ಸೋಮವಾರಪೇಟೆ, ಮಾ. 18: ಜಿಲ್ಲೆಯ ಸೋಮವಾರಪೇಟೆ ತಾಲೂಕಿಗೆ ಒತ್ತಿಕೊಂಡಂತಿರುವ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿಗೆ ಒಳಪಡುವ ನಾಲ್ಕು ಗ್ರಾಮ ಪಂಚಾಯಿತಿಗಳನ್ನು ಕೊಡಗು ಜಿಲ್ಲೆಗೆ ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಚಂಗಡಹಳ್ಳಿಯ ಮಲೆನಾಡು ಹೋರಾಟ ಸಮಿತಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದು, ಅಧಿಕಾರಿಗಳೂ ಸಹ ಈ ಬಗ್ಗೆ ಕಾರ್ಯೋನ್ಮುಖರಾಗಬೇಕೆಂದು ಆಗ್ರಹಿಸಿದೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಲೆನಾಡು ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಆರ್.ಪಿ. ಲಕ್ಷ್ಮಣ್, ಸೋಮವಾರಪೇಟೆಗೆ ಒತ್ತಿಕೊಂಡಂತಿ ರುವ, ಸದ್ಯ ಸಕಲೇಶಪುರ ತಾಲೂಕಿಗೆ ಸೇರಿರುವ ಚಂಗಡಹಳ್ಳಿ, ವನಗೂರು, ಉಚ್ಚಂಗಿ ಮತ್ತು ಹೊಸೂರು ಗ್ರಾಮ ಪಂಚಾಯಿತಿಗಳನ್ನು ಸೋಮವಾರಪೇಟೆ ತಾಲೂಕಿಗೆ ಸೇರ್ಪಡೆಗೊಳಿಸುವಂತೆ ಮುಖ್ಯಮಂತ್ರಿಗಳು ಹಾಗೂ ಕೊಡಗು ಮತ್ತು ಹಾಸನದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದರು.

ಭೌಗೋಳಿಕವಾಗಿ ಈ ಗ್ರಾಮಗಳು ಕೊಡಗಿಗೆ ಹೊಂದಿಕೊಂಡಂತೆ ಇದ್ದು, ಕೊಡಗು ಜಿಲ್ಲಾ ಕೇಂದ್ರ, ತಾಲೂಕು ಮತ್ತು ಹೋಬಳಿ ಕೇಂದ್ರಗಳಿಗೆ ಹತ್ತಿರದಲ್ಲಿದೆ. ಈ ಭಾಗದ ಜನರು ವೈದ್ಯಕೀಯ, ಶೈಕ್ಷಣಿಕ, ಸಾಮಾಜಿಕ, ಸಾಂಪ್ರದಾಯಿಕ ಹಾಗೂ ವ್ಯಾವಹಾರಿಕವಾಗಿಯೂ ಕೊಡಗನ್ನೇ ಅವಲಂಭಿಸಿದ್ದಾರೆ ಎಂದರು.

ಈ ಗ್ರಾಮಗಳಿಂದ ಸೋಮವಾರಪೇಟೆ ತಾಲೂಕು ಕೇಂದ್ರಕ್ಕೆ ಕೇವಲ 18 ಕಿ.ಮೀ. ಅಂತರವಿದ್ದು, ಅದೇ ಸಕಲೇಶಪುರ ತಾಲೂಕು ಕೇಂದ್ರಕ್ಕೆ 65 ಕಿ.ಮೀ. ಅಂತರ ಹೊಂದಿದೆ. ಇದರೊಂದಿಗೆ ಗ್ರಾಮಗಳ ಸಾವಿರಾರು ವಿದ್ಯಾರ್ಥಿಗಳು ಕೊಡಗು ಜಿಲ್ಲೆಯ ಶಾಲಾ ಕಾಲೇಜುಗಳನ್ನೇ ಅವಲಂಭಿಸಿದ್ದಾರೆ ಎಂದು ಮಾಹಿತಿಯಿತ್ತರು.

ಗೋಷ್ಠಿಯಲ್ಲಿ ಹೋರಾಟ ಸಮಿತಿಯ ಎಸ್. ಬಸಪ್ಪ, ಹೆಚ್.ಪಿ. ಮೋಹನ್, ಹೆಚ್.ಕೆ. ರಮೇಶ್ ಉಪಸ್ಥಿತರಿದ್ದರು.