ಮಡಿಕೇರಿ, ಮಾ. 19: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೊಡಗು ಪ್ರಾದೇಶಿಕ ಕಚೇರಿ, ಮಡಿಕೇರಿ ವತಿಯಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ನಗರದ ದೇವರಾಜು ಅರಸು ಭವನದಲ್ಲಿ 2016-17ನೇ ಸಾಲಿನ ಕೊಡಗು ಜಿಲ್ಲಾಮಟ್ಟದ ‘ಪರಿಸರ ಮಿತ್ರ’ ಶಾಲಾ ಪ್ರಶಸ್ತಿ ವಿತರಿಸಲಾಯಿತು.

ಜಿಲ್ಲಾಮಟ್ಟದ ‘ಪರಿಸರ ಮಿತ್ರ’ ಶಾಲಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಶಾಲೆಗಳಿಗೆ ‘ಪರಿಸರ ಮಿತ್ರ’ ಶಾಲಾ ಪ್ರಶಸ್ತಿ ವಿತರಿಸಿ ಪ್ರಶಸ್ತಿ ಗಳಿಸಿದ ಶಾಲೆಗಳಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿ’ಸೋಜ, ಪ್ರತಿಯೊಬ್ಬರೂ ಪರಿಸರ ಕಾಳಜಿ ಬೆಳೆಸಿಕೊಂಡಾಗ ಮಾತ್ರ ಉತ್ತಮ ಪರಿಸರ ನಿರ್ಮಿಸಲು ಸಾಧ್ಯ ಎಂದರು.

‘ಪರಿಸರ ಮಿತ್ರ’ ಶಾಲೆಗಳ ಪರಿಸರ ಚಟುವಟಿಕೆಗಳ ಕುರಿತಂತೆ ಹೊರತಂದಿರುವ ‘ಹಸಿರು-ನನಸಾದ ಕನಸು’ ಪುಸ್ತಕವನ್ನು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ವಿ. ಸೂರ್ಯ ಸೇನ್ ಬಿಡುಗಡೆಗೊಳಿಸಿದರು.

ಹಸಿರು ಶಾಲಾ ಪ್ರಶಸ್ತಿ ಹಾಗೂ ಹಳದಿ ಶಾಲಾ ಪ್ರಶಸ್ತಿ ವಿತರಿಸಿ ಮಾತನಾಡಿದ ಮಾಲಿನ್ಯ ನಿಯಂತ್ರಣ ಮಂಡಳಿಯ ಮೈಸೂರು ವಲಯ ಕಚೇರಿ ಹಿರಿಯ ಪರಿಸರ ಅಧಿಕಾರಿ ಕೆ.ಎಂ.ಲಿಂಗರಾಜು, ಈ ಕಾರ್ಯಕ್ರಮದ ಮೂಲಕ ಶಾಲೆಯ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸಲು ವಿವಿಧ ಪರಿಸರ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ‘ಪರಿಸರ ಮಿತ್ರ’ ಶಾಲೆಗಳು ಇತರೆ ಶಾಲೆಗಳಿಗೆ ಮಾದರಿಯಾಗಿವೆ. ಶಿಕ್ಷಕರು ತಮ್ಮ ಮಕ್ಕಳಲ್ಲಿ ಉತ್ತಮ ಪರಿಸರ ಚಟುವಟಿಕೆಗಳನ್ನು ಕೈಗೊಂಡು ಅವರನ್ನು ಪರಿಸರ ರಾಯಭಾರಿಗಳಾಗಿ ರೂಪಿಸಬೇಕು ಎಂದರು.

ಡಿಡಿಪಿಐ ಜಿ.ಆರ್.ಬಸವರಾಜ್ ಮಾತನಾಡಿ ಈ ಕಾರ್ಯಕ್ರಮದ ಮೂಲಕ ಶಾಲೆಗಳನ್ನು ಹಸಿರೀಕರಣಗೊಳಿಸಿ ಶಾಲೆಯ ಪರಿಸರವನ್ನು ಆಕರ್ಷಣೀಯವಾಗಿ ರೂಪಿಸಲು ಕ್ರಮವಹಿಸಲಾಗಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೊಡಗು ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಜಿ.ಆರ್.ಗಣೇಶನ್ ‘ಪರಿಸರ ಮಿತ್ರ’ ಶಾಲೆಗಳು ಅಳವಡಿಸಿಕೊಂಡಿರುವ ಪರಿಸರ ಸ್ನೇಹಿ ಚಟುವಟಿಕೆಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮದ ಸಂಯೋಜಕ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ‘ಪರಿಸರ ಮಿತ್ರ’ ಶಾಲೆಗಳ ಇಕೋ ಕ್ಲಬ್‍ಗಳ ಪರಿಸರ ಚಟುವಟಿಕೆಗಳ ಕುರಿತು ವಿವರಿಸಿದರು. ಪ್ರಶಸ್ತಿ ಗಳಿಸಿರುವ ಶಾಲೆಗಳ ಪರಿಸರ ಚಟುವಟಿಕೆಗಳು ಇತರ ಶಾಲೆಗಳಿಗೆ ಮಾದರಿ ಎಂದರು.

‘ಪರಿಸರ ಮಿತ್ರ’ ಶಾಲೆಯ ಪ್ರಥಮ ಸ್ಥಾನ ಪಡೆದ ಗರಗಂದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎಚ್.ಕೆ.ಪಾರ್ವತಿ, ವಿದ್ಯಾರ್ಥಿನಿ ದೀಪ್ತಿ ಹಾಗೂ ಮೌಲ್ಯಮಾಪನ ತಂಡದ ಯೋಜನಾ ಸಹಾಯಕ ಸಮನ್ವಯಾಧಿಕಾರಿ ಮಹದೇವ್ ಮಾತನಾಡಿದರು.

ಕೂಡಿಗೆ ಡಯಟ್‍ನ ಪ್ರಾಂಶುಪಾಲ ಎಸ್.ದೊಡ್ಡಮಲ್ಲಪ್ಪ, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಅಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯೂ, ಜಿಲ್ಲಾ ಬಿಸಿಎಂ.ಅಧಿಕಾರಿ ಕೆ.ವಿ.ಸುರೇಶ್, ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಉಪಾಧ್ಯಕ್ಷೆ ಡಿ.ಎಂ.ರೇವತಿ, ಸಹ ಕಾರ್ಯದರ್ಶಿ ಎಸ್.ನಾಗರಾಜ್, ಸದಸ್ಯ ಜಿ.ಶ್ರೀಹರ್ಷ ಇತರರು ಇದ್ದರು.

ಶಿಕ್ಷಕ ಪಿ.ಎಸ್.ರವಿಕೃಷ್ಣ ನಿರ್ವಹಿಸಿದರು. ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಂ.ಇ.ಮೊಹಿದ್ದೀನ್ ವಂದಿಸಿದರು. ಕಡಗದಾಳು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪರಿಸರ ಗೀತೆ ಹಾಡಿದರು.

ಗರಗಂದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಪರಿಸರ ಸಂರಕ್ಷಣೆ ಕುರಿತ ರೂಪಕ ಪ್ರದರ್ಶಿಸಿದರು. ಸಮಾರಂಭದಲ್ಲಿ 10 ಹಸಿರು ಶಾಲೆಗಳಿಗೆ ತಲಾ ರೂ. 5 ಸಾವಿರ ನಗದು ಹಾಗೂ 10 ಹಳದಿ ಶಾಲೆಗಳಿಗೆ ತಲಾ ರೂ.4 ಸಾವಿರ ನಗದು ಬಹುಮಾನ ಹಾಗೂ ಜಿಲ್ಲಾಮಟ್ಟದ ‘ಪರಿಸರ ಮಿತ್ರ’ ಶಾಲಾ ಪ್ರಶಸ್ತಿ ಪಡೆದ ಗರಗಂದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೂ.30 ಸಾವಿರ ನಗದು ಬಹುಮಾನ ಹಾಗೂ ಪಾರಿತೋಷಕ ನೀಡಿ ಗೌರವಿಸಲಾಯಿತು.