದ ರಫೀಕ್ ಸಅದಿ, ಉಪಾಧ್ಯಕ್ಷ ಅಬ್ದುಲ್ ರಜಾಕ್, ಕಾರ್ಯದರ್ಶಿ ಹಂಝ ಮುಸ್ಲಿಯಾರ್, ಸದಸ್ಯ ಮುನೀರ್ ಸಅದಿ, ಸುನ್ನಿ ಯುವಜನ ಸಂಘದ ಸಂಚಾಲಕ ಕೆ.ಎ. ಆದಂ ಅವರುಗಳು ಉಪಸ್ಥಿತರಿದ್ದರು.

ಎಸ್‍ವೈಎಸ್ ಒತ್ತಾಯ

ಅಧ್ಯಾಪಕ ಕೊಡಗಿನ ಮೂಲದ ರಿಯಾಜ್ ಮುಸ್ಲಿಯಾರ್ ಹತ್ಯೆ ಪ್ರಕರಣವನ್ನು ಎಸ್‍ಕೆಎಸ್‍ಎಸ್‍ಎಫ್ ಮತ್ತು ಎಸ್‍ವೈಎಸ್ ಸಂಘÀಟನೆ ತೀವ್ರವಾಗಿ ಖಂಡಿಸಿದೆ.

ಮದ್ರಸ ಅಧ್ಯಾಪಕರ ಕೊಲೆ ಪ್ರಕರಣ ದೇಶದ ಜಾತ್ಯತೀತತೆಯನ್ನು ಪ್ರಶ್ನಿಸಿದಂತಾಗಿದೆಯೆಂದು ಸಂಘಟನೆಯ ಪ್ರಮುಖರು ಅಭಿಪ್ರಾಯಪಟ್ಟರು.

ಮೃತ ರಿಯಾಜ್ ಮುಸ್ಲಿಯಾರ್ ಅವರ ಪರವಾಗಿ ಎಲ್ಲಾ ಮದ್ರಸಗಳಲ್ಲಿ ಹಾಗೂ ಪೋಷಕರು ವಿಶೇಷ ಪ್ರಾರ್ಥನೆ ಸಲ್ಲಿಸಬೇಕೆಂದು ಕರೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಎಸ್‍ಕೆಎಸ್‍ಎಸ್‍ಎಫ್‍ನ ಪ್ರಧಾನ ಕಾರ್ಯದರ್ಶಿ ಎಂ. ತಮ್ಲಿಕ್‍ದಾರಿಮಿ, ರಾಜ್ಯ ಸಮಿತಿ ಸದಸ್ಯರಾದ ಎನ್.ಎನ್. ಇಕ್ಬಾಲ್ ಮುಸ್ಲಿಯಾರ್, ಜಿಲ್ಲಾ ಸಮಿತಿ ಅಧ್ಯಕ್ಷರಾದ ವೈ.ಯು. ನೌಷಾದ್ ಫೈಝಿ, ಸದಸ್ಯರಾದ ಅಬ್ದುಲ್ ಅಜೀಜ್, ಎಸ್‍ವೈಎಸ್ ಜಿಲ್ಲಾ ಸಮಿತಿಯ ವೈ.ಎಂ. ಉಮ್ಮರ್ ಫೈಝಿ ಹಾಗೂ ಎಸ್‍ಕೆಜೆಎಂಸಿಸಿಯ ಕೇಂದ್ರ ಕಾರ್ಯದರ್ಶಿ ಎಂ. ಅಬ್ದುಲ್ ರೆಹೆಮಾನ್ ಮುಸ್ಲಿಯಾರ್ ಉಪಸ್ಥಿತರಿದ್ದು, ದುಷ್ಕøತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ.