ಸೋಮವಾರಪೇಟೆ,ಮಾ.20: ಸೌದೆ ತರಲೆಂದು ತೋಟಕ್ಕೆ ತೆರಳಿದ ದಂಪತಿಗಳ ನಡುವೆ ಕಲಹ ಏರ್ಪಟ್ಟು ಪತ್ನಿಯನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶಾಂತಳ್ಳಿ-ಬಸವನಕಟ್ಟೆ ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ. ಪತ್ನಿಯನ್ನು ಹತ್ಯೆಗೈದಿರುವ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಬನವನಕಟ್ಟೆ ಗ್ರಾಮದ ಪಾರ್ವತಿ (40) ಎಂಬವರೇ ಬರ್ಬರವಾಗಿ ಹತ್ಯೆಯಾದವರಾಗಿದ್ದು, ಆರೋಪಿ ಪತಿ ಧರ್ಮಪ್ಪ ತನ್ನ ಬಳಿಯಿದ್ದ ಕತ್ತಿಯಿಂದ ಪತ್ನಿಯ ಕುತ್ತಿಗೆ ಭಾಗಕ್ಕೆ ಕಡಿದು ಪೈಶಾಚಿಕ ಕೃತ್ಯವೆಸಗಿದ್ದಾನೆ.
ಇಂದು ಮಧ್ಯಾಹ್ನ ಪತಿ ಹಾಗೂ ಪತ್ನಿ ಪಕ್ಕದ ಕೃಷ್ಣಕುಮಾರ್ ಎಂಬವರ ತೋಟಕ್ಕೆ ಸೌದೆ ಕಡಿಯಲೆಂದು ತೆರಳಿದ್ದರು. ಈ ಸಂದರ್ಭ ಈರ್ವರ ನಡುವೆ ಜಗಳ ಏರ್ಪಟ್ಟು ಧರ್ಮಪ್ಪ, ತನ್ನ ಪತ್ನಿಯ ಕುತ್ತಿಗೆ ಭಾಗಕ್ಕೆ ಕಡಿದಿದ್ದಾನೆ ರಕ್ತದ ಮಡುವಿನಲ್ಲಿ ಬಿದ್ದ ಪಾರ್ವತಿ ಸ್ಥಳದಲ್ಲೇ ಇಹಲೋಕ ತ್ಯಜಿಸಿದ್ದಾರೆ.
ಸೌದೆಗೆಂದು ತೆರಳಿದ ಪೋಷಕರು ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆ ಅವರ ಪುತ್ರ ರಕ್ಷಿತ್, ತೋಟದೊಳಗೆ ತೆರಳಿ ವೀಕ್ಷಿಸಿದಾಗ ಘಟನೆ ಬೆಳಕಿಗೆ ಬಂದಿದ್ದು, ಸ್ಥಳೀಯರಿಗೆ ವಿಷಯ ತಿಳಿಸಿದ್ದಾನೆ.
ಸ್ಥಳೀಯರು ಸೋಮವಾರಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತೆ ಪಾರ್ವತಿ ಈರ್ವರು ಮಕ್ಕಳನ್ನು ಅಗಲಿದ್ದಾರೆ.