ಮಡಿಕೇರಿ, ಮಾ. 20: ಅಪರಿಚಿತ ಶವದ ಗುರುತು ಪತ್ತೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಪ್ರದೀಪ್ ಕೋರಿದ್ದಾರೆ. ಮೂರ್ನಾಡು ಸಮೀಪ ಕಾವೇರಿ ಹೊಳೆಯಲ್ಲಿ ಜ. 11 ರಂದು ಅಪರಿಚಿತ ಶವ ತೇಲುತ್ತಿದ್ದುದನ್ನು ಕಂಡ ಎಂ. ಬಾಡಗ ಗ್ರಾಮದ ಪೆಮ್ಮಂಡ ಕುಂಞಪ್ಪ ಎಂಬವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ತೆರಳಿದ ಪೊಲೀಸರು ಶವವನ್ನು ಮೇಲಕ್ಕೆತ್ತಿ ಪರಿಶೀಲಿಸಿದಾಗ ಎಡಗಲ್ಲದಿಂದ ಎಡಕೆನ್ನೆ, ಬಲಕಿವಿಯಿಂದ ಕುತ್ತಿಗೆವರೆಗೆ ಹಾಗೂ ಎಡಕೈಯಲ್ಲಿ ಹರಿತವಾದ ಆಯುಧಗಳಿಂದ ಕಡಿದ ಗಾಯಗಳು ಕಂಡು ಬಂದಿದ್ದವು. ಸುಮಾರು 25 ರಿಂದ 30 ವರ್ಷ ಪ್ರಾಯದ ಗಂಡಸಿನ ಮೃತದೇಹ. ಸಾಧಾರಣ ಮೈಕಟ್ಟು, ಬಲಕೈಯಲ್ಲಿ ‘ಎಂ’ ಎಂಬ ಹಚ್ಚೆ ಗುರುತು ಕಪ್ಪು - ಬೂದು ಬಣ್ಣದ ಅರ್ಧ ತೋಳಿನ ಟೀ ಶರ್ಟ್, ನೀಲಿ ಜೀನ್ಸ್ ಪ್ಯಾಂಟ್ ಹಾಗೂ ನೀಲಿ ಬಣ್ಣದ ಒಳಉಡುಪು ಧರಿಸಿದ್ದು, ಈ ಬಗ್ಗೆ ಮಾಹಿತಿ ಇದ್ದವರು ಅಥವಾ ಸಂಬಂಧಿಕರು ಮಡಿಕೇರಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.