ಮಡಿಕೇರಿ, ಮಾ. 20: ಕೊಡಗು ಜಿಲ್ಲಾ ಪತ್ರಕರ್ತರ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿ ಏಪ್ರಿಲ್ 9 ರಂದು ಮೂರ್ನಾಡು ವಿದ್ಯಾಸಂಸ್ಥೆ ಮೈದಾನದಲ್ಲಿ ಆಯೋಜಿಸಲಾಗಿದೆ. ಕೊಡಗು ಜಿಲ್ಲಾ ಪತ್ರಕರ್ತರ ಸಂಘದಿಂದ ಮೂರ್ನಾಡು ಸ್ನೇಹಿತರ ಬಳಗದಿಂದ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಕುಡೆಕಲ್ ಸಂತೋಷ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಥಮ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ಟ್ರೋಫಿ ಹಾಗೂ ಆಟಗಾರರಿಗೆ ವೈಯುಕ್ತಿಕ ಬಹುಮಾನ ವನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಪ್ರಾಯೋಜಿಸಿದ್ದಾರೆ.

ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ 11,111, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ಕೃಷಿಕರಾದ ಚೆಟ್ಟಿಮಾಡ ಅಮರ್ &amdiv; ಜಯಂತ್ 7,777 ರೂ. ನಗದು ಬಹುಮಾನ ನೀಡಲಿದ್ದಾರೆ. ಅಂತಿಮ ಹಣಾಹಣಿಗೆ ಅರ್ಹತೆ ಪಡೆಯದಿರುವ ಕೊನೆಯ ಎರಡು ತಂಡಗಳಿಗೆ ವರ್ತಕ ಎ.ಕೆ. ಪೃಥ್ವಿ ಹರೀಶ ಮತ್ತು ನಿವೃತ್ತ ಯೋಧ ದೀಪಕ್ ತಲಾ 3,333 ರೂ. ನಗದು ಬಹುಮಾನ ಪ್ರಾಯೋಜಿಸಿದ್ದಾರೆ.

ಮಡಿಕೇರಿಯ ಮುದ್ರಣ, ದೃಶ್ಯವಾಹಿನಿ ತಂಡದೊಂದಿಗೆ ವೀರಾಜಪೇಟೆ ಹಾಗೂ ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದ ತಂಡಗಳು ಸೇರಿದಂತೆ ಒಟ್ಟು 4 ತಂಡಗಳು ಪಾಲ್ಗೊಳ್ಳಲಿವೆ. ಹಿರಿಯ ಪತ್ರಕರ್ತರ ತಂಡ ಹಾಗೂ ಪೊಲೀಸ್ ತಂಡದ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ ಎಂದು ತಿಳಿಸಿದ್ದಾರೆ.