ಶ್ರೀಮಂಗಲ, ಮಾ. 21: ಜಿಲ್ಲೆ ಸತತವಾಗಿ 2ನೇ ವರ್ಷ ಬರಗಾಲಕ್ಕೆ ತುತ್ತಾಗಿದ್ದು ಎಲ್ಲೆಡೆ ನೀರಿನ ಅಭಾವ ಕಾಣಿಸಿಕೊಂಡಿದೆ. ಆದ್ದರಿಂದ ನೀರಿನ ಬವಣೆ ತಪ್ಪಿಸಲು ಮಿತವ್ಯಯವಾಗಿ ನೀರು ಬಳಸುವ ಮೂಲಕ ಬರಗಾಲದ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧರಾಗಬೇಕೆಂದು ಜಿ.ಪಂ. ಸದಸ್ಯ ಮುಕ್ಕಾಟಿರ ಶಿವು ಮಾದಪ್ಪ ಹೇಳಿದರು.ಕುಟ್ಟ ಪಟ್ಟಣದ ಬಸ್ ನಿಲ್ದಾಣದಲ್ಲಿ ರಾಜ್ಯ ಸರಕಾರದ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ವತಿಯಿಂದ ರೂ. 10 ಲಕ್ಷ ಹಾಗೂ ಕುಟ್ಟ ಗ್ರಾ.ಪಂ.ನಿಂದ 3 ಲಕ್ಷ ಒಟ್ಟು 13 ಲಕ್ಷ ಅನುದಾನದಲ್ಲಿ ನೂತನ ತಂತ್ರಜ್ಞಾನದಲ್ಲಿ ನಿರ್ಮಿಸ ಲಾಗಿರುವ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಕುಟ್ಟ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ 10 ವರ್ಷದ ಹಿಂದೆ 100-150 ಅಡಿಯಲ್ಲಿ ಬೋರ್‍ವೆಲ್ ಮೂಲಕ ನೀರು ದೊರೆಯುತ್ತಿತ್ತು. ಇದೀಗ 450 ರಿಂದ 500 ಅಡಿ ಕೊರೆದರೂ ನೀರು ದೊರೆಯುತ್ತಿಲ್ಲ. ಅಂತರ್ಜಲ ತೀವ್ರವಾಗಿ ಕುಸಿಯುತ್ತಿದ್ದು, ನೀರಿನ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು. ಈ ನೀರಿನ ಘಟಕ ಕೇವಲ ಕುಡಿಯುವ ನೀರಿಗಾಗಿ ಮಾತ್ರ ಬಳಕೆ ಮಾಡಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ತಾ.ಪಂ. ಸದಸ್ಯ ಪೊಯಿಲೇಂಗಡ ಪಲ್ವೀನ್ ಪೂಣಚ್ಚ ಅವರು ಪ್ರತಿಯೊಬ್ಬ ಸಾಮಾನ್ಯ ಪ್ರಜೆಗೆ ಶುದ್ದ ಕುಡಿಯುವ ನೀರನ್ನು ನೀಡಬೇಕು ಎನ್ನುವದು ಸರಕಾರದ ಧ್ಯೇಯೋದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪನೆಯಾಗಿದೆ. ಪ್ರತಿಯೊಬ್ಬರು ನೀರು ಪೋಲಾಗದಂತೆ ಎಚ್ಚರ ವಹಿಸಬೇಕೆಂದು ಹೇಳಿದರು.
ಮತ್ತೋರ್ವ ಮುಖ್ಯ ಅತಿಥಿ ಫೆಡರೇಷನ್ ಆಫ್ ಕೊಡವ ಸಮಾಜ ಹಾಗೂ ಕುಟ್ಟ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರು ಮಳೆ ಕೊಯ್ಲು ಅಂತರ್ಜಲ ವೃದ್ಧಿಸಲು ಪರಿಣಾಮಕಾರಿಯಾಗಿದೆ ಎಂದರು. ಕುಟ್ಟ ಗ್ರಾ.ಪಂ. ವ್ಯಾಪ್ತಿ ಹಾಗೂ ಪಟ್ಟಣಕ್ಕೆ ಯಾರಿಗೆ ಬೇಕಾದರೂ ಕುಡಿಯುವ ನೀರು ನೀಡಲು ಕುಟ್ಟ ಕೊಡವ ಸಮಾಜ ಸಿದ್ಧವಿದೆ. ಅಲ್ಲದೇ ವಿದ್ಯುತ್ ಕಡಿತವಾದ ಸಂದರ್ಭದಲ್ಲೂ ಜನರೇಟರ್ ಮೂಲಕ ಬೇಕಾದವರಿಗೆ ನೀರು ಒದಗಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮುಕ್ಕಾಟಿರ ನವೀನ್ ಅಯ್ಯಪ್ಪ ಮಾತನಾಡಿ, ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಮಿತವ್ಯಯವಾಗಿ ನೀರು ಬಳಸಬೇಕು. ಇಲ್ಲಿ ಶುಚಿತ್ವವನ್ನು ಕಾಪಾಡಿಕೊಂಡಾಗ ಮಾತ್ರ ಈ ಘಟಕದ ಸೌಲಭ್ಯವನ್ನು ಎಲ್ಲರೂ ಪಡೆದುಕೊಳ್ಳಲು ಮುಂದಾಗುತ್ತಾರೆ ಎಂದು ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಟ್ಟ ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ ಅವರು, ಗ್ರಾಮದ ಅಭಿವೃದ್ಧಿಗೆ ಸಾರ್ವಜನಿಕರು ಗ್ರಾ.ಪಂ.ನೊಂದಿಗೆ ಕೈ ಜೋಡಿಸಿದಾಗ ಮಾತ್ರ ಯಶಸ್ಸು ಸಾಧ್ಯ ಎಂದರು.
ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಹೊಟ್ಟೇಂಗಡ ಪ್ರಕಾಶ್ ಉತ್ತಪ್ಪ, ಶ್ರೀ ಕೃಷ್ಣ ದೇವಸ್ಥಾನದ ಅಧ್ಯಕ್ಷ ಮುಕ್ಕಾಟಿರ ಕೆ. ಮಂದಣ್ಣ, ನಿರ್ಮಲ ಮಾತೆ ಚರ್ಚ್‍ನ ಫಾದರ್ ಲೂರ್ದು ಪ್ರಸಾದ್, ಜಮಾಯತ್ ಮಹಾಲ್ ಕಮಿಟಿಯ ಟಿ. ಮೊಯ್ದಿನ್, ಕುಟ್ಟ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದ ಡಾ. ಸತೀಶ್, ಕುಟ್ಟ ಎಸ್.ಎನ್.ಡಿ.ಪಿ.ಉ ಪಿ.ಆರ್. ಮೋಹನ್ ದಾಸ್, ತಮಿಳು ಸಂಘದ ಅಧ್ಯಕ್ಷ ಮುತ್ತಯ್ಯ, ದ.ಸಂ.ಸ.ದ ಗ್ರಾಮ ಸಂಚಾಲಕ ಶಶಿ ಕುಮಾರ್, ಜಿ.ಪಂ.ನ ನಿರ್ಮಲ ಭಾರತ್ ಅಭಿಯಾನದ ನೋಡಲ್ ಅಧಿಕಾರಿ ಅಜ್ಜಿಕುಟ್ಟಿರ ಸೂರಜ್, ತಾಲೂಕು ಅಕ್ರಮ ಸಕ್ರಮ ಸದಸ್ಯ ಹೆಚ್.ವೈ. ರಾಮಕೃಷ್ಣ ಹಾಜರಿದ್ದರು. ಪಿ.ಡಿ.ಒ ಬಲರಾಮೇಗೌಡ ಸ್ವಾಗತಿಸಿ, ಹೆಚ್.ವೈ ರಾಮಕೃಷ್ಣ ವಂದಿಸಿದರು.