ಸೋಮವಾರಪೇಟೆ, ಮಾ. 20: ಶಾಂತಳ್ಳಿ ಹೋಬಳಿ ವ್ಯಾಪ್ತಿಗೆ ಒಳಪಡುವ ಬಾಚಳ್ಳಿ ಗ್ರಾಮದಿಂದ ಬೀದಳ್ಳಿ ಗ್ರಾಮದವರೆಗಿನ ಸುಮಾರು 5 ಕಿ.ಮೀ.ನಷ್ಟು ಮುಖ್ಯರಸ್ತೆ ಗುಂಡಿಬಿದ್ದು ಸಂಚಾರಕ್ಕೆ ಅಡಚಣೆಯಾಗಿದ್ದರೂ ದುರಸ್ತಿ ಕಾರ್ಯ ಕೈಗೊಂಡಿಲ್ಲ ಎಂದು ಆರೋಪಿಸಿ ಸಾರ್ವಜನಿಕರು ಇಲ್ಲಿನ ಲೋಕೋಪಯೋಗಿ ಇಲಾಖಾ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಹಲವು ವರ್ಷಗಳಿಂದ ರಸ್ತೆಯ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ಹಲವಷ್ಟು ಬಾರಿ ಅಭಿಯಂತರರ ಗಮನ ಸೆಳೆದಿದ್ದರೂ ಈ ಬಗ್ಗೆ ಯಾವದೇ ಕ್ರಮ ಕೈಗೊಂಡಿಲ್ಲ. ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚದೇ ಇರುವದರಿಂದ ವಾಹನ ಸಂಚಾರಕ್ಕೆ ತೊಡಕಾಗಿದೆ ಎಂದು ಗ್ರಾಮದ ಪ್ರಮುಖರಾದ ಜೆ.ಸಿ. ಉದಯ ಆರೋಪಿಸಿದರು.
ಈ ಬಗ್ಗೆ ಹಲವಷ್ಟು ಬಾರಿ ಸಂಬಂಧಿಸಿದವರಿಗೆ ಮನವಿ ಮಾಡಿದ್ದರೂ ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಸ್ಪಂದಿಸಿದ ಲೋಕೋಪಯೋಗಿ ಇಲಾಖೆಯ ಎಇಇ ಮಹೇಂದ್ರ ಅವರು, ತಕ್ಷಣ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವದು. ಮುಂದಿನ ಏ.15ರ ಒಳಗೆ ರಸ್ತೆಯ ಗುಂಡಿಗಳನ್ನು ಮುಚ್ಚುವದರೊಂದಿಗೆ ಎರಡೂ ಬದಿ ಚರಂಡಿ ನಿರ್ಮಿಸಿ, ಗಿಡಗಂಟಿಗಳನ್ನು ತೆರವುಗೊಳಿಸುವದಾಗಿ ಭರವಸೆ ನೀಡಿದರು.
ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಧರ್ಮಪ್ಪ, ಗ್ರಾ.ಪಂ. ಸದಸ್ಯ ಮಾಚಯ್ಯ, ಗ್ರಾಮದ ಪ್ರಮುಖರುಗಳಾದ ದೇಶ್ರಾಜ್, ಜಯಣ್ಣ, ಚಂದ್ರ, ಕಾಮಾಕ್ಷಿ, ಗಿರಿಜಾ ಸೇರಿದಂತೆ ಇತರರು ಉಪಸ್ಥಿತರಿದ್ದರು.