ಮಡಿಕೇರಿ, ಮಾ. 11: ನೀವು ಮಾಡುತ್ತಿರುವ ಈ ಕಸುಬಿಗೆ ವಿಶೇಷವಾದ ಹೆಸರೇನಾದರು ಇದೆಯೇ? ಸ್ವಲ್ಪ ಸಮಯ ಯೋಚಿಸಿ... ನಾವು ಗಾಂಧೀಜಿಯವರು ಮಾಡುತ್ತಿದ್ದ ಕಸುಬನ್ನು ಮುಂದುವರಿಸುತ್ತಿದ್ದೇವೆ, ಎನ್ನುತ್ತಾನೆ ಸಮೀಮ್.

ಮಡಿಕೇರಿಯ ಎಲ್.ಐ.ಸಿ. ರಸ್ತೆಯಲ್ಲ್ಲಿ ಕಳೆದ ಮೂರು ತಿಂಗಳಿನಿಂದ ಸಮೀಮ್ ಹಾಗೂ ಖಾಮ್‍ರುದ್ದಿನ್‍ನ ‘ಬೆಸ್ಟ್ ಹ್ಯಾಂಡ್ಲೂಮ್ಸ್’ ಎಂಬ ತಾತ್ಕಾಲಿಕ ಅಂಗಡಿಯೊಂದನ್ನು ಪ್ರಾರಂಭಿಸಿದ್ದು ತನ್ನ ಖ್ಯಾತಿಯನ್ನು ಮಡಿಕೇರಿಯ ಸುತ್ತ್ತಮುತ್ತ ಹಬ್ಬಿಸುತ್ತಿದೆ. ಕಟ್ ಕಟ್ ಕಟ್ ಕಟ್ ಎಂದು ಸಮೀಮ್ ಕೈಮಗ್ಗ ಯಂತ್ರ ಚಲಾಯಿಸಿ ಜಮಖಾನ ಹೊಲಿಯುತ್ತಿದ್ದರೆ, ಖಾಮ್‍ರುದ್ದಿನ್ ನಿರಂತರ ಹಾದುಹೋಗುವ ಗ್ರಾಹಕರು ತಂದ ಬಟ್ಟೆಗಳನ್ನು ತೂಕಮಾಡುತ್ತಾ, ಅವರು ಬಯಸುವ ಉತ್ಪನ್ನದ ಬಗ್ಗೆ ಮಾಹಿತಿ ನೀಡುತ್ತಿರುತ್ತಾನೆ.

ಇವರು ಮಾಡುವ ಕೆಲಸವೇನು ಎಂದು ಕೇಳುತ್ತೀರ? ಹಳೆ ಸೀರೆ, ಹರಿದುಹೋದ ಪ್ಯಾಂಟ್, ಬಣ್ಣಗುಂದಿದ ಅಂಗಿ... ಯಾವದೇ ಹಳೆ ಬಟ್ಟೆಯಾಗಿರಲಿ, ಇವರು ಅವನ್ನೆಲ್ಲ ನೂಲಿಗೆ ಕರಗಿಸಿ, ಮೂರೇ ದಿವಸದೊಳಗೆ ವರ್ಣಮಯವಾದ ಜಮಖಾನ, ಬೆಡ್ ಶೀಟ್ ಹಾಗೂ ಡೋರ್ ಮ್ಯಾಟ್ ತಯಾರಿಸಿ, 100 ರಿಂದ 400 ರೂಪಾಯಿಗೆ ಗ್ರಾಹಕರಿಗೆ ಹಿಂದಿರುಗಿಸುತ್ತಾರೆ. ಇವರ ಪ್ರಧಾನ ಅಂಗಡಿ ಮೈಸೂರಿನಲ್ಲಿರುವ ಕಾರಣ, ಗ್ರಾಹಕರಿಂದ ಸಂಗ್ರಹಿಸಿದ ಹಳೆ ಬಟ್ಟೆಗಳನ್ನು ಮೈಸೂರಿಗೆ ಕಳುಹಿಸುತ್ತಾರಾದರೂ, ಅವರು ಅಲ್ಲಿಯೇ ನೇಯುತ್ತಿರುವ ಡೋರ್ ಮ್ಯಾಟ್‍ಗಳನ್ನು ಗ್ರಾಹಕರು ಖುದ್ದಾಗಿ ನೋಡಬಹುದು. ಇವರು ತಯಾರಿಸಿದ ವಸ್ತುಗಳು ಮಾರುಕಟ್ಟೆಯಲ್ಲಿ ದೊರೆಯುವ ವಸ್ತುಗಳಷ್ಟೇ ಯೋಗ್ಯತೆ ಹೊಂದಿರುವಂತೆ ಕಂಡುಬರುತ್ತದೆ.

ದೆಹಲಿಯಿಂದ ಬಂದ ಈ ಜೋಡಿ, ಹುಬ್ಬಳ್ಳಿ, ಧಾರವಾಡ, ರಾಯಚೂರು, ಮೈಸೂರು ಹಾಗೂ ಕೊಡಗಿನ ಕುಶಾಲನಗರ, ಸೋಮವಾರಪೇಟೆ, ಶನಿವಾರಸಂತೆ ಮತ್ತು ಈಗ ಮಡಿಕೇರಿಯಲ್ಲಿ ತಮ್ಮ ಕಸುಬಿನ ಖ್ಯಾತಿ ಹಾಗೂ ಅದರ ಕ್ರಿಯಾತ್ಮಕ ಗುಣಗಳನ್ನು ಗ್ರಾಹಕರಲ್ಲಿ ಪಸರಿಸಿದ್ದಾರೆ. “ಯೆ ಹಮಾರ ಖಾನ್‍ಧಾನಿ ಕಾಮ್ ಹೆ (ಇದು ನಮ್ಮ ಕುಟುಂಬದ ಉದ್ಯೋಗ. ನಮ್ಮ ಪೂರ್ವಜರೂ ಇದೇ ಕಸುಬನ್ನು ಮಾಡಿ ಬದುಕಿದವರಾಗಿದ್ದರು),” ಎಂದು ಸಮೀಮ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ದೆಹಲಿಯಲ್ಲಿ ಇಂತಹ ಕಸುಬು ಮಾಡುವವರು ಬೀದಿಗೆ ಮೂರರಂತೆ ಕುಶಲಕರ್ಮಿಗಳಿರುವ ಕಾರಣ, ಈ ಜೋಡಿ ಕರ್ನಾಟಕಕ್ಕೆ ವಲಸೆ ಬಂದಿರುವದಾಗಿಯೂ, ಮಳೆಗಾಲದಲ್ಲಿ ದೆಹಲಿಯಲ್ಲಿರುವ ತಮ್ಮ ಪರಿವಾರದೊಡನೆ ಮತ್ತೆ ಸೇರುವದಾಗಿಯೂ ಇವರು ತಿಳಿಸುತ್ತಾರೆ. ಅಲೆಮಾರಿ ಜೀವನ ನಡೆಸುವವರು ಇವರಾದರೂ ಈ ಮಂದಿ ತಾವು ಮಾಡುವ ಕಸುಬನ್ನು ಪೂಜಿಸುವವರೂ ಆಗಿದ್ದಾರೆ.

ಮನೆಯಲ್ಲಿ ರಾಶಿ ಇರುವ ಹಳೆ ಬಟ್ಟೆಗಳನ್ನು ಹೊಸ ವಿನ್ಯಾಸಕ್ಕೆ ಪರಿವರ್ತಿಸಲು, ಪ್ರತಿಭಾವಂತ ಕಸುಬುಗಾರರಿಗೆ ನೀವು ಈ ಕೆಳಗಿನ ಸಂಖ್ಯೆಗಳಿಗೆ ಕರೆ ಮಾಡಬಹುದು - 9164123604, 9148331625. - Pಜಿಆರ್