ಮಡಿಕೇರಿ, ಮಾ. 19: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಡಿಕೇರಿ ಇವರ ವತಿಯಿಂದ ಇತ್ತೀಚೆಗೆ ಮಕ್ಕಳ ಸಂರಕ್ಷಣೆ, ಮಕ್ಕಳ ಹಕ್ಕುಗಳು, ಜೆಜೆ ಕಾಯ್ದೆ, ಪೋಕ್ಸೊ ಕಾಯ್ದೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಹಾಡಿಗಳ ಜನರಿಗೆ ಯಡವನಾಡು ಗಿರಿಜನ ಆಶ್ರಮ ಶಾಲೆಯಲ್ಲಿ ಅರಿವು ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಹೆಚ್.ಐ. ಮಮ್ತಾಜ್, ಜಿ.ಪಂ. ಸದಸ್ಯೆ ಪೂರ್ಣಿಮ ಗೋಪಾಲ್, ಯಡವನಾಡು ಗ್ರಾ.ಪಂ. ಸದಸ್ಯ ಡಿ.ಎಂ. ರಮೇಶ್, ಹಾಡಿ ಮುಖಂಡರಾದ ನಂಜಯ್ಯ, ಉಮೇಶ್ ರಾಜೇ ಅರಸ್, ರವಿ, ಮಹಿಳಾ ಮೇಲ್ವಿಚಾರಕಿ ಸರಳಾಮಣಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು, ಚೈಲ್ಡ್ ಲೈನ್ ಸಿಬ್ಬಂದಿಗಳು, ಸ್ತ್ರೀಶಕ್ತಿ ಸಂಘದ ಸದಸ್ಯರು, ಹಾಡಿಯ ಜನರು ಹಾಗೂ ಶಾಲೆಯ ಮಕ್ಕಳು ಹಾಜರಿದ್ದರು.

ಕಾರ್ಯಕ್ರಮವನ್ನು ಹಾಡಿಯ ಮುಖಂಡರಾದ ನಂಜಯ್ಯ, ಶಾಲೆಯ ವಿದ್ಯಾರ್ಥಿಗಳು ಹಾಗೂ ಇತರ ಗಣ್ಯರು ಕೈಜೋಡಿಸುವದರ ಮೂಲಕ ಉದ್ಘಾಟಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಮುಮ್ತಾಜ್ ಅವರು ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮ ಗಳು, ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಬಗ್ಗೆ ಹಾಗೂ ಪೋಕ್ಸೋ ಕಾಯ್ದೆಯ ಬಗ್ಗೆ ಮಾಹಿತಿ ನೀಡಿದರು. ಪ್ರತಿಯೊಬ್ಬರು ವಿದ್ಯಾವಂತರಾಗಿ ಸಮಾಜಕ್ಕೆ ಮಾದರಿಯಾಗಿರಬೇಕು. ಇಲಾಖೆಯಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸೋಮವಾರಪೇಟೆ ಶಿ.ಅ.ಯೋ ಕಚೇರಿಯ ಹಿರಿಯ ಮಹಿಳಾ ಮೇಲ್ವಿಚಾರಕಿ ಸರಳಾಮಣಿ ಅವರು ಇಲಾಖೆಯಲ್ಲಿರುವ ಸವಲತ್ತುಗಳ ಬಗ್ಗೆ ಮಾತನಾಡಿ, ಹಾಡಿಯ ನಿವಾಸಿಗಳು ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.