ಮಡಿಕೇರಿ, ಮಾ. 11: ಮಹಿಳಾ ಮತ್ತು ಮಕ್ಕಳ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಮೇಪಾಡಂಡ ಸವಿತಾ ಕೀರ್ತನ್ ಅವರು ತಮ್ಮ ವ್ಯಾಪ್ತಿಯ ಸುಮಾರು 50 ಅಂಗನವಾಡಿಯ ಕಾರ್ಯಕರ್ತೆಯರೊಂದಿಗೆ ವಿನೂತನವಾಗಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿದರು.

ಮಡಿಕೇರಿಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ ಸಾವಯವ ತರಕಾರಿ ಬೆಳೆ ಬಗ್ಗೆ ಮಾಹಿತಿ ಪಡೆಯುವದರ ಮೂಲಕ ವಿನೂತನ ಮಾದರಿಯಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ವಿವಿಧ ರೀತಿಯ ತರಕಾರಿಗಳು, ವಿವಿಧ ರೀತಿಯ ಆಂತೋರಿಯಂಗಳನ್ನು ಸುಲಭವಾಗಿ ಕೊಡಗಿನ ಗದ್ದೆಗಳಲ್ಲಿ ಮತ್ತು ಹೂ ಕುಂಡಗಳಲ್ಲಿ ಬೆಳೆಸುವ ಬಗ್ಗೆ ಬಹಳ ವಿವರವಾಗಿ ಸಂಸ್ಥೆಯ ಅಧೀಕ್ಷಕ ರಾಜಶೇಖರ ಭಾಸ್ಕರ್‍ರವರು, ಅಸಿಸ್ಟೆಂಟ್ ಪ್ರೊಫೆಸರ್‍ಗಳಾದ ಹೀನಾ ಮತ್ತು ಪ್ರವೀಣ್‍ರವರು ತಿಳಿಸಿಕೊಟ್ಟರು.

ಅಂಗನವಾಡಿ ಕೇಂದ್ರಗಳಿಗೆ ಸ್ತ್ರೀಶಕ್ತಿ ಗುಂಪಿನವರಿಗೆ ತರಕಾರಿ ನರ್ಸರಿಯನ್ನು ಮಾಡಿ ಕೊಡಲು ಕೇಳಿಕೊಳ್ಳಲಾಗಿ ಒಪ್ಪಿರುತ್ತಾರೆ. ನಂತರ ಕೃಷಿ ಸಂಶೋಧನಾ ಕಚೇರಿಗೆ ಭೇಟಿ ನೀಡಿ ಹೂ ಕುಂಡಗಳಲ್ಲಿ ತರಕಾರಿಗಳನ್ನು ಬೆಳೆಸಿರುವ ಮಾದರಿಯನ್ನು ವೀಕ್ಷಿಸಿ ಕಚೇರಿಯಿಂದ ತಾಜಾ ತರಕಾರಿಗಳನ್ನು ಕೊಂಡುಕೊಳ್ಳಲಾಯಿತು. ಗ್ರಾಮಗಳಲ್ಲಿ ಮಹಿಳೆಯರಿಗೆ ಮಾಹಿತಿ ಮತ್ತು ಅರಿವು ನೀಡಿ ಆರೋಗ್ಯ ವೃದ್ಧಿಸಲು ಕರೆ ನೀಡಲಾಯಿತು.