ಮಡಿಕೇರಿ, ಮಾ. 22: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಮೇಕೇರಿ ಗ್ರಾಮದ ಸುಭಾಷ್ ನಗರದ ನಿವಾಸಿಗಳಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಬರಹ ಮತ್ತು ಭಾಷಣದ ಪುಸ್ತಕವನ್ನು ವಿತರಿಸಲಾಯಿತು.

ಸುಭಾಷ್ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಅಂಬೇಡ್ಕರ್ ಅವರ ಪುಸ್ತಕವನ್ನು ಮದೆನಾಡು ಜೂನಿಯರ್ ಕಾಲೇಜಿನ ಉಪನ್ಯಾಸಕ ಸಿದ್ಧರಾಜು ಬಿಡುಗಡೆ ಮಾಡಿ ಮಾತನಾಡಿ, ಅಂಬೇಡ್ಕರ್ ಅವರ ಸಾಧನೆಯನ್ನು ಸ್ಮರಿಸಿದರು.

ಮುಖ್ಯ ಭಾಷಣಕಾರರಾಗಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್, ಜಿಲ್ಲೆಯಲ್ಲಿರುವ ಪ್ರತಿ ಮನೆಗಳಲ್ಲಿ ಆದರ್ಶ ಪುರುಷರಾಗಿರುವ ಬಿ.ಆರ್. ಅಂಬೇಡ್ಕರ್ ಅವರ ಪುಸ್ತಕ ಇರಬೇಕು ಮತ್ತು ಅವರ ವಿಚಾರಗಳನ್ನು ಮನೆ ಮನೆಗೆ ತಲಪಿಸಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಭಾಷ್ ನಗರದ ಸಂಚಾಲಕ ಹೆಚ್.ಸಿ. ಭರತ್ ವಹಿಸಿದ್ದರು. ವೇದಿಕೆಯಲ್ಲಿ ಮಹಿಳಾ ಸಮಿತಿಯ ಸಂಚಾಲಕಿ ಪುಷ್ಪಾವತಿ ಪೊನ್ನಪ್ಪ, ಸಂಘಟನಾ ಸಂಚಾಲಕರಾದ ದೀಪಕ್ ಕುಮಾರ್ ಹಾಗೂ ಪೊನ್ನಪ್ಪ ಉಪಸ್ಥಿತರಿದ್ದರು.