ನಾಪೋಕ್ಲು, ಮಾ. 21: ಕೇರಳದ ಕಾಸರಗೋಡುವಿನಲ್ಲಿ ಉಸ್ತಾದ್ (ಮೌಲ್ವಿ) ಆಗಿದ್ದ ಕೊಡಗಿನ ವ್ಯಕ್ತಿಯೊಬ್ಬರು ನಿನ್ನೆ ರಾತ್ರಿ ಮಸೀದಿಯೊಂದರ ವಸತಿ ಗೃಹದಲ್ಲಿ ಬರ್ಬರವಾಗಿ ಹತ್ಯೆಗೀಡಾಗಿರುವ ದುರ್ಘಟನೆ ಸಂಭವಿಸಿದೆ. ಹೊದವಾಡ ಗ್ರಾಮದ ಆಜಾದ್ನಗರ ನಿವಾಸಿ ಸುಲೇಮಾನ್ ಎಂಬವರ ಪುತ್ರ ರಿಯಾಜ್ (34) ಎಂಬವರೇ ಮೃತ ದುರ್ದೈವಿಯಾಗಿದ್ದಾರೆ.ರಿಯಾಜ್ ಅವರು ಕಳೆದ 8 ವರ್ಷಗಳಿಂದ ಕಾಸರಗೋಡುವಿನ ಚೂರಿ ಗ್ರಾಮದ ಮಸೀದಿಯೊಂದರಲ್ಲಿ ಉಸ್ತಾದ್ ಆಗಿದ್ದರೆಂದು ತಿಳಿದು ಬಂದಿದೆ. ತಾ. 20 ರಂದು ರಾತ್ರಿ ಸುಮಾರು 10.30 ಗಂಟೆಗೆ ಮಸೀದಿ ಪಕ್ಕದ ವಸತಿ ಗೃಹದಲ್ಲಿ ತಂಗಿದ್ದ ಹಿರಿಯ ಉಸ್ತಾದ್ವೊಬ್ಬರ ಕೊಠಡಿ ಬಾಗಿಲನ್ನು ದುಷ್ಕರ್ಮಿಗಳ ಗುಂಪೊಂದು ತೆರೆಯುವಂತೆ ಒತ್ತಡ ಹಾಕಿದೆ. ಈ ವೇಳೆ ಅವರು ಬಾಗಿಲು ತೆರೆಯಲಿಲ್ಲವೆಂದು ಗೊತ್ತಾಗಿದೆ. ಈ ಸಂದರ್ಭ ಪಕ್ಕದ ಕೊಠಡಿಯ ಬಾಗಿಲು ಬಡಿದಾಗ ಅಲ್ಲಿ ತಂಗಿದ್ದ ರಿಯಾಜ್ ಅವರು ಎದುರಾಗಲಿದ್ದ ಅಪಾಯವನ್ನರಿಯದೇ ಬಾಗಿಲು ತೆರೆದಿದ್ದಾರೆ. ಅಷ್ಟರಲ್ಲಿ ನಾಲ್ಕೈದು ಮಂದಿ ದುಷ್ಕರ್ಮಿಗಳ ತಂಡ ಕಲ್ಲಿನಿಂದ ಹೊಡೆದು ಮಾರಕಾಸ್ತ್ರಗಳಿಂದ ಕುತ್ತಿಗೆ ಭಾಗಕ್ಕೆ ಕಡಿದು ಕೊಲೆಗೈದಿರುವದಾಗಿ ತಿಳಿದು ಬಂದಿದೆ. ರಿಯಾಜ್ ಅವರ ಬೊಬ್ಬೆ ಕೇಳಿ ಅಕ್ಕಪಕ್ಕದವರು ಓಡಿ ಬರುವಷ್ಟರಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕಾಸರಗೋಡು ಠಾಣೆ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಮೃತ ರಿಯಾಜ್ ತಂದೆ, ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದು, ಕಾಸರಗೋಡುವಿನಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಹುಟ್ಟೂರಿಗೆ ಮೃತದೇಹವನ್ನು ತಂದು ಇಸ್ಲಾಂ ವಿಧಿ ವಿಧಾನದೊಂದಿಗೆ ಅಂತಿಮ ಸಂಸ್ಕಾರ ನಡೆಸಲಾಯಿತು.
ಈ ಸಂದರ್ಭ ನಾಪೋಕ್ಲು ಹಾಗೂ ಸುತ್ತಮುತ್ತಲಿನ ಮುಸ್ಲಿಮರು ಸಂತಾಪ ಸೂಚಕವಾಗಿ ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ್ದರು.