ಮಡಿಕೇರಿ, ಮಾ. 22: ಎಸ್.ಎಸ್.ಎಲ್.ಸಿ. ಪರೀಕ್ಷೆ ತಾ. 30 ರಿಂದ ಆರಂಭವಾಗಲಿದ್ದು, ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಜಿ.ಪಂ. ಸಿಇಓ ಚಾರುಲತಾ ಸೋಮಲ್ ನಿರ್ದೇಶನ ನೀಡಿದರು.

ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಸಿದ್ಧತೆ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಸರ್ಕಾರದ ನಿರ್ದೇಶನದಂತೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಬೇಕು. ಯಾವದೇ ನ್ಯೂನತೆಗಳು ಕಂಡು ಬರದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿವಿಧ ಹಂತದ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು. ಪರೀಕ್ಷೆಯನ್ನು ಸರಿಯಾದ ಸಮಯಕ್ಕೆ ನಡೆಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಗಡಿಯಾರ ಅಳವಡಿಸುವದು, ಕುಡಿಯುವ ನೀರು ವ್ಯವಸ್ಥೆ ಮಾಡುವದು, ಉತ್ತಮ ಪೀಠೋಪಕರಣಗಳು ಇರುವಂತೆ ನೋಡಿಕೊಳ್ಳುವದು ಮತ್ತಿತರ ಅಗತ್ಯತೆ ಬಗ್ಗೆ ಗಮನಹರಿಸುವಂತೆ ಸಲಹೆಯಿತ್ತರು.

ಪ್ರಶ್ನೆ ಪತ್ರಿಕೆಯನ್ನು ಖಜಾನೆಯಲ್ಲಿ ಭದ್ರಪಡಿಸುವದು, ಪರೀಕ್ಷಾ ಕೇಂದ್ರದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸುವದು, ಹೀಗೆ ಹಲವು ಕಾರ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವಂತೆ ಅವರು ಸೂಚನೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ.ಆರ್. ಬಸವರಾಜು ಮಾತನಾಡಿ, ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳ ಲಾಗಿದೆ. ಈ ನಿಟ್ಟಿನಲ್ಲಿ ಪರೀಕ್ಷೆಗೆ ನಿಯೋಜಿಸಿರುವ ಎಲ್ಲಾ ಹಂತದ ಅಧಿಕಾರಿಗಳು ತಮ್ಮ ಜವಾಬ್ದಾರಿ ಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಒಟ್ಟು 27 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 8066 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲಿದ್ದಾರೆ. 7917 ವಿದ್ಯಾರ್ಥಿಗಳು ಹೊಸದಾಗಿ ಮತ್ತು 149 ವಿದ್ಯಾರ್ಥಿಗಳು ಖಾಸಗಿಯಾಗಿ ಪರೀಕ್ಷೆ ಬರೆಯಲಿದ್ದಾರೆ ಎಂದು ಮಾಹಿತಿ ನೀಡಿದರು.

ಡಯಟ್ ಪ್ರಾಂಶುಪಾಲ ದೊಡ್ಡಮಲ್ಲಪ್ಪ ಮಾತನಾಡಿ, ಪರೀಕ್ಷಾ ಕೊಠಡಿಯಲ್ಲಿ ಬೆಳಕು ಇರುವಂತೆ ನೋಡಿಕೊಳ್ಳಬೇಕು. ಶಿಸ್ತು ಬದ್ಧವಾಗಿ ಪರೀಕ್ಷೆ ನಡೆಸಬೇಕು ಎಂದು ಸಲಹೆ ಮಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡು ಪರೀಕ್ಷೆ ನಿಯೋಜಿಸುವ ಅಧಿಕಾರಿಗಳು ಇತರರು ಇದ್ದರು.

ಪರೀಕ್ಷಾ ಕೇಂದ್ರಗಳ ವಿವರ ಇಂತಿವೆ: ನಗರದ ಸರ್ಕಾರಿ ಪದವಿಪೂರ್ವ ಕಾಲೇಜು, ಸಂತ ಮೈಕಲರ ಪ್ರೌಢಶಾಲೆ, ನಾಪೋಕ್ಲು ಸರ್ಕಾರಿ ಪದವಿಪೂರ್ವ ಕಾಲೇಜು, ಚೇರಂಬಾಣೆ ಅರುಣ ಪದವಿಪೂರ್ವ ಕಾಲೇಜು, ಮೂರ್ನಾಡು ಪ್ರೌಢಶಾಲೆ, ಸಿದ್ದಾಪುರ ಪ್ರೌಢಶಾಲೆ, ಸಂಪಾಜೆ ಪ್ರೌಢಶಾಲೆ, ಮಡಿಕೇರಿಯ ಸಂತ ಜೋಸೆಫ್ ಪ್ರೌಢಶಾಲೆ, ಸೋಮವಾರ ಪೇಟೆಯ ಸರ್ಕಾರಿ ಪದವಿಪೂರ್ವ ಕಾಲೇಜು, ಓ.ಎಲ್.ವಿ. ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕುಶಾಲನಗರ ಫಾತಿಮಾ ಪ್ರೌಢಶಾಲೆ, ಕುಶಾಲನಗರ ಸರ್ಕಾರಿ ಪದವಿಪೂರ್ವ ಕಾಲೇಜು, ಶನಿವಾರಸಂತೆ ಪದವಿಪೂರ್ವ ಕಾಲೇಜು, ಶನಿವಾರಸಂತೆ ಸೇಕ್ರೇಡ್ ಹಾರ್ಟ್ ಪ್ರೌಢಶಾಲೆ, ಸುಂಟಿಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜು, ಸುಂಟಿಕೊಪ್ಪ ಸಂತ ಮೇರಿಸ್ ಪ್ರೌಢಶಾಲೆ, ಹೆಬ್ಬಾಲೆ ಪದವಿಪೂರ್ವ ಕಾಲೇಜು, ಕೊಡ್ಲಿಪೇಟೆ ಪದವಿಪೂರ್ವ ಕಾಲೇಜು, ನೆಲ್ಲಿಹುದಿಕೇರಿ ಸರ್ಕಾರಿ ಪ್ರೌಢಶಾಲೆ, ವೀರಾಜಪೇಟೆಯ ಸರ್ಕಾರಿ ಪದವಿಪೂರ್ವ ಕಾಲೇಜು, ವೀರಾಜಪೇಟೆ ಸಂತ ಅನ್ನಮ್ಮ ಪ್ರೌಢಶಾಲೆ, ಗೋಣಿಕೊಪ್ಪ ಸರ್ಕಾರಿ ಪ್ರೌಢಶಾಲೆ, ಗೋಣಿಕೊಪ್ಪಲು ಪ್ರೌಢಶಾಲೆ, ಪೊನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು, ಶ್ರೀಮಂಗಲ ಪದವಿಪೂರ್ವ ಕಾಲೇಜು, ಪಾಲಿಬೆಟ್ಟ ಸರ್ಕಾರಿ ಪ್ರೌಢಶಾಲೆ, ತಿತಿಮತಿಯ ಸರ್ಕಾರಿ ಪ್ರೌಢಶಾಲೆ.

ಇನ್ನಷ್ಟು ಮಾಹಿತಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ಮುಖ್ಯ ಅಧೀಕ್ಷಕರು ಹಾಗೂ ಉಪ ಮುಖ್ಯ ಅಧೀಕ್ಷಕರ ನೇಮಕ, ಪರೀಕ್ಷಾ ಕೇಂದ್ರದಲ್ಲಿ ಸಿ.ಸಿ.ಟಿ.ವಿ. ಕ್ಯಾಮರಾ ಅಳವಡಿಸುವದು. ಪ್ರಶ್ನೆ ಪತ್ರಿಕೆ ಅಭಿರಕ್ಷಕರ ಕರ್ತವ್ಯಗಳು, ಪ್ರಶ್ನೆ ಪತ್ರಿಕೆ ಸರಬರಾಜು ಮಾಡುವ ಮಾರ್ಗಾಧಿಕಾರಿಗಳನ್ನು ನೇಮಿಸುವದು, ಉತ್ತರ ಪತ್ರಿಕೆಗಳನ್ನು ಮಾರ್ಗಾಧಿಕಾರಿಗಳಿಂದ ಪಡೆದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಿಲ್ಲಾ ಭದ್ರತಾ ಕೊಠಡಿಗೆ ಖುದ್ದಾಗಿ ತಲಪಿಸುವದು. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ.ನಲ್ಲಿ ನಿಷೇಧಾಜ್ಞೆ ಜಾರಿಗೊಳಿ ಸುವದು, ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಬಳಸದಿರುವದು.

ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಸ್ಥಾನಿಕ ಜಾಗೃತ ದಳ ನಿಯೋಜಿಸುವದು, ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ, ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಶುಶ್ರೂಷಕಿಯರನ್ನು ನೇಮಿಸುವದು ಮತ್ತಿತರ ಬಗ್ಗೆ ಚರ್ಚೆ ನಡೆಯಿತು.