ಸೋಮವಾರಪೇಟೆ, ಮಾ. 22: ಸಮೀಪದ ಐಗೂರು ಗ್ರಾಮದಲ್ಲಿ 800ಕ್ಕೂ ಅಧಿಕ ಮತದಾರರಿದ್ದು, 1500ಕ್ಕೂ ಅಧಿಕ ಮಂದಿ ವಾಸಿಸುತ್ತಿ ದ್ದಾರೆ. ಆದರೆ ಗ್ರಾಮಕ್ಕೆ ಸಂಬಂಧಿಸಿ ದಂತೆ ಸ್ಮಶಾನ ಇಲ್ಲದಿರುವದರಿಂದ ಮುಂದಿನ ದಿನಗಳಲ್ಲಿ ಮುಖ್ಯ ರಸ್ತೆಯಲ್ಲಿಯೇ ಶವ ಸಂಸ್ಕಾರ ಮಾಡುವದಾಗಿ ಗ್ರಾಮಸ್ಥರು ಬೆದರಿಕೆ ಹಾಕಿದ್ದಾರೆ.
ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಸೇರಿದಂತೆ ಇನ್ನಿತರ ಜಾತಿಯವರು ವಾಸಿಸುತ್ತಿದ್ದಾರೆ. ಸುಮಾರು 250 ಕುಟುಂಬಗಳಿರುವ ಈ ಗ್ರಾಮದಲ್ಲಿ 800 ಮತದಾರರಿದ್ದಾರೆ. ಆದರೆ, ಈ ಗ್ರಾಮದಲ್ಲಿ ಸ್ಮಶಾನವಿಲ್ಲದೆ ಗ್ರಾಮಸ್ಥರು ಪರದಾಡುತ್ತಿದ್ದು ಇದನ್ನು ಪರಿಹರಿ ಸುವಂತೆ ತಹಶೀಲ್ದಾರ್ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವದೇ ಪ್ರಯೋಜ ನವಾಗಿಲ್ಲ ಎಂದು ಆರೋಪಿಸಿದರು.
ಮುಂದಿನ ಒಂದು ತಿಂಗಳ ಒಳಗೆ ಸಮಸ್ಯೆ ಪರಿಹರಿಸದಿದ್ದಲ್ಲಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಮಿತಿ ಅಧ್ಯಕ್ಷ ಕೆ.ಪಿ. ದಿನೇಶ್ ಮಾತನಾಡಿ, ಈ ಹಿಂದೆ ಐಗೂರು ಗ್ರಾಮದ ಚೆಂಡುಬಾಣೆಯಲ್ಲಿ ಮೃತಪಟ್ಟವರನ್ನು ಅಂತ್ಯ ಸಂಸ್ಕಾರ ಮಾಡಲಾಗುತ್ತಿತ್ತು. ಆದರೆ, ಆ ಸ್ಥಳವೂ ಅತಿಕ್ರಮಣಕ್ಕೊಳಗಾಗಿರುವದರಿಂದ ಸಮಸ್ಯೆಯಾಗಿದೆ. ಇದನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವದೇ ಸೂಕ್ತ ಕ್ರಮ ತೆಗೆದುಕೊಂಡಿಲ್ಲ ಎಂದರು.
ವೇದಿಕೆಯಲ್ಲಿ ಸಮಿತಿಯ ಗೌರವಾಧ್ಯಕ್ಷ ಕೆ.ಪಿ. ರಾಯ್, ಉಪಾಧ್ಯಕ್ಷ ಧರ್ಮಪ್ಪ, ಕಾರ್ಯದರ್ಶಿ ಎಂ. ಅಪ್ಪು, ಕೆ.ಎಲ್. ಹೊನ್ನಪ್ಪ, ಸಲಹೆಗಾರರಾದ ಮೇದಪ್ಪ, ಡಿ.ಎಸ್. ಚಂಗಪ್ಪ, ವಿ. ರಾಜನ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.