ವೀರಾಜಪೇಟೆ, ಮಾ. 21: ಕೊಡವ ಹಾಕಿ ಅಕಾಡೆಮಿಯ ವಾರ್ಷಿಕ ಸಭೆಯು ತಾ. 26 ರಂದು ಬೆಳಿಗ್ಗೆ 10.30 ಗಂಟೆಗೆ ಸ್ಥಾಪಕ ಹಾಗೂ ಜೀವಾವಧಿ ಅಧ್ಯಕ್ಷ ಪಾಂಡಂಡ ಎಂ. ಕುಟ್ಟಪ್ಪ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಲಿದೆ ಎಂದು ಅಕಾಡೆಮಿಯ ಕಾರ್ಯದರ್ಶಿ ಅಮ್ಮಣಿಚಂಡ ರವಿ ಉತ್ತಪ್ಪ ತಿಳಿಸಿದ್ದಾರೆ.

ಕೊಡವ ಹಾಕಿ ಅಕಾಡೆಮಿ ವತಿಯಿಂದ ಕರೆದಿದ್ದ ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ರವಿ ಉತ್ತಪ್ಪ, 2017ರ ಬಿದ್ದಾಟಂಡ ಕುಟುಂಬದ ಹಾಕಿ ಉತ್ಸವ ನಾಪೋಕ್ಲುವಿನಲ್ಲಿ ಹಾಗೂ 2018ರಲ್ಲಿ ಕುಲ್ಲೇಟಿರ ಕುಟುಂಬದ ಹಾಕಿ ಉತ್ಸವ ಕೂಡ ನಾಪೋಕ್ಲುವಿನಲ್ಲಿ ನಡೆಯಲಿದೆ. ಅಕಾಡೆಮಿಯಲ್ಲಿ ಇನ್ನು ನೋಂದಣಿಯಾಗದ ಕುಟುಂಬಗಳು ಮಹಾ ಸಭೆಯ ಸಂದರ್ಭದಲ್ಲಿ ನೋಂದಣಿ ಮಾಡಿಕೊಳ್ಳಬೇಕು, ನವೀಕರಣ ಮಾಡದ ಕುಟುಂಬಗಳು ನವೀಕರಣ ಮಾಡಿಕೊಳ್ಳಬೇಕು. ಕೊಡವ ಹಾಕಿ ಅಕಾಡೆಮಿಯ ಹಾಕಿ ಉತ್ಸವದಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಿರುವ ಮುಕ್ಕಾಟಿರ (ಹರಿಹರ ಗ್ರಾಮ), ಆದೇಂಗಡ, ಅಪ್ಪಚ್ಚೆಟ್ಟೊಳಂಡ, ಕಲ್ಮಾಡಂಡ, ಮಂಡೀರ, ಚೌರೀರ ಕೊಡವ ಕುಟುಂಬಗಳಿಗೆ ಆದ್ಯತೆ ಮೇರೆ ಹಾಕಿ ಉತ್ಸವಕ್ಕೆ ಅವಕಾಶ ನೀಡಲಾಗುವದು ಎಂದು ಹೇಳಿದರು. ಕೊಡಗಿನಲ್ಲಿಯೂ ಹಾಕಿ ಪಂದ್ಯಾಟಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೊಡವ ಹಾಕಿ ಅಕಾಡೆಮಿ ವಿವಿಧ ಯೋಜನೆ ಗಳನ್ನು ರೂಪಿಸಿ ಕಾರ್ಯ ರೂಪಕ್ಕೆ ತರಲು ಚಿಂತನೆ ನಡೆಸಿದೆ ಎಂದು ರವಿ ಉತ್ತಪ್ಪ ತಿಳಿಸಿದರು.

ಗೋಷ್ಠಿಯಲ್ಲಿ ಅಕಾಡೆಮಿಯ ಕಾರ್ಯಾಧ್ಯಕ್ಷ ಕಾಳೆಂಗಡ ರಮೇಶ್ ಕಾರ್ಯಪ್ಪ, ಕ್ಯಾಟಿ ಉತ್ತಪ್ಪ ಹಾಜರಿದ್ದರು.