ಅತಿಥಿ ದೇವೋಭವ- ಈ ಸಂಸ್ಕøತ ವಾಕ್ಯ ನಮ್ಮೆಲ್ಲ ಭಾರತೀಯರ ನೀತಿ ಸಂಹಿತೆಯಂತಿರುವದು ನಿಜ. ಆದರೆ ಈ ನೀತಿಗೆ ತಕ್ಕಂತೆ ಪ್ರಾಯೋಗಿಕವಾಗಿ ಹಾಗೂ ಮುಕ್ತವಾಗಿ ನಡೆದುಕೊಂಡಿದ್ದಲ್ಲಿ, ಭಾರತದಲ್ಲಿ ವಸತಿ ಗೃಹಗಳೇ ಇರುತ್ತಿರಲಿಲ್ಲ್ಲವೇನೋ ? ಪ್ರಯಾಣಿಕರು ಯಾರದೇ ಮನೆಗೆ ಹೋಗಿ, ಅತಿಥಿಯಾಗಿ ಉಳಿಯಲು ಅನುಮತಿ ಪಡೆದು, ಅತಿಥಿ ಸತ್ಕಾರ ಸ್ವೀಕರಿಸುತ್ತಾ ಇರಬಹುದಿತ್ತಲ್ಲವೇ ? ಈ ಕಲಿಯುಗದಲ್ಲಿ ಇದು ಅಸಾಧ್ಯ ಎನ್ನುತ್ತೀರ ? ಆದರೆ ಯಾವದೂ ಅಸಾಧ್ಯವಲ್ಲ...

ಅಲೆಮಾರಿ ಸ್ಫ್ಪೂರ್ತಿ ಹೊಂದಿರುವ, ಐಷಾರಾಮಿ ಕೊಠಡಿಗಳನ್ನು ಬಯಸದ, ತಾವು ತೆರಳುತ್ತಿರುವ ಜಾಗವನ್ನು ಸಂಪೂರ್ಣವಾಗಿ ಅನುಭವಿಸಲಿಚ್ಚಿಸುವ...ಇನ್ನೂ, ಹೊಸ ಹಾಗೂ ಸಮಾನ ಮನಸ್ಕರನ್ನು ಭೇಟಿಯಾಗಲು ಇಚ್ಚಿಸುವ ಪ್ರಯಾಣಿಕರಿಗೆ ಸುಲಭಸಾಧ್ಯವಾಗಿರುವ ಜಾಲತಾಣ - “ಕೌಚ್ ಸರ್ಫಿಂಗ್” ಆಗಿದೆ!

ಫೇಸ್ಬುಕ್, ಟ್ವಿಟರ್, ಇನ್‍ಸ್ಟಾಗ್ರಾಮ್‍ನಂತೆ, ಆದರೂ ಭಿನ್ನವಾಗಿರುವ ಅಂತರ್ರಾಷ್ಟ್ರೀಯ ಜಾಲತಾಣವಾದ “ಕೌಚ್ ಸರ್ಫಿಂಗ್” ಪ್ರಯಾಣಿಕರಿಗೆ ಉಚಿತವಾಗಿ ತಂಗಲು ತಾಣ ಒದಗಿಸಿಕೊಡುತ್ತದೆ!

ಸದ್ಯ, ಇದು ಇನ್ನೂ ಜನಪ್ರಿಯವಾಗಿಲ್ಲದ ಕಾರಣ ಇದರ ಪಾವಿತ್ರ್ಯತೆ ಈಗಲೂ ಉಳಿದುಕೊಂಡಿದೆ.

ನನ್ನ ಈ ಬರಹದ ನಂತರ ಈ ಜಾಲತಾಣಕ್ಕೆ ದೊರಕಬಾರದ, ಬೇಡವಾದ ವಿಚಾರಣೆ ದೊರಕದಿರಲಿ ಎಂದೂ, ಕೊಡಗಿನಲ್ಲಿರುವ ಅಲೆಮಾರಿ ಹುರುಪು ಹೊಂದಿರುವವರಿಗೆ ಉಪಯುಕ್ತವಾಗಲೆಂದು ಭಾವಿಸುತ್ತಾ...ಎಲ್ಲವೂ ಬಿಟ್ಟಿ ಸಿಗಬೇಕೆಂಬ ಮನೋಭಾವ ಉಳ್ಳವರಿಗಂತು ಇದಲ್ಲವೆಂದು ಮೊದಲೇ ತಿಳಿಸುತ್ತೇನೆ.

1999ರಲ್ಲಿಯೇ ಪ್ರಾರಂಭಗೊಂಡ, ಆದರೂ ಈಗ 2-3 ವರ್ಷಗಳಿಂದ ಪ್ರಸಿದ್ಧಿ ಪಡೆಯುತ್ತಿರುವ “ಕೌಚ್ ಸರ್ಫಿಂಗ್”ನ ಕೆಲವು ಮುಖ್ಯವಾದ ಕಾರ್ಯ ನಿರ್ವಹಣಾ ಅಂಶಗಳನ್ನು ತಿಳಿಸಲು ಮುಂದಾಗುತ್ತೇನೆ.

ನಾನು ದಕ್ಷಿಣ ಗುಜರಾತ್‍ಗೆಂದು ಪಯಣ ನಡೆಸಿದ್ದಾಗ, ನನ್ನ ಇನ್ನೊಬ್ಬಳು ಪತ್ರಕರ್ತೆ ಗೆಳತಿ ಅನನ್ಯ- “ನಾವು ಅಹಮದಾಬಾದಿನಲ್ಲಿ ಒಂದು ಯುವ ದಂಪತಿಯರ ಮನೆಯಲ್ಲಿ ತಂಗಲಿದ್ದೇವೆ. ನಾವು ಕೌಚ್ ಸರ್ಫಿಂಗ್ ಮಾಡಲಿದ್ದೇವೆ, ಆದ್ದರಿಂದ ನಾವು ಇವರ ಮನೆಯಲ್ಲಿ ತಂಗುವದಕ್ಕೆ ಹಣ ಪಾವತಿಸ ಬೇಕಿಲ್ಲ,” ಎಂದಳು. ಕೌಚ್ ಸರ್ಫಿಂಗ್ ಬಗ್ಗೆ ಕೇಳಿರದಿದ್ದ ನನಗೆ ಸಂಶಯ ಮನೋವೃತ್ತಿ ಮೂಡಿದರೂ ನನ್ನ ಗೆಳತಿಯ ನಿರ್ಧಾರದ ಮೇಲೆ ಭರವಸೆ ಇಟ್ಟು ಪಯಣದತ್ತ ತೆರಳಿದೆನು. ಅಹಮದಾಬಾದ್‍ನ ಸರ್ದಾರ್ ವಲ್ಲಭಬಾಯಿ ಪಟೇಲ್ ವಿಮಾನ ನಿಲ್ದಾಣ ತಲುಪಿ, ನಾನು ಶಿವಿ ಹಾಗೂ ವಿನಯ್ ದಂಪತಿಗಳಿಗೆ ಕರೆ ನೀಡಿ, ಅವರ ಮನೆ ತಲುಪಿದೆ. ಅಲ್ಲಿ ನನ್ನ ಗೆಳತಿಯೂ ಚೆನ್ನೈನಿಂದ ತಲುಪಿದಳು.

ಕೌಚ್ ಸರ್ಫಿಂಗ್ ಅಪ್ಲಿಕೇಶನ್‍ನಲ್ಲಿ ಅಹಮದಾಬಾದ್‍ನಲ್ಲಿ ತಂಗಲು ಸ್ಥಾನ ಹುಡುಕಿದಾಗ ನನ್ನ ಗೆಳತಿಗೆ ನೂರೆಂಟು ಜನರ ಪ್ರೊಫೈಲ್ ದೊರಕಿತು. ಅವರೆಲ್ಲರ ಬಗ್ಗೆ ಸರಿಯಾಗಿ ಓದಿ, ಅವರ ಪ್ರೊಫೈಲಿಗೆ ಲಗತ್ತಿಸಿರುವ ಇತರ ಪ್ರಯಾಣಿಕರ ಉಲೇಖಗಳನ್ನೆಲ್ಲ ಓದಿ, ಸಂಪೂರ್ಣವಾಗಿ ಅವರ ಕುರಿತಾಗಿ ಸಂಶೋಧಿಸಿ ಕೊನೆಗೆ ಶಿವಿ ದಂಪತಿಯರ ಹೆಸರನ್ನು ಅಂತಿಮ ವಾಗಿ ಆಯ್ಕೆಮಾಡಿ ಅವರಲ್ಲಿ ನಮಗೆ ಒಂದು ದಿನ ಅವರ ಮನೆಯಲ್ಲಿ ತಂಗಲು ಅವಕಾಶ ಕೋರಿದಳು. ಅವರು ನಾವಿಬ್ಬರು ಮಹಿಳೆಯರಾಗಿದ್ದರಿಂದ ತಕ್ಷಣವೇ ಒಪ್ಪಿಕೊಂಡರು.

ಈ ದಂಪತಿ ನಾನು ಮೇಲೆ ಹೇಳಿದ್ದ ಸಂಸ್ಕøತ ವಾಕ್ಯವನ್ನು ಊಹಿಸಿಕೊಳ್ಳಲಾಗದ ರೀತಿಯಲ್ಲಿ ಅನುಸರಿಸಿ ನಿರ್ವಹಿಸಿದರು. ಬೇರೆ ಬೇರೆ ದೇಶಗಳಿಂದ ಬಂದ ಪ್ರಯಾಣಿಕರನ್ನು ಸತ್ಕರಿಸಿದ್ದ ಈ ದಂಪತಿ, ಭಾರತೀಯರನ್ನು ಇದೇ ಮೊದಲ ಬಾರಿಗೆ ಸತ್ಕರಿಸಿದ್ದು. ಉಳಿದುಕೊಳ್ಳಲು ಅಗತ್ಯವಾದ ರೂಮ್ ಅಷ್ಟೇ ಅಲ್ಲ, ರುಚಿಕರವಾದ ತಿಂಡಿ ಹಾಗೂ ಉಪಹಾರ, ತಮ್ಮದೇ ಕಾರಿನಲ್ಲಿ 90 ಕಿ.ಮಿ ನ ನಗರ ತೋರಿಸುವ ಕಾರ್ಯವನ್ನೂ ಕೂಡ ಅವರು ಮಾಡಿದರು. ಬದಲಿಗೆ, ಅವರು ನಮ್ಮಿಂದ ಬಯಸಿದ್ದು-ನಮ್ಮ ಇತರ ಪಯಣಗಳ ಅನುಭವ, ನಮ್ಮ ಕಂಪನಿ ಹಾಗೂ ಕೌಚ್ ಸರ್ಫಿಂಗ್ ಅಪ್ಲಿಕೇಷನ್‍ನಲ್ಲಿ ಅವರ ಬಗ್ಗೆ ಒಳ್ಳೆಯ ನಿಲುವು, ಅಷ್ಟೆ. ಇದಾದನಂತರ, ಇನ್ನೊಂದು ಬಾರಿಯೂ ನಾನು ಕೌಚ್ ಸರ್ಫಿಂಗ್ ಮಾಡಿದ್ದು , ಅದು ಕೂಡ ಸಿಹಿಕರ ಅನುಭವವಾಗಿತ್ತು. ಈ ಅಪ್ಲಿಕೇಷನ್‍ನ ಬಗ್ಗೆ ತಿಳಿಯಬೇಕಾದ ಕೆಲವು ಅಂಶಗಳು:

ಈ ಜಾಲತಾಣ ಸೇರಲು ಯಾವದೇ ಹಣ ಪಾವತಿ ಮಾಡುವದು ಅಗತ್ಯವಲ್ಲದಿದ್ದರೂ, ತಮ್ಮ ಪ್ರೊಫೈಲನ್ನು ಸಂಪೂರ್ಣಗೊಳಿಸಲು, ಹಾಗೂ ಈ ಜಾಲತಾಣ ನಿಯೋಜಿಸುವ ಕೆಲವು ಕಾರ್ಯಕ್ರಮಗಳಿಗೆ ತೆರಳಲು ಕನಿಷ್ಟ ಹಣವನ್ನು ಠೇವಣಿ ಮಾಡಬೇಕು. ಆದರೆ ಇದು ಮಾಡಲೇಬೇಕೆಂಬ ನಿರ್ಬಂಧ ವೇನೂ ಇಲ್ಲ..

ಕೌಚ್ ಸರ್ಫಿಂಗ್ ಸೇರಲು ನೀವು ನಿಮ್ಮ ಮನೆಯನ್ನು ಇತರ ಪಯಣಿಕರಿಗೆ ಒದಗಿಸಿಕೊಡುವ ಅಗತ್ಯವೂ ಇಲ್ಲ. ನೀವು ಇದರಲ್ಲಿ ಬರೀ ಅತಿಥಿಗಳಾಗಿಯೂ ಉಳಿದುಕೊಳ್ಳಬಹುದು. ಆದರೂ, ಒಮ್ಮೆ ಬೇರೆಯವರ ಮನೆಯಲ್ಲಿ ಸರ್ಫಿಂಗ್ ಮಾಡಿದ್ದಲ್ಲಿ, ನೀವೂ ಕೂಡ ನಿಮ್ಮಂತ ಇತರ ಪ್ರಯಾಣಿಕರಿಗೆ ನೆರವಾಗುವ ರೀತಿಯಲ್ಲಿ ನಡೆದುಕೊಳ್ಳಲು ಒಂದು ಕೊಠಡಿ ಒದಗಿಸುವಲ್ಲಿ ಹಿಂಜರಿಯರು ಎಂದು ಭಾವಿಸುತ್ತೇನೆ.

ಇನ್ನು, ಈ ಅಪ್ಲಿಕೇಶನ್ ಬಳಸುವವರು ತಮ್ಮ ಸಂಪೂರ್ಣ ವಿವರಗಳನ್ನು ಈ ಅಪ್ಲಿಕೇಷನ್‍ನಲ್ಲಿ ಭರ್ತಿಮಾಡುವದು ಅತ್ಯಗತ್ಯ ನಿಮ್ಮ ನಂಬಿಕೆ, ನಿಲುವುಗಳು, ಅಭಿರುಚಿಗಳು, ಆಸಕ್ತಿಗಳು... ಹೀಗೆ, ನೀವು ಯಾವ ಕಾರಣಕ್ಕಾಗಿ ಈ ಜಾಲತಾಣ ಸೇರಿಕೊಂಡಿರುವದಾಗಿಯೂ, ಅತಿಥಿಗಳಿಗೆ ನೀವು ಯಾವ ರೀತಿಯ ಸತ್ಕ್ಕಾರ ನೀಡಬಲ್ಲಿರಾ...ಇವೆಲ್ಲವನ್ನು ತಿಳಿಸಬೇಕು. ನಿಮ್ಮ ಈ ಪ್ರೊಫೈಲ್‍ನ ವೈಶಿಷ್ಟ್ಯತೆಯ ಮೇಲೆ, ಹಾಗೂ ನಿಮ್ಮ ಪ್ರಾಮಾಣಿಕತೆಯ ಮೇಲೆ ನಿಮಗೆ ಇಲ್ಲಿ ಸಮಾನ ಮನೋಧರ್ಮ ಹೊಂದಿರುವ ಇತರ ಪ್ರವಾಸಿಗರ ಪರಿಚಯವಾಗುತ್ತಾ, ಅವರು ನಿಮ್ಮೊಡನೆ ಮನೆಯಲ್ಲಿ ಇರಲು ಹಾಗೂ ನೀವು ಅವರೊಂದಿಗೆ ಇರಲು ಅವಕಾಶ ಒದಗಿಸಿಕೊಡುತ್ತದೆ.

ನೀವು ಹೊರ ದೇಶಗಳಿಗೆ ತೆರಳುವಾಗಲೂ ಈ ಜಾಲತಾಣ ಉಪಯೋಗಕ್ಕೆ ಬರುತ್ತದೆ. ಭಾರತದಿಂದ ಓದಲೆಂದು ಹೊರ ದೇಶಗಳಿಗೆ ತೆರಳಿದ ವಿದ್ಯಾರ್ಥಿಗಳಿಗಂತೂ ಇದು ನಿಜವಾಗಿಯೂ ಸ್ವರ್ಗ. ಅದೇ ರೀತಿ, ಹೊರದೇಶ ದಿಂದ ಬಂದ ಪ್ರಯಾಣಿಕರಿಗೂ ಇದು ಬಹಳ ಉಪಯುಕ್ತವಾದ ಜಾಲತಾಣವಾಗಿದೆ.

ಆದರೆ ಮಹಿಳೆಯರು ಸ್ವಲ್ಪ ಜಾಸ್ತಿಯೇ ಎಚ್ಚರವಹಿಸುವದು ಅಗತ್ಯ. ನಾವು ರಾಮರಾಜ್ಯದಲ್ಲಿಲ್ಲ್ಲ ಹಾಗೂ ಇದರಲ್ಲಿರುವ ಎಲ್ಲರಿಗೂ ಒಳ್ಳೆಯ ಮನೋಭಾವ ವಿರುವದಿಲ್ಲ. ಮಹಿಳೆಯರು ಒಬ್ಬರೆ ಪಯಣಿಸುವಾಗ ದಂಪತಿಗಳ ಮನೆಯಲ್ಲೋ, ಇಲ್ಲ ಇನ್ನಿತರ ಮಹಿಳೆಯರ ಮನೆಯಲ್ಲಿ ಉಳಿಯುವದು ಅನುಕೂಲಕರ. ಇದರ ಅರ್ಥ ಎಲ್ಲಾ ಪುರುಷರೂ ಒಂದೇ ಎಂದಲ್ಲ; ನಮ್ಮ ಸುರಕ್ಷತೆಯಲ್ಲಿ ನಾವಿರುವದು ಒಳಿತು ಎಂದಷ್ಟೆ.

ಮಹಿಳೆಯರು ಅತಿಥಿಗಳಾಗಿ ತೆರಳುವ ಸಮಯ ದಲ್ಲಿಯೂ ಎಚ್ಚರವಹಿಸುವದು ಮುಖ್ಯ - ಹಾಗೆಂದು ಮಹಿಳೆಯರು ಪುರುಷರಿಗಿಂತ ನಿರ್ಬಲರು ಎನ್ನುವ ಅಭಿಪ್ರಾಯ ನನ್ನದಲ್ಲ. ನಮ್ಮ ಸಮಾಜದ ಸ್ಥಿತಿ ಈ ರೀತಿಯದ್ದಾಗುತ್ತಿದೆ ಎಂದು ತಿಳಿದು ಮುನ್ನೆಚ್ಚರಿಕೆ ಒಳಿತು! ನನ್ನ ಕೆಲವು ಗೆಳತಿಯರು ಹೆಚ್ಚಾಗಿ ಹೊರದೇಶದವರನ್ನು ಅತಿಥಿಗಳಾಗಿ ಸ್ವೀಕರಿಸುತ್ತಾರೆ. ಇದಕ್ಕೆ ಕಾರಣ, ಅವರು ಭಾರತೀಯ ಪುರುಷರಿಗಿಂತ ಚೆನ್ನಾಗಿ ವರ್ತಿಸುವವರಾಗಿರುತ್ತಾರೆ ಎಂದು. (ಎಲ್ಲಾ ಭಾರತೀಯ ಪುರುಷರೂ ಹಾಗಲ್ಲ ಮತ್ತು ಎಲ್ಲಾ ಹೊರದೇಶದವರೂ ಹಾಗಲ್ಲವಾದರೂ ಇದು ಬಹಳಷ್ಟು ಮಂದಿಯ ನಿಜಸ್ಥಿತಿ ಯಾಗಿರುತ್ತದೆ ಎಂಬುದಕ್ಕೆ ದುಃಖವಾಗುತ್ತದೆ.) ಇದಲ್ಲದೆ, ಹೊರ ದೇಶದವರಿಗೆ ಈ ಕೌಚ್ ಸರ್ಫಿಂಗ್‍ನ ಹೆಚ್ಚಿನ ಉಪಯೋಗತೆ ಇರುತ್ತದೆ. ಇನ್ನು ನನ್ನ ಸಿನಿಮೀಯ ವಾಕ್ಯಗಳನ್ನು ಬದಿಗಿಡುತ್ತಾ, ಒಳ್ಳೆಯ ಉದ್ದೇಶವಿಟ್ಟು, ಆಸಕ್ತರ ಹಿತದೃಷ್ಟಿಯಿಂದ ತಮ್ಮ ಹಾಗೂ ಇನ್ನಿತರರ ಪಯಣವನ್ನು ಸಿಹಿಕರ ಹಾಗೂ ಸಫಲಕರ ಮಾಡುವದಕ್ಕಾಗಿ ಈ ಮಾಹಿತಿ ನೀಡಿದ್ದೇನೆ. ಹೊಸ ಮುಖಗಳನ್ನು ಭೇಟಿಯಾಗುವ ಉದ್ದೇಶ ತಮ್ಮದಾಗಿದ್ದಲ್ಲಿ, ಕೌಚ್ ಸರ್ಫಿಂಗ್‍ನಂತೆ ಇನ್ಯಾವ್ದವಕಾಶವೂ ಲಭ್ಯವಿಲ್ಲ

- ಠಿಜಿಆರ್