ಬ್ರಿಟನ್ ಸಂಸತ್ ಬಳಿ ಶೂಟೌಟ್: 12 ಮಂದಿಗೆ ಗಾಯ

ಲಂಡನ್, ಮಾ. 22: ಇಲ್ಲಿನ ಬ್ರಿಟನ್ ಸಂಸತ್ ಹತ್ತಿರದಲ್ಲಿ ಶೂಟೌಟ್ ನಡೆದಿದ್ದು ಇದರಲ್ಲಿ ಸುಮಾರು 12 ಮಂದಿ ಗಾಯಗೊಂಡಿರುವ ಶಂಕೆಯಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ. ಸಂಸತ್ತಿನ ಆವರಣದಲ್ಲಿ ಹಾಗೂ ವೆಸ್ಟ್ ಮಿನಿಸ್ಟರ್ ಬಿಡ್ಜ್ - ಈ ಎರಡು ಕಡೆ ಶೂಟೌಟ್ ಆಗಿದೆ ಎಂದು ಬಿಬಿಸಿ ಹೇಳಿದ್ದು, ರಾಣಿಯ ಅರಮನೆಯ ಬಳಿ ವ್ಯಕ್ತಿಯೊಬ್ಬ ಪಿಸ್ತೂಲು ಹಾಗೂ ಚೂರಿಯನ್ನು ಹಿಡಿದುಕೊಂಡು ಹೋಗಿದ್ದನ್ನು ನೋಡಿರುವದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಪೊಲೀಸ್ ಒಬ್ಬನನ್ನು ಸಂಸತ್‍ನ ಒಳಗೇ ಚೂರಿಯಿಂದ ಇರಿದಿರುವದಾಗಿಯೂ ಪ್ರಧಾನಿ ತೆರೆಸಾ ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿರುವದಾಗಿಯೂ ತಿಳಿದುಬಂದಿದೆ. ಅತ್ತ, ಪೊಲೀಸರ ಹೇಳಿಕೆಯನ್ನೂ ದಾಖಲಿಸಿರುವ ಬಿಬಿಸಿ, ಅಜ್ಞಾನ ವ್ಯಕ್ತಿಗಳಿಂದ ಸಂಸತ್ತಿನ ಆವರಣದಲ್ಲಿ ಶೂಟೌಟ್ ಆಗಿದೆಯೆಂದು ಪೊಲೀಸರು ಹೇಳಿರುವುದಾಗಿ ವರದಿ ಮಾಡಿದೆ. ಉಗ್ರಗಾಮಿಯೊಬ್ಬನನ್ನು ಹತ್ಯೆಗೈದಿರುವದಾಗಿಯೂ ವರದಿ ತಿಳಿಸಿದೆ.

ಮಾಧ್ಯಮಗಳ ವಿರುದ್ಧ ಪ್ರಹಾರ

ಬೆಂಗಳೂರು, ಮಾ. 22: ಸತತ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಮಾಧ್ಯಮಗಳ ಅದರಲ್ಲೂ ಪ್ರಮುಖವಾಗಿ ದೃಶ್ಯ ಮಾಧ್ಯಮಗಳ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆಯಿತು. ದೃಶ್ಯ ಮಾಧ್ಯಮಗಳಲ್ಲಿ ಶಾಸಕರಿಗೆ ಅಪಮಾನ ಆರೋಪ ವಿಚಾರದ ಬಗ್ಗೆ ವಿಧಾನಸಭೆಯಲ್ಲಿ ನಿಯಮ 69 ರ ಅಡಿಯಲ್ಲಿ ಚರ್ಚೆ ನಡೆದು ಪಕ್ಷೇತರ ಶಾಸಕ ಬಿ.ಆರ್ ಪಾಟೀಲ್,ಕೆ.ಎಸ್.ಪುಟ್ಟಣ್ಣಯ್ಯ, ಹೆಚ್.ಸಿ. ಬಾಲಕೃಷ್ಣ, ಅಖಂಡ ಶ್ರೀನಿವಾಸ್ ಮೂರ್ತಿ, ಜಮ್ಮೀರ್ ಅಹ್ಮದ್ ಖಾನ್ ವಿಷಯ ಪ್ರಸ್ತಾಪಿಸಿದ್ದು ಇನ್ನೂ ಅನೇಕ ಶಾಸಕರು ಇದಕ್ಕೆ ದನಿಗೂಡಿಸಿದರು. ಶಾಸಕರ ವ್ಯಕ್ತಿತ್ವಕ್ಕೆ ಚ್ಯುತಿ ತರುವಂಥ ಅವಹೇಳನಕಾರಿ ಸುದ್ದಿ ಪ್ರಸಾರ ಮಾಡುತ್ತಿದ್ದಾರೆ ಎಂದು ವಿಷಯ ಪ್ರಸ್ತಾಪಗೊಂಡಿತು. ಮಾಧ್ಯಮಗಳ ಮೇಲೆ ಹಿಡಿತ ಸಾಧಿಸಲು ಕಾನೂನು ತರಲು ಸದನ ಸಮಿತಿ ರಚಿಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಹದಿನೈದು ದಿನಗಳಲ್ಲಿ ಸದನ ಸಮಿತಿ ವರದಿ ನೀಡಬೇಕು ಎಂದು ಸ್ಪೀಕರ್ ಕೋಳಿವಾಡ ಸದನದಲ್ಲಿ ಘೋಷಿಸಿದರು.

ಉತ್ತರ ಪ್ರದೇಶದಲ್ಲಿ ಕಸಾಯಿಖಾನೆಗಳು ಬಂದ್

ಲಖನೌ, ಮಾ. 22: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದಲ್ಲಿರುವ ಕಸಾಯಿಖಾನೆಗಳನ್ನು ಬಂದ್ ಮಾಡುವಂತೆ ಮತ್ತು ಗೋವುಗಳ ಕಳ್ಳಸಾಗಣೆಯನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ರಾಜ್ಯಾದ್ಯಂತ ಇರುವ ಕಸಾಯಿಖಾನೆಗಳನ್ನು ಬಂದ್ ಮಾಡಲು ಕಾರ್ಯಯೋಜನೆ ರೂಪಿಸುವಂತೆ ಯೋಗಿ ಆದಿತ್ಯನಾಥ್ ಅವರು ಪೆÇಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ ಯಾವ ರೀತಿಯ ಕಸಾಯಿಖಾನೆಗಳನ್ನು ಬಂದ್ ಮಾಡಲಾಗುತ್ತಿದೆ ಎಂಬದರ ಬಗ್ಗೆ ಅಧಿಕಾರಿಗಳು ಸ್ಪಷ್ಟವಾಗಿ ತಿಳಿಸಿಲ್ಲ. ವಿಧಾನಸಭೆ ವೇಳೆ ಬಿಜೆಪಿ ಬಿಡುಗಡೆ ಮಾಡಿದ್ದ ಚುನಾವಣಾ ಪ್ರಣಾಳಿಕೆಯಲ್ಲಿ ರಾಜ್ಯದಲ್ಲಿರುವ ಅಕ್ರಮ ಕಸಾಯಿಖಾನೆಗಳನ್ನು ಬಂದ್ ಮಾಡಲಾಗುವದು ಮತ್ತು ಯಾಂತ್ರಿಕೃತ ಕಸಾಯಿಖಾನೆಗಳನ್ನು ಸಂಪೂರ್ಣ ಬಂದ್ ಮಾಡುವದಾಗಿ ಭರವಸೆ ನೀಡಲಾಗಿತ್ತು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಹ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಕಸಾಯಿಖಾನೆಗಳನ್ನು ಬಂದ್ ಮಾಡಲಾಗುವದು ಎಂದು ಚುನಾವಣಾ ರ್ಯಾಲಿಯಲ್ಲಿ ಹೇಳಿದ್ದರು. ಇದೀಗ ಅದನ್ನು ಜಾರಿಗೆ ತಂದಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ, ಸಮಾಜ ವಿರೋಧಿ ಕೃತ್ಯಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪೆÇಲೀಸರಿಗೆ ಆದೇಶಿಸಿದ್ದಾರೆ.

ಟ್ರಕ್ ಸ್ಕ್ಯಾನರ್ ಖರೀದಿಗೆ ಕೇಂದ್ರ ಚಾಲನೆ

ನವದೆಹಲಿ, ಮಾ. 22: ಗಡಿಯಲ್ಲಿನ ಚೆಕ್ ಪೆÇೀಸ್ಟ್‍ಗಳಲ್ಲಿ ಅನುಷ್ಠಾನಗೊಳಿಸಲು ಐದು ಟ್ರಕ್ ಸ್ಕ್ಯಾನರ್‍ಗಳನ್ನು ಖರೀದಿಸುವ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ರಾಜ್ಯಸಭೆಗೆ ತಿಳಿಸಿದೆ. ಇವುಗಳನ್ನು ಪಂಜಾಬಿನ ಅತ್ತರಿ ಮತ್ತಿ ಭಾರತ-ಪಾಕಿಸ್ತಾನ ಗಡಿಗಳಲ್ಲಿ ನಿಯೋಜಿಸಲಾಗುವದು ಎಂದು ತಿಳಿಯಲಾಗಿದೆ. ಲಿಖಿತ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಕಿರೇನ್ ರಿಜಿಜು, ಈ ಸ್ಕ್ಯಾನರ್‍ಗಳನ್ನು ಜಮ್ಮು-ಕಾಶ್ಮೀರದ ನಿಯಂತ್ರಣ ಗಡಿಯಲ್ಲಿರುವ ಉರಿ-ಇಸ್ಲಾಮಾಬಾದ್, ಪೂಂಚ್-ಚಕನ್-ದ-ಭಾಗ್ ಚೆಕ್ ಪೆÇೀಸ್ಟ್ ಗಳು, ಭಾರತ-ನೇಪಾಳ ಗಡಿಯಲ್ಲಿನ ರಾಕ್ಸೌಲ್ ಗಡಿ ಮತ್ತು ಭಾರತ-ಬಾಂಗ್ಲಾದೇಶದ ಪೆಟ್ರಾಪೆÇೀಲ್ ಗಡಿಯಲ್ಲಿ ಕೂಡ ನಿಯೋಜಿಸುವದಾಗಿ ತಿಳಿಸಿದ್ದಾರೆ. “ಈ ಸ್ಕ್ಯಾನರ್‍ಗಳನ್ನು ಕೊಳ್ಳಲು ಸರ್ಕಾರ ಜಾಗತಿಕ ಟೆಂಡರ್ ಕರೆದಿದೆ.

ಎಸ್.ಎಂ. ಕೃಷ್ಣ ಬಿಜೆಪಿಗೆ ಅಧಿಕೃತ ಸೇರ್ಪಡೆ

ನವದೆಹಲಿ, ಮಾ. 22: ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ಬುಧವಾರ ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇಂದು ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಅಮಿತ್ ಶಾ ಅವರು ಎಸ್.ಎಂ. ಕೃಷ್ಣ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಈ ವೇಳೆ ಕೇಂದ್ರ ಸಚಿವರಾದ ಅನಂತ್ ಕುಮಾರ್, ಡಿ.ವಿ. ಸದಾನಂದಗೌಡ, ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್ ಅವರು ಉಪಸ್ಥಿತರಿದ್ದರು.

ಬರ ರಾಜ್ಯಗಳ ಕಾರ್ಯದರ್ಶಿಗಳಿಗೆ ಸುಪ್ರೀಂ ನೋಟೀಸ್

ನವದೆಹಲಿ, ಮಾ. 22: ಕರ್ನಾಟಕ ಸೇರಿದಂತೆ 10 ರಾಜ್ಯಗಳ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಬರಗಾಲ ಕುರಿತ ಕೇಸಿಗೆ ಸಂಬಂಧಪಟ್ಟಂತೆ ಏಪ್ರಿಲ್ 26 ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ಬುಧವಾರ ಸಮನ್ಸ್ ಹೊರಡಿಸಿದೆ. ಬರಪೀಡಿತ ರಾಜ್ಯಗಳ ಜನರಿಗೆ ಸರಿಯಾದ ಪುನರ್ವಸತಿ ಸೌಕರ್ಯ ಮತ್ತು ಹಣಕಾಸು ನೆರವು ಒದಗಿಸುವಂತೆ ಸ್ವರಾಜ್ ಅಭಿಯಾನ ಎಂಬ ಸರ್ಕಾರೇತರ ಸಂಘಟನೆ ಸಲ್ಲಿಸಿದ ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶವನ್ನು ಜಾರಿ ಮಾಡಿದೆ. ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ ತೆಲಂಗಾಣ, ಗುಜರಾತ್, ಛತ್ತೀಸ್ ಗಢ, ಹರ್ಯಾಣ, ಮಧ್ಯ ಪ್ರದೇಶ, ಬಿಹಾರ, ಜಾರ್ಖಂಡ್ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ನೊಟೀಸ್ ಜಾರಿ ಮಾಡಲಾಗಿದೆ.

ಗಲ್ಲು ಶಿಕ್ಷೆ ಕೈಬಿಡಲು ಕಾನೂನು ಆಯೋಗ ಶಿಫಾರಸ್ಸು

ನವದೆಹಲಿ, ಮಾ. 22: ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣಗಳನ್ನು ಹೊರತುಪಡಿಸಿ ಇತರ ಪ್ರಕರಣದಲ್ಲಿ ಗಲ್ಲು ಶಿಕ್ಷೆಯನ್ನು ಕೈಬಿಡುವಂತೆ ಕಾನೂನು ಆಯೋಗ ಶಿಫಾರಸು ಮಾಡಿರುವದಾಗಿ ಕೇಂದ್ರ ಸರ್ಕಾರ ಬುಧವಾರ ರಾಜ್ಯಸಭೆಗೆ ತಿಳಿಸಿದೆ. ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣಗಳನ್ನು ಹೊರತುಪಡಿಸಿ ಇತರೆ ಎಲ್ಲಾ ರೀತಿಯ ಅಪರಾಧ ಪ್ರಕರಣಗಳಲ್ಲೂ ಗಲ್ಲು ಶಿಕ್ಷೆಯನ್ನು ಕೈಬಿಡಬೇಕು ಎಂದು ಕಾನೂನು ಆಯೋಗ ತನ್ನ 262ನೇ ವರದಿಯಲ್ಲಿ ಶಿಫಾರಸು ಮಾಡಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹನ್ಸರಾಜ್ ಅಹಿರ್ ಅವರು ಇಂದು ರಾಜ್ಯಸಭೆಗೆ ತಿಳಿಸಿದ್ದಾರೆ. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಕ್ರಿಮಿನಲ್ ಕಾನೂನು ಅಪರಾಧ ಪ್ರಕ್ರಿಯೆ ಸಂವಿಧಾನದ 7ನೇ ವಿಧಿಯ ಸಮವರ್ತಿ ಪಟ್ಟಿಯಲ್ಲಿ ಬರುವದರಿಂದ, ಕಾನೂನು ಆಯೋಗದ ಈ ಶಿಫಾರಿಸಿನ ಬಗ್ಗೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಅಭಿಪ್ರಾಯ ಪಡೆಯಲಾಗುವದು ಎಂದು ಹೇಳಿದ್ದಾರೆ.

ಐವರು ನಕ್ಸಲರ ಬಂಧನ : ಯೋಧ ಹುತಾತ್ಮ

ಛತ್ತೀಸ್‍ಗಢ, ಮಾ. 22: ಛತ್ತೀಸ್‍ಗಢದ ಜಗ್ದಾಲ್ ಪುರ ಹಾಗೂ ಬಿಜಾಪುರ ಜಿಲ್ಲೆಗಳಲ್ಲಿ ಭಾರತೀಯ ಸೇನಾ ಪಡೆ ಕಾರ್ಯಾಚರಣೆಯನ್ನು ನಡೆಸಿದ್ದು, ಕಾರ್ಯಾಚರಣೆ ವೇಳೆ ಐವರು ನಕ್ಸಲರನ್ನು ಬಂಧನಕ್ಕೊಳಪಡಿಸಲಾಗಿದೆ. ಭಾರತೀಯ ಸೇನಾ ಪಡೆ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಐವರು ನಕ್ಸಲರು ಶರಣಾಗತಿಯಾಗಿದ್ದಾರೆ. ಅಲ್ಲದೆ, ಇಬ್ಬರು ಯೋಧರಿಗೆ ಗಾಯವಾಗಿದೆ. ಬಿಜಾಪುರ ಜಿಲ್ಲೆಯಲ್ಲಿಯೂ ಯೋಧರು ಕಾರ್ಯಾಚರಣೆಯನ್ನು ನಡೆಸಿದ್ದು, ಕಾರ್ಯಾಚರಣೆ ವೇಳೆ ಓರ್ವ ಯೋಧ ಹುತಾತ್ಮರಾಗಿದ್ದಾರೆ.