ಹೌದು...ಕೊಡಗಿನ ಜನತೆಗೆ ಹಾಕಿ ಆಟದ ಸವಿಯನ್ನು ಉಣಿಸುವ ‘‘ಬಿದ್ದಾಟಂಡ ಹಾಕಿ ನಮ್ಮೆಗೆ’’ ನಡೆಯುತ್ತಿದೆ ಭರ್ಜರಿ ತಯಾರಿ. ಕೊಡವ ಕುಟುಂಬಗಳ ನಡುವಿನ 21ನೇ ವರ್ಷದ ಹಾಕಿ ಹಬ್ಬ ಬಿದ್ದಾಟಂಡ ಹಾಕಿ ನಮ್ಮೆ ಈ ಬಾರಿ ನಾಪೋಕ್ಲು ನಾಡಿನಲ್ಲಿ ಅದ್ಧೂರಿ, ಕುತೂಹಲದಿಂದ ನಡೆಯಲಿದ್ದು, ಕೊಡವ ಕುಟುಂಬಗಳು, ಕೊಡಗಿನ ಜನತೆ ನಿರೀಕ್ಷಿಸುತ್ತಿರುವ ಕ್ರೀಡಾ ಉತ್ಸವವಾಗಿದೆ.

ಕೊಡಗು ನಿಸರ್ಗ ರಮಣೀಯತೆಗೆ ಅತೀ ಪ್ರಸಿದ್ಧ, ಇದು ದೇವರ ನಾಡು, ಮಾತೆ ಕಾವೇರಿ ಹುಟ್ಟಿ ಹರಿಯುವದು ಇಲ್ಲಿಂದಲೇ, ಶೂರರು-ವೀರರು ಎನಿಸಿದ ಕೊಡವ ಜನಾಂಗದ ಕೊಡವ ಕುಟುಂಬಗಳ ನಡುವೆ ನಡೆಯುವ ಹಾಕಿ ಉತ್ಸವಕ್ಕೆ ವಿಶ್ವ ಖ್ಯಾತಿಯ, ಹಲವು ದಾಖಲೆಗಳು ಮೆರಗು, ಕೊಡಗು ಭಾರತೀಯ ಹಾಕಿಯ ಮಡಿಲು ಎಂದೇ ಕೀರ್ತಿಗಳಿಸಿವೆ. ಭಾರತ ತಂಡದಲ್ಲಿ ಕೊಡಗಿನ ಆಟಗಾರರದೇ ಪಾರುಪತ್ಯ, ಇಂತಹ ಹಾಕಿ ವೀರ ನಾಡು ಕೊಡಗಿನಲ್ಲಿ ಬಿದ್ದಾಟಂಡ ಹಾಕಿ ಹಬ್ಬ 2017 ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಲಿದೆ.

300 ತಂಡಗಳ ನಿರೀಕ್ಷೆ : ಈ ಬಾರಿ 300 ತಂಡಗಳನ್ನು ನೋಂದಾಯಿಸುವ ಗುರಿಯಿದ್ದು, ಗಿನ್ನಿಸ್ ರೆಕಾರ್ಡ್ ಬರೆಯುವ ದೂರದೃಷ್ಟಿ ಹೊಂದಲಾಗಿದೆ. ನಾಪೋಕ್ಲುವಿನಲ್ಲಿ ಈ ಹಿಂದೆ ನಡೆದ ಕಲಿಯಂಡ ಕಪ್ ಹಾಕಿ ಪಂದ್ಯಾವಳಿಯಲ್ಲಿ 281 ತಂಡಗಳು ಸಂಪೂರ್ಣವಾಗಿ ಪಾಲ್ಗೊಂಡು ದಾಖಲೆ ನಿರ್ಮಾಣವಾಗಿತ್ತು. ಕೊಡವ ಕುಟುಂಬಗಳ ನಡುವೆ ನಡೆಯಲಿರುವ ಈ ಬಿದ್ದಾಟಂಡ ಕಪ್ ಹಾಕಿ ನಮ್ಮೆಗೆ ಈಗಾಗಲೇ ಉತ್ಸವದ ಲೋಗೋ, ವೆಬ್‍ಸೈಟ್, ಬ್ರೋಷರ್ಸ್‍ಗಳ ಏರ್ಪಾಡಾಗಿದ್ದು, ಅಪಾರ ಜನಪ್ರಿಯತೆಗಳಿಸಿದೆ. ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್ ಖ್ಯಾತಿಯನ್ನು ಪಡೆದಿರುವ ಹಾಕಿ ನಮ್ಮೆ ಈ ಬಾರಿ ಹಲವಾರು ವಿಶೇಷ ಆಕರ್ಷಣೆಗಳನ್ನು ಹೊಂದಿದೆ. ಈಗಾಗಲೇ ನೋಂದಣಿ ಕಾರ್ಯ 38 ಕೇಂದ್ರಗಳಲ್ಲಿ ಆರಂಭಗೊಂಡಿದೆ. ವಾಕ್ ಓವರ್ ಇಲ್ಲದಂತೆ ಪಂದ್ಯಾಟವನ್ನು ಸಂಘಟಿಸಲು ಪ್ರಯತ್ನ ನಡೆಯುತ್ತಿದೆ.

ಪ್ರಾರಂಭ : ಬಿದ್ದಾಟಂಡ ಹಾಕಿ ನಮ್ಮೆಗೆ ಕ್ಷಣ ಗಣನೆ ನಡೆಯುತ್ತಿದೆ. ಈ ಪಂದ್ಯಾಟವು ಮುಂದಿನ ತಿಂಗಳು ಏಪ್ರಿಲ್-17ಕ್ಕೆ ಆರಂಭಗೊಳ್ಳಲಿದೆ. ಸುಮಾರು 25 ದಿನಗಳ ಕಾಲ ಹಾಕಿ ಹಬ್ಬದ ರಸದೌತಣವನ್ನು ನಾಪೋಕ್ಲುವಿನಲ್ಲಿ ಬಡಿಸಲಾಗುವದು. 30 ರಿಂದ 40 ಸಾವಿರ ಜನರಿಗೆ ವೀಕ್ಷಣೆಗೆ ಗ್ಯಾಲರಿ ಹಾಗೂ ಇತರೆ ಸ್ಥಳಾವಕಾಶ ಕಲ್ಪಿಸಲಾಗಿದೆ.

ಪ್ರಮುಖ ಅಕರ್ಷಣೆಗಳು : ಮಾಜಿ ಅಂತರ್ರಾಷ್ಟ್ರೀಯ ಆಟಗಾರ ಡಾ|| ಎ. ಬಿ. ಸುಬ್ಬಯ್ಯ ಅವರು ಭಾರತ ತಂಡವನ್ನೇ ನಾಪೋಕ್ಲು ಹಾಕಿ ಮೈದಾನದಲ್ಲಿ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಇಳಿಸಿ, ಪ್ರಸ್ತುತ ಭಾರತ ತಂಡದಲ್ಲಿ ಇರುವ ಆಟಗಾರರು ಹಾಗೂ ಕೂರ್ಗ್ ಇಲೆವೆನ್ (ಕೊಡಗು ಮೂಲದ ಆಟಗಾರರು) ಈ ತಂಡಗಳ ಮಧ್ಯೆ ಪ್ರದರ್ಶನ ಪಂದ್ಯ ಏರ್ಪಡಿಸುವ ಪ್ರಯತ್ನ ನಡೆಸಿ ದ್ದಾರೆ. ಭಾರತೀಯ ಸೇನಾ ಪ್ರಮುಖರು, ಉಸ್ತುವಾರಿ ಸಚಿವರು, ಜಿಲ್ಲಾ ಜನ ಪ್ರತಿನಿಧಿ ಗಳು ಉದ್ಘಾಟನಾ ಸಮಾರಂಭ ದಲ್ಲಿ ಪಾಲ್ಗೊಳ್ಳಲಿದ್ದಾರೆ. ಒಂದು ಮೀಸಲು ಮೈದಾನವಿದ್ದರೆ, ಮೂರು ಮೈದಾನಗಳನ್ನು ಪಂದ್ಯಾಟಕ್ಕಾಗಿ ಸಜ್ಜುಗೊಳಿಸ ಲಾಗಿದೆ. ವಾಟರ್ ಪ್ರೂಫ್ ಮೇಲ್ಚಾವಣಿ ರಕ್ಷಣಾ ಕವಚವಾಗಿ ಕಾರ್ಯ ನಿರ್ವಹಿಸುತ್ತವೆ.