ನಾಪೋಕ್ಲು, ಮಾ. 22: ಹಿರಿಯರು ಹಾಕಿಕೊಟ್ಟ ಮೂಲ ಸಂಪ್ರದಾಯದ ನಂಬಿಕೆ ಆಧಾರದಲ್ಲಿ ಧರ್ಮದ ಜೊತೆಯಲ್ಲಿ ದೇವಾಲಯ, ಶ್ರದ್ಧಾಕೇಂದ್ರಗಳು ಭಾರತೀಯ ಪರಂಪರೆಯಿಂದಲೇ ಸಂಪ್ರದಾಯ, ಸಂಸ್ಕಾರ ಪ್ರತೀಕವಾಗಿ ಋಷಿ-ಮುನಿಗಳಿಂದ ತಪೋಕಲ್ಪಿತವಾಗಿ ನಿರ್ಮಾಣಗೊಂಡಿದೆ. ಆದ್ದರಿಂದಲೇ ಇಂದು ಭಗವಂತನ ದಿವ್ಯಶಕ್ತಿಯ ಪ್ರತೀಕವಾಗಿ ಭಕ್ತಿ ಮತ್ತು ಶ್ರದ್ಧೆಯ ಮೂಲ ಕೇಂದ್ರ ದೇವಾಲಯ ಗಳಾಗಿವೆ ಎಂದು ಸುಬ್ರಹ್ಮಣ್ಯ ಮಠಾಧೀಶ ವಿದ್ಯಾಪ್ರಸನ್ನ ಸ್ವಾಮೀಜಿ ಹೇಳಿದರು.
ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. ತಪಸ್ವಿ ಕಣ್ವ ಮಹಾ ಋಷಿಗಳಿಂದ ಪ್ರತಿಷ್ಠಾಪನೆಗೊಂಡ ಶ್ರೀ ಮಲ್ಲಿಕಾರ್ಜುನ ದೇವಾಲಯ ಸ್ಪಂದನಾಶಕ್ತಿ ಮತ್ತು ಮನಸ್ಸಿಗೆ ಶಾಂತಿ ಸಿಗುವ ಸ್ಥಳದಲ್ಲಿ ಪ್ರತಿಷ್ಠಾಪನೆ ಗೊಂಡಿದೆ. ಇದು ಇಡೀ ಸೀಮೆಯ ಭಕ್ತರ ಭಾಗ್ಯ. ಅರ್ಚಕರು ಶ್ರದ್ಧೆಯಿಂದ, ಶುಚಿತ್ವದಿಂದ ದೇವರ ಸೇವೆಯಲ್ಲಿ ತೊಡಗಿದರೆ ಭಗವಂತನ ಶಕ್ತಿ ಇಡೀ ನಾಡಿಗೆ ಪಸರಿಸುತ್ತದೆ. ಸಂಸ್ಕಾರ ಮತ್ತು ಸಂಸ್ಕøತಿ ಮಧ್ಯೆ ಸಾಕಷ್ಟು ವಿಚಾರಧಾರೆಗಳು ಇವೆ.
ಮುಂದಿನ ಪೀಳಿಗೆಗೆ ಸಂಸ್ಕಾರ, ಸಂಸ್ಕøತಿಗಳನ್ನು ಶ್ರದ್ಧಾಕೇಂದ್ರ ಮೂಲಕ ತಿಳಿಸುವ ಕೆಲಸಗಳಾಗಬೇಕು. ಆಗ ಮಾತ್ರ ಧರ್ಮ, ಸಂಸ್ಕøತಿಗಳು ಉಳಿಯಲು ಸಾಧ್ಯ ಎಂದು ಶ್ರೀಗಳು ಹೇಳಿದರು. ವಿಶ್ರಾಂತ ಕುಲಪತಿ ಡಾ. ಟಿ.ಆರ್. ಸುಬ್ರಹ್ಮಣ್ಯ ಸ್ಮರಣ ಸಂಚಿಕೆ ಬಿಡುಗಡೆ ಮತ್ತು ಧಾರ್ಮಿಕ ಉಪನ್ಯಾಸ ನೀಡಿ, ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ಕಾರ್ಯಗಳು ನಡೆದಾಗ ನಮ್ಮ ಹಿಂದೂ ಪರಂಪರೆಯ ಧರ್ಮ ಮತ್ತು ನಂಬಿಕೆಯ ಬಗ್ಗೆ ನಿಜವಾದ ಜೀವ ತುಂಬುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಹರಿಶ್ಚಂದ್ರ, ಪ್ರಗತಿಪರ ಕೃಷಿಕ ರಾಜೇಂದ್ರ ಪ್ರಸಾದ್, ಸಂಪಾಜೆ ಗ್ರಾ.ಪಂ. ಅಧ್ಯಕ್ಷೆ ಯಶೋದ, ದೇವಳದ ತಂತ್ರಿ ಪದ್ಮನಾಭ, ಸುಳ್ಯ ಚೆನ್ನಕೇಶವ ದೇವಳದ ಅನುವಂಶಿಕ ಮೊಕ್ತೇಸರ ಡಾ. ಹರಪ್ರಸಾದ್, ನಿವೃತ್ತ ಐಎಎಸ್ ಅಧಿಕಾರಿ ಸುಂದರ ನಾಯ್ಕ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದರು. ಈ ಸಂದರ್ಭ ದೇವಳದ ವತಿಯಿಂದ ಕ್ಷೇತ್ರದ ತಂತ್ರಿ ಪದ್ಮನಾಭ ಅವರನ್ನು ಸನ್ಮಾನಿಸ ಲಾಯಿತು. ದೇವಳದಿಂದ ಹೊರತಂದ ರಾಷ್ಟ್ರ ಪ್ರಶಸ್ತಿ ಪುರಸ್ಕøತ ಶಿಕ್ಷಕ ಕೆ.ಆರ್. ಗಂಗಾಧರ ಅವರ ಸಂಪಾದಕತ್ವದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ಅಗೋಚರ ಶಕ್ತಿ ಭಗವಂತ: ಶ್ರೀ ರಾಜಶೇಖರಾನಂದ ಸ್ವಾಮಿ
ಕೊಡುಕೊಳ್ಳುವಿಕೆ ಹಿಂದೂ ಧರ್ಮದ ಶ್ರೇಷ್ಠ ಗುಣ. ಹಿಂದೂ ಧರ್ಮದ ಮೂಲ ತತ್ವ, ಎಲ್ಲರನ್ನೂ, ಪ್ರತಿ ಜಲಚರ, ಪ್ರಾಣಿ, ಪಕ್ಷಿಗಳನ್ನು, ಪ್ರಕೃತಿಯನ್ನು ಪ್ರೀತಿಸುವದು. ಇಂತಹ ಹಿಂದೂ ಧರ್ಮದಲ್ಲಿ ಹುಟ್ಟಿರುವದೇ ಪುಣ್ಯ. ಹಿಂದೂ ಧರ್ಮದ ಶ್ರೇಷ್ಠ ಗ್ರಂಥವಾದ ಭಗವದ್ಗೀತೆಯಲ್ಲಿ ಮನುಷ್ಯನ ಬದುಕಿನ ಎಲ್ಲ ಸಾರಂಶವನ್ನು ಮುಂದಿಟ್ಟಿದೆ. ಪ್ರಪಂಚವನ್ನು ಹಿಡಿತದಲ್ಲಿಟ್ಟುಕೊಳ್ಳುವ ಅಗೋಚರ ಸಂಪತ್ತು ಭಗವಂತ ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಸ್ವಾಗತ ಗೋಪುರ ಮತ್ತು ವಸಂತ ಮಂಟಪವನ್ನು ಉದ್ಘಾಟಿಸಿ, ಪುನರ್ ಪ್ರತಿಷ್ಠಾಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಕಶಕೋಡಿ ಸೂರ್ಯ ನಾರಾಯಣ ಭಟ್ ಧಾರ್ಮಿಕ ಉಪನ್ಯಾಸ ನೀಡಿ, ಗೋ ಸಂಪತ್ತು ಇರುವ ದೇಶ ಭಾರತ. ಅದಕ್ಕಾಗಿ ನಮ್ಮ ಜನ್ಮವನ್ನು ಮುಡುಪಾಗಿಡಬೇಕು. ಗ್ರಾಮದಲ್ಲಿ ದೇವಸ್ಥಾನ ಬ್ರಹ್ಮಕಲಶೋತ್ಸವ ಮಾಡಿದಾಗ ಎಷ್ಟು ಪುಣ್ಯ ಸಿಗುತ್ತದೆಯೋ ಅಷ್ಟೆ ಪುಣ್ಯ ಗೋರಕ್ಷಣೆಯಿಂದ ಸಿಗುತ್ತದೆ ಎಂದರು.
ವಿಶ್ವ ನಿಂತಿರುವದು ಧರ್ಮದ ಮೇಲೆ: ಒಡಿಯೂರು ಶ್ರೀ
ಬದುಕು ಒಂದು ಚಲನಶೀಲತೆ ಕ್ರಿಯೆ. ವಿಶ್ವ ನಿಂತಿರುವದು ಧರ್ಮದ ಮೇಲೆ. ಹೀಗೆ ಬದುಕು ಮತ್ತು ಧರ್ಮ ಒಂದೇ ನಾಣ್ಯದ ಎರಡು ಮುಖಗಳು. ಧರ್ಮ, ಶ್ರದ್ಧೆ ಮತ್ತು ಉತ್ತಮ ವಿಚಾರಗಳನ್ನು ಅಳವಡಿಸಿಕೊಂಡಾಗ ಮನುಷ್ಯನ ನಿಜವಾದ ಬದುಕು ನಿರ್ಮಾಣ ಆಗುತ್ತದೆ. ಹೀಗೆ ಪ್ರತಿಯೊಬ್ಬನ ಬದುಕಿನ ಮೂಲ ಧರ್ಮ ಎಂದು ಒಡಿಯೂರು ಗುರುದೇವ ದತ್ತ ಮಹಾಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಉಪನ್ಯಾಸಕ ಶ್ರೀ ಶಕುಮಾರ್ ಧಾರ್ಮಿಕ ಉಪನ್ಯಾಸ ನೀಡಿದರು. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ದೇವಾಲಯಗಳು ನಿರ್ಮಾಣಗೊಂಡು ಅಲ್ಲಿ ಮೇಲು, ಕೀಳು ಎಂಬ ಭಾವನೆಗಳು, ಅಸ್ಪøಶ್ಯತೆಗಳು ಸಮಾಜದಿಂದ ತೊಲಗಿ ಅಲ್ಲಿ ಹಿಂದೂಗಳು ಒಂದಾಗಿನಿಂತಾಗ ದೇವರಿಗೆ ನಿಜವಾದ ಬ್ರಹ್ಮಕಲಶ ನಡೆಯುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಚಿದಾನಂದ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯೆ ಪುಷ್ಪಾವತಿ ಬಾಳಿಲ, ಮುಂಬೈನ್ ಉದ್ಯಮಿ ಕುಸುಮೋಧರ ಡಿ. ಶೆಟ್ಟಿ, ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಬಾಲಚಂದ್ರ ಕಳಗಿ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ.ಬಿ. ದಿವಾಕರ ರೈ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
- ದುಗ್ಗಳ ಸದಾನಂದ