ಮಡಿಕೇರಿ, ಮಾ. 21: ವಿವಾಹ ಪಿಂಚಣಿ, ವೈದ್ಯಕೀಯ ಸೌಲಭ್ಯ ಹಣ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಟ್ಟಡ ಮತ್ತು ಇತರ ಕಾರ್ಮಿಕರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಕಾರ್ಮಿಕ ಕಟ್ಟಡ ಮತ್ತು ಇತರ ಕಾರ್ಮಿಕ ಕಲ್ಯಾಣ ಮಂಡಳಿಯ ಎಲ್ಲ ಹಂತಗಳಲ್ಲೂ ಫಲಾನುಭವಿಗಳ ನೋಂದಣಿ, ನವೀಕರಣ, ಸೌಲಭ್ಯಗಳ ವಿತರಣೆಗೆ ಕಚೇರಿ ಹಾಗೂ ಸಿಬ್ಬಂದಿ ಗಳನ್ನು ನೇಮಿಸಬೇಕು. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು, ಕಲ್ಯಾಣ ಮಂಡಳಿಯಲ್ಲಿ ಸಿಯುಟಿಯು ನೇತೃತ್ವದಲ್ಲಿ ಕಟ್ಟಡ ಫೆಡರೇಶನ್‍ಗೆ ಪ್ರಾತಿನಿಧ್ಯ ನೀಡಬೇಕು. ವಲಸೆ ಕಾರ್ಮಿಕರು ಕಲ್ಯಾಣ ಮಂಡಳಿಯ ಸೌಲಭ್ಯ ಪಡೆಯಲು ಗುರುತಿನ ಚೀಟಿ ವಿತರಿಸಬೇಕು ಮುಂತಾದ ಬೇಡಿಕೆ ಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಸಾಲಿ ಪೌಲೋಸ್, ಕಾರ್ಯದರ್ಶಿ ಸಾಬು, ಖಜಾಂಚಿ ಹಮೀದ್, ಜಂಟಿ ಕಾರ್ಯದರ್ಶಿ ಕೆ.ಕೆ. ಹರಿದಾಸ್, ಎಂ.ಎ. ಕೃಷ್ಣ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.