ಆಲೂರು-ಸಿದ್ದಾಪುರ, ಮಾ. 11: ಶನಿವಾರಸಂತೆ ಪಟ್ಟಣದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‍ಆರ್‍ಟಿಸಿ) ಬಸ್ ನಿಲ್ದಾಣ ನಿರ್ಮಾಣದ ಪ್ರಗತಿ ಕಾರ್ಯ ನೆನೆಗುದಿಗೆ ಬಿದ್ದು 10 ವರ್ಷಗಳು ಕಳೆದಿದೆ, ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುವದಲ್ಲದೆ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ.

ಶನಿವಾರಸಂತೆ ನೆರೆಯ ಹಾಸನ ಜಿಲ್ಲೆಯ ಗಡಿಭಾಗದಲ್ಲಿರುವದರಿಂದ, ಇಲ್ಲಿನ ಕೆಆರ್‍ಸಿ ಸರ್ಕಲ್‍ನಿಂದ ಸಕಲೇಶಪುರ, ಬಿಸ್ಲೆ, ಮಂಗಳೂರು, ಅರಕಲಗೋಡು, ಹಾಸನ ಮುಂತಾದ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿವೆ. ಇಲ್ಲಿಂದ ಜಿಲ್ಲೆಯ ಕುಶಾಲನಗರ, ಮಡಿಕೇರಿ, ವೀರಾಜಪೇಟೆ ಹಾಗೂ ಹೊರ ಜಿಲ್ಲೆಗಳಾದ ಹಾಸನ, ಮಂಗಳೂರು, ಸುಬ್ರಮಣ್ಯ, ಧರ್ಮಸ್ಥಳ, ಮೈಸೂರು, ಬೆಂಗಳೂರು, ಬಾಗೆಪಲ್ಲಿ, ಕೆಜಿಎಫ್ ಮುಂತಾದ ಕಡೆಗಳಿಗೆ ರಾಜ್ಯ ರಸ್ತೆ ಸಾರಿಗೆ ಬಸ್‍ಗಳು ಹಾಗೂ ಗ್ರಾಮೀಣ ರಸ್ತೆ ಸಾರಿಗೆ ಬಸ್‍ಗಳು ಕೂಡ ಓಡಾಡುತ್ತವೆ. ನಿತ್ಯ ಸುಮಾರು 40ಕ್ಕಿಂತ ಹೆಚ್ಚಿನ ಸರಕಾರಿ ಬಸ್‍ಗಳು ಸಂಚರಿಸುತ್ತವೆ. ಆದರೂ ಇಲ್ಲಿ ರಸ್ತೆ ಸಾರಿಗೆ ಬಸ್ ನಿಲ್ದಾಣ ಇಲ್ಲವಾಗಿದೆ.

ದಿನ ನೂರಾರು ಪ್ರಯಾಣಿಕರು ಬಸ್ ನಿಲ್ದಾಣದ ವ್ಯವಸ್ಥೆ ಇಲ್ಲದಿರುವದರಿಂದ ರಸ್ತೆ ಬದಿಯ ಅಂಗಡಿ, ಹೊಟೇಲು, ಕ್ಯಾಂಟೀನುಗಳ ಮುಂದೆ ನಿಲ್ಲುವಂತಾಗಿದೆ. ಈ ಸಮಸ್ಯೆ ಬಗ್ಗೆ ಕಳೆದ 10 ವರ್ಷಗಳ ಹಿಂದೆ ಇಲ್ಲಿ ಸರಕಾರಿ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕೆಂದು ಸ್ಥಳೀಯರು ಗ್ರಾ.ಪಂ.ಗೆ ಮನವಿ ಮಾಡಿದ್ದರು. ನಂತರ ಸಂಬಂಧಿಸಿದ ಶಾಸಕರು ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸಿ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಸೂಕ್ತ ಜಾಗ ಇದ್ದಲ್ಲಿ, ಸರಕಾರದಿಂದ ಅನುದಾನ ಕೊಡಿಸುವ ಭರವಸೆ ನೀಡಿದ್ದರು. ಆದರೆ ಸ್ಥಳೀಯ ಗ್ರಾ.ಪಂ. ಆಸಕ್ತಿ ಕೊರತೆಯಿಂದ ಇದು ನೆನೆಗುದಿಗೆ ಬಿದ್ದಿದೆ. ಸಾರ್ವಜನಿಕರು ಈ ಕುರಿತು ಧ್ವನಿಎತ್ತಿದಾಗ ಮತ್ತೊಮ್ಮೆ ಶಾಸಕರಿಗೆ ಗ್ರಾ.ಪಂ.ಯವರು ಪ್ರಸ್ತಾವನೆ ಸಲ್ಲಿಸಿದ್ದರು. ಈ ಮಧ್ಯೆ ಕಳೆದ ಅವಧಿಯ ಗ್ರಾ.ಪಂ. ವಿಶೇಷ ಗ್ರಾಮಸಭೆಯೊಂದರಲ್ಲಿ, ಸಂತೆ ಮಾರುಕಟ್ಟೆ ಜಾಗದ ಹಿಂಭಾಗ ಅಥವಾ ಪ್ರವಾಸಿ ಮಂದಿರದ ಹಿಂಭಾಗದಲ್ಲಿರುವ ಜಾಗದಲ್ಲಿ ಕೆಎಸ್‍ಆರ್‍ಟಿಸಿ ನಿಲ್ದಾಣ ನಿರ್ಮಿಸು ವಂತೆ ತೀರ್ಮಾನಿಸಲಾಗಿತ್ತು.

ಆದರೆ ಬಸ್ ನಿಲ್ದಾಣ ನಿರ್ಮಾಣಕ್ಕೆ 4 ಏಕರೆ ಜಾಗ ಬೇಕಾಗುತ್ತದೆ ಎಂದು ತಿಳಿದ ಮೇಲೆ ಗ್ರಾ.ಪಂ. ಈ ವಿಚಾರವನ್ನು ಕೈಬಿಟ್ಟಿತ್ತು. ಒಟ್ಟಿನಲ್ಲಿ ಶನಿವಾರಸಂತೆ ವ್ಯಾಪ್ತಿಯಲ್ಲಿ ಸರಕಾರಿ ಬಸ್ ನಿಲ್ದಾಣವಿಲ್ಲದೆ ನಾಗರಿಕರು ಪರದಾಡುವಂತಾಗಿದೆ.

- ದಿನೇಶ್ ಮಾಲಂಬಿ