ಮಡಿಕೇರಿ, ಮಾ. 22:ಪ್ರಾಕೃತಿಕ, ಭೌಗೋಳಿಕ, ಸಾಂಸ್ಕøತಿಕವಾಗಿ, ಆಚಾರ - ವಿಚಾರ, ಉಡುಪು - ತೊಡುಪು, ಆಹಾರ ಪದ್ಧತಿ ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ವಿಶೇಷವಾಗಿ ಪರಿಗಣಿಸಲ್ಪಟ್ಟಿರುವ ಕೊಡಗು ಜಿಲ್ಲೆಯಲ್ಲಿ ಇದೀಗ ಧಾರ್ಮಿಕತೆಯ ಪ್ರತೀಕವಾದ ದೇವರ ಹಬ್ಬಾಚರಣೆಯ ಸಂಭ್ರಮ - ಸಡಗರ ಕಂಡುಬರುತ್ತಿದೆ. ದೈವಿಕ ಕೈಂಕರ್ಯಗಳಲ್ಲಿ ನಾಡಿನ ಜನತೆ ಶ್ರದ್ಧಾ ಭಕ್ತಿಯಿಂದ ತೊಡಗಿಸಿಕೊಳ್ಳುತ್ತಿದ್ದಾರೆ. ದೇವರ ಆರಾಧನೆಯಲ್ಲಿಯೂ ಕೊಡಗು ಜಿಲ್ಲೆ ಇತರೆಡೆಗಳಿಗಿಂತ ವಿಭಿನ್ನವಾದದ್ದು. ರಾಜ್ಯದ ಇತರೆಡೆಗಳಲ್ಲಿನ ದೇವಾಲಯಗಳ ಉತ್ಸವಕ್ಕೂ ಕೊಡಗು ಜಿಲ್ಲೆಯ ಆಚರಣೆಗಳಿಗೂ ವ್ಯತ್ಯಾಸವಿದೆ. ಜಿಲ್ಲೆಯ ಪ್ರತಿ ಗ್ರಾಮ ಗ್ರಾಮಗಳಲ್ಲಿ ಆಯಾ ಊರಿಗೆ ಸಂಬಂಧಿಸಿದಂತೆ ಒಂದಲ್ಲಾ ಒಂದು ದೇವಾಲಯಗಳಿವೆ.

ಭಗವತಿ, ಈಶ್ವರ, ಅಯ್ಯಪ್ಪ ಹೀಗೆ ವಿವಿಧ ದೇವರ ದೇವಸ್ಥಾನಗಳು ಜಿಲ್ಲೆಯ ಎಲ್ಲಾ ಗ್ರಾಮ ಗ್ರಾಮಗಳಲ್ಲೂ ಇದ್ದು, ಆಯಾ ದೇವಾಲಯಗಳಿಗೆ ಸಂಬಂಧಿಸಿದಂತೆ ವಿವಿಧ ಕಟ್ಟು ಪಾಡುಗಳು, ಆಚರಣೆಗಳು ಇರುವದು ಕೊಡಗಿನ ಧಾರ್ಮಿಕ ವಿಶೇಷತೆಯಾಗಿದೆ.

ಕೊಡಗಿನ ಹಬ್ಬ - ಹರಿದಿನಗಳ ಆಚರಣೆಯಲ್ಲಿ ಭಕ್ತಿ ಭಾವನೆಯ ಪ್ರತೀಕ ಮಾತ್ರ ಇಲ್ಲ. ಧಾರ್ಮಿಕ ನಂಬಿಕೆಗೆ ಒಳಪಟ್ಟಂತೆ ಸಂಸ್ಕøತಿಯ ಪರಿಪಾಲನೆ ಮನರಂಜನೆ ಮೂಡಿಸುವಂತಹ ಬೇಡು ಹಬ್ಬದ ಸಂಭ್ರಮ, ಇದಕ್ಕೆ ಕ್ರೀಡೆ ಮತ್ತಿತರ ಸಾಂಸ್ಕøತಿಕ - ಧಾರ್ಮಿಕತೆಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳ ಸೇರ್ಪಡೆ ಹಬ್ಬ ಎಂಬ ಪದವನ್ನು ಇನ್ನಷ್ಟು ವಿಜೃಂಭಿಸುತ್ತದೆ. ತೆಂಗಿನ ಕಾಯಿಗೆ ಗುಂಡು ಹೊಡೆಯುವದೂ ಇನ್ನೆಲ್ಲೂ ಇಲ್ಲ.

ಕಾವೇರಿ ತೀರ್ಥೋದ್ಭವದ ಮರುದಿನ ಕುಂದದ ಅಯ್ಯಪ್ಪ ದೇವಾಲಯದಲ್ಲಿ ಬೇಡು ಹಬ್ಬ ನಡೆಯುವದು ವಾಡಿಕೆಯಾಗಿದ್ದು, ಬಹುಶಃ ಇಲ್ಲಿಂದ ವಾರ್ಷಿಕ ಉತ್ಸವಗಳಿಗೆ ಚಾಲನೆ ದೊರೆಯುತ್ತದೆ. ಇಲ್ಲಿಂದ ಮಳೆಗಾಲ ಪ್ರಾರಂಭಗೊಳ್ಳುವ ಜೂನ್ ಆರಂಭದ ದಿನ ಕಂಡಂಗಾಲ, ರುದ್ರಗುಪ್ಪೆ, ಬಾಡಗ ಗ್ರಾಮ ವ್ಯಾಪ್ತಿಯಲ್ಲಿ ನಡೆಯುವ ಪಾರಣ ನಮ್ಮೆಯ ತನಕ ಜಿಲ್ಲೆಯ ವಿವಿಧೆಡೆ ವಿವಿಧ ದೇವಾಲಯಗಳಲ್ಲಿ ವಿವಿಧ ರೀತಿಯ ಆಚರಣೆಗಳೊಂದಿಗೆ ವಾರ್ಷಿಕ ಉತ್ಸವಗಳು ನಡೆಯುತ್ತವೆ. ಕೊಡಗಿ ಭಾಷೆಯಲ್ಲಿ ಇರುವ ಹಾಡೊಂದರಂತೆ, ‘ಕುಂದತ್ ಮೊಟ್ಟ್‍ಲ್ ನೇಂದ ಕುದುರೆ.., ಪಾರಣ ಮಾನಿಲ್ ಅಳ್‍ಂಜ ಕುದುರೆ’ ಎಂಬಂತೆ ಈ ಅವಧಿಯಲ್ಲಿ ಬಹುತೇಕ ಹಬ್ಬಗಳು ಮುಗಿಯುತ್ತವೆ.

ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ, ಕೊಡಗಿನಲ್ಲಿ ದೇವರ ಶ್ರದ್ಧೆಯೊಂದಿಗೆ ಧಾರ್ಮಿಕತೆಗೆ ಹೆಚ್ಚು ಒತ್ತು ಕಂಡು ಬರುತ್ತದೆ. ಇದಕ್ಕೆ ಉದಾಹರಣೆ ಊರು - ಊರುಗಳಲ್ಲಿ ದೇವಾಲಯಗಳು ಇರುವದು ಹಾಗೂ ಅಭಿವೃದ್ಧಿ ಕಾಣುತ್ತಿರುವದು ಪ್ರಸ್ತುತ ದಿನಗಳಲ್ಲಿ ಒಂದು ದೇವಸ್ಥಾನಕ್ಕಿಂತ ಒಂದು ದೇವಸ್ಥಾನ ಒಂದು ರೀತಿಯಲ್ಲಿ ಪೈಪೋಟಿಯ ರೀತಿಯಲ್ಲಿ ಜೀರ್ಣೋದ್ಧಾರ ಕಾಣುತ್ತಿರುವದು ಗಮನಾರ್ಹವಾದದ್ದು. ವಾರ್ಷಿಕ ಆಚರಣೆಯ ಸಂದರ್ಭ ದೇವರ ಕಟ್ಟು ಬೀಳುವದು, ವ್ರತ ಪರಿಪಾಲನೆ, ಮರ ಗಿಡ ಕಡಿಯದಿರುವದು ಮಾಂಸಹಾರ ತ್ಯಜಿಸುವದು ಇತ್ಯಾದಿ ಕಟ್ಟುಪಾಡುಗಳನ್ನು ಆಯಾ ವಿಭಾಗದಲ್ಲಿ ಜನರೂ ಚಾಚೂ ತಪ್ಪದೆ ಪಾಲಿಸಿಕೊಂಡು ಬರುತ್ತಾರೆ. ಬೇಡು ಹಬ್ಬದ ವೇಷ ಮನರಂಜನೆಯಂತೆ ಕಂಡರೂ ಇದರಲ್ಲಿ ಭಕ್ತಿ ಭಾವದ ಲೇಪವಿದೆ. ವಿವಿಧ ದೇವಾಲಯಗಳಲ್ಲಿ ಕೊಂಬಾಟ್, ಚೌರಿಯಾಟ್, ಬೊಳಕಾಟ್, ಪೀಲಿಯಾಟ್ ನಂತಹ ಸಾಂಸ್ಕøತಿಕ ವೈಭವವೂ ಮತ್ತೊಂದು ವಿಶೇಷತೆ ಎತ್ತು ಪೋರಾಟ, ಪೊಮ್ಮಂಗಲ, ಕುದುರೆ ಕಳಿ ಇತ್ಯಾದಿ ಪದ್ಧತಿಯ ಪರಿಪಾಲನೆ ಮಾಡುವವರು ಶುದ್ಧತೆಯಿಂದಿರುತ್ತಾರೆ. ಕುದುರೆ ಮನೆ ಮನೆ ಕಳಿ ಹೊರಡುವದು ಕೊಡಗಿನ ಹಬ್ಬಗಳ ವಿಶೇಷತೆ. ಬೇಡು ಹಬ್ಬ ಹೆಚ್ಚಾಗಿ ದಕ್ಷಿಣ ಕೊಡಗಿನಲ್ಲಿ ಕಂಡು ಬರುತ್ತದೆ. ಕುಂದ, ಹಳ್ಳಿಗಟ್ಟು, ಈಚೂರು, ಹುದೂರು, ಬೆಸಗೂರು, ನಲ್ಲೂರು, ಕಿರುಗೂರು, ದೇವರಪುರ, ಚೆಂಬೆಬೆಳ್ಳೂರು ಕಡೆಗಳಲ್ಲಿ ಬೇಡು ಹಬ್ಬ ಬಗೆ ಬಗೆಯ ವೇಷದೊಂದಿಗೆ ಗಮನೆ ಸೆಳೆಯುತ್ತದೆ.

ಆಯಾ ಊರಿನ ಹಬ್ಬಗಳಿಗೆ ಹೊರ ಜಿಲ್ಲೆ, ರಾಜ್ಯಗಳಲ್ಲಿ ನೆಲೆಸಿರುವವರೂ ಸಂಸಾರ ಸಹಿತರಾಗಿ ಆಗಮಿಸಿ, ತೊಡಗಿಸಿಕೊಳ್ಳುವದರೊಂದಿಗೆ ಹರಕೆ ಒಪ್ಪಿಸುತ್ತಾರೆ. ಒಂದೊಂದು ದೇವಾಲಯಕ್ಕೆ ಒಂದೊಂದು ವಿಶೇಷವಾದ ಐತಿಹಾಸಿಕವಾದ ಹಿನ್ನೆಲೆಯಿದೆ. ಇದಕ್ಕೆ ಅನುಗುಣವಾಗಿ ಆಚರಣೆಗಳು ಮುಂದುವರಿದುಕೊಂಡು ಬರುತ್ತಿವೆ.

(ಮೊದಲ ಪುಟದಿಂದ) ಹಿಂದೂ ಸಂಸ್ಕøತಿಯ ಭಾಗವಾಗಿ ಹಿಂದೂ ದೇವಾಲಯಗಳಲ್ಲಿ ಹಬ್ಬಗಳು ನಡೆದರೆ, ಮುಸಲ್ಮಾನರೂ ತಮ್ಮ ಸಂಪ್ರದಾಯದ ಆಚರಣೆ ಮಾಡುವದು ಇದೇ ಅವಧಿಯಲ್ಲಿ ವಿವಿಧ ಮಸೀದಿಗಳಲ್ಲಿ ಉರೂಸ್ ಆಚರಣೆಗಳೂ ಜಿಲ್ಲೆಯಲ್ಲಿ ಆರಂಭಗೊಂಡಿವೆ. ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿರುವ ಎಮ್ಮೆಮಾಡು ಉರೂಸ್ ಈಗಾಗಲೇ ಮುಗಿದಿದ್ದು, ಮುಂದಿನ ದಿನಗಳಲ್ಲಿ ಇನ್ನು ಹಲವೆಡೆ ಉರೂಸ್ ನಿಗದಿಯಾಗಿದೆ. ಎಮ್ಮೆಮಾಡು, ಬಿ. ಶೆಟ್ಟಿಗೇರಿಯಲ್ಲಿ ಉರೂಸ್ ಆಚರಣೆಯಲ್ಲಿ ಮುಸಲ್ಮಾನರೊಂದಿಗೆ ಕೊಡವರು ಸೇರಿ ಸಂಪ್ರದಾಯ ಪಾಲಿಸುತ್ತಿರುವದು ಕೊಡಗಿನ ಇನ್ನೊಂದು ವಿಶೇಷತೆಯಾಗಿದೆ.

ಕೊಡಗಿನಲ್ಲಿ ಹಬ್ಬಾಚರಣೆ ವಿವಿಧ ಕಟ್ಟುಪಾಡಿನೊಂದಿಗೆ ಆಚರಿಸಲ್ಪಟುವದು ಸಾಮಾಜಿಕವಾದ, ಧಾರ್ಮಿಕವಾದ ಶಿಸ್ತು ಕಾಪಾಡುವಲ್ಲಿ ಪೂರಕವಾಗಿದೆ. ಇಲ್ಲಿ ಜಾತಿ - ಧರ್ಮದ ಬೇಧವಿಲ್ಲ. ಧಾರ್ಮಿಕ ನಂಬಿಕೆ ಮುಖ್ಯವಾಗಿರುತ್ತದೆ ಎಂದು ಈ ಕುರಿತು ಬ್ರಹ್ಮಗಿರಿ ಸಂಪಾದಕ ಉಳ್ಳಿಯಡ ಎಂ. ಪೂವಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನು ಒಂದೆರಡು ತಿಂಗಳು ಕೊಡಗಿನಲ್ಲಿ ವಾರ್ಷಿಕ ಹಬ್ಬಗಳ ಸಂಭ್ರಮ ಮುಂದುವರಿಯಲಿದೆ.

ಪ್ರಮುಖ ಉತ್ಸವಗಳು

ಆಯಾ ಊರಿನ ದೇವಸ್ಥಾನಗಳಲ್ಲಿನ ಹಬ್ಬಗಳು ಮಾತ್ರವಲ್ಲದೆ ಇತ್ತೀಚಿನ ವರ್ಷಗಳಲ್ಲಿ ಅಲ್ಲಲ್ಲಿ ಸ್ಥಾಪನೆಯಾಗಿರುವ ಮುತ್ತಪ್ಪ ದೇವಾಲಯಗಳಲ್ಲಿ ಮುತ್ತಪ್ಪ ತೆರೆಯೂ ಸಾವಿರಾರು ಭಕ್ತರನ್ನು ಸೆಳೆಯುತ್ತಿವೆ. ಮಡಿಕೇರಿ, ಸಿದ್ದಾಪುರ, ನಾಪೋಕ್ಲು, ಪೊನ್ನಂಪೇಟೆ, ಹುದಿಕೇರಿ ಸೇರಿದಂತೆ ಹಲವೆಡೆಗಳಲ್ಲಿ ನಡೆಯುವ ಮುತ್ತಪ್ಪ ದೇವರ ಉತ್ಸವ ಆಚರಣೆಯೂ ಗಮನ ಸೆಳೆಯುತ್ತವೆ.

ಶ್ರೀ ಇಗ್ಗುತಪ್ಪ ದೇವಾಲಯದ ಉತ್ಸವ, ಬಾಡಗರಕೇರಿ ಮೃತ್ಯುಂಜಯ ದೇವಸ್ಥಾನದ ಹಬ್ಬ, ಬಿರುನಾಣಿ ಪುತ್ತು ಭಗವತಿ ದೇವಾಲಯದ ಪೊಮ್ಮಂಗಲ ವಿಶೇಷತೆ, ವೀರಾಜಪೇಟೆ ಮಲೆತಿರಿಕೆ ದೇವರ ಉತ್ಸವ, ಕೋಕೇರಿ, ಚೆಟ್ಟಳ್ಳಿ ದೇವಾಲಯಲ್ಲಿನ ಕೊಂಬಾಟ್, ಅಯ್ಯಂಗೇರಿಯ ಚಿನ್ನತಪ್ಪ ಉತ್ಸವ, ರುದ್ರಗುಪ್ಪೆಯ ಜೋಡು ಭಗವತಿ ಉತ್ಸವ, ಪರಿಶಿಷ್ಟ ಜನಾಂಗದವರು ನಡೆಸುವ ಕಕ್ಕಬೆಯ ಪನ್ನಂಗಾಲತಮ್ಮೆ ಹಬ್ಬ, ಕಾಕೋಟು ಪರಂಬು ಕಾಲಭೈರವೇಶ್ವರ ಹಬ್ಬ, ತಾವೂರು ಮಹಿಷ ಮರ್ದಿನಿ, ಕೊಣಂಜಗೇರಿಯ ಕೊಂಬಾಟ್, ಪೀಲಿಯಾಟ್, ಮುತ್ತ್‍ನಾಡ್ (ಕಾಲೂರು)ವಿನ ಅಯ್ಯಪ್ಪ ದೇವಸ್ಥಾನ, ಅರಕಲ್ ಅಯ್ಯಪ್ಪ, ಮದೆನಾಡು ಈಶ್ವರ - ಪಾರ್ವತಿ ಹಬ್ಬಗಳು ಹೆಸರು ಪಡೆದಿವೆ. ಕೊಡವ ಜನಾಂಗದವರು, ಅರೆಭಾಷೆಗೌಡ ಜನಾಂಗ ಸೇರಿದಂತೆ ವಿವಿಧ ಮೂಲ ನಿವಾಸಿ ಜನಾಂಗದ ಪ್ರತಿ ಕುಟುಂಬಗಳಲ್ಲಿಯೂ ವಿವಿಧ ಆಚರಣೆಗಳು ಸಾಮೂಹಿಕವಾಗಿ ನಡೆಯುತ್ತಿವೆ. ನಾಗಪೂಜೆ, ಪ್ರತಿಷ್ಠಾಪನೆಯೊಂದಿಗೆ ಕೈಮಡಗಳ ಜೀರ್ಣೋದ್ಧಾರವೂ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವದು ವಿಶೇಷವಾಗಿದೆ. ಹುತ್ತರಿ ಹಬ್ಬದ ಬಳಿಕ ಊರೊರ್ಮೆ ಕೂಟಗಳು ಜಿಲ್ಲೆಯ ಅಲ್ಲಲ್ಲಿ ಜನರನ್ನು ಒಂದಾಗಿ ಬೆಸೆಯುತ್ತದೆ.

ಇದರೊಂದಿಗೆ ಕೆಲವು ಆಚರಣೆಗಳು ಜಾತ್ರೆಯ ಸ್ವರೂಪದಲ್ಲೂ ಆಚರಿಸಲ್ಪಡುತ್ತಿದೆ. ಶಾಂತಳ್ಳಿ ಕುಮಾರಲಿಂಗೇಶ್ವರ ಜಾತ್ರೆ, ಕುಶಾಲನಗರ ಗಣಪತಿ ರಥೋತ್ಸವ, ಹೆಬ್ಬಾಲೆಯ ಬನಶಂಕರಿ ಜಾತ್ರೆ, ಕಣಿವೆ ರಾಮಲಿಂಗೇಶ್ವರ, ಶನಿವಾರಸಂತೆಯ ಗುಡುಗಳಲೆ ಜಾನುವಾರು ಜಾತ್ರೆ, ಕುಟ್ಟ ಜಾತ್ರೆ, ಇರ್ಪು - ಹೇರ್ಮಾಡು ಜಾತ್ರೆ, ಕಣಿವೆ ರಾಮಲಿಂಗೇಶ್ವರ ಜಾತ್ರೆ, ಚೌಡ್ಲುವಿನ ಸುಗ್ಗಿಕಟ್ಟೆ ಜಾತ್ರೆ ಅಪಾರ ಜನರನ್ನು ಸೆಳೆಯುತ್ತವೆ.

ಬಹುತೇಕ ಉತ್ಸವಗಳಲ್ಲಿ ಜಾತ್ರೆಗಳಲ್ಲಿ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಹಬ್ಬಗಳ ಸಂದರ್ಭದ ಕಟ್ಟುಪಾಡನ್ನು ಅತ್ಯಂತ ನಿಷ್ಠೆಯಿಂದ ಪಾಲಿಸುವದು, ಕೆಲವೆಡೆ ಉಪವಾಸ (ಪಟ್ಟಣಿ) ಮನೆಯಲ್ಲಿ ವಾಸವಿಲ್ಲದಿರುವದು, ಧರಿಸುವ ಉಡುಪು ಇತ್ಯಾದಿ ಅಂಶಗಳು ಕೊಡಗಿನ ಹಬ್ಬಗಳ ಮಹತ್ವದ ವಿಶೇಷತೆಯಾಗಿದೆ.