ಸುಂಟಿಕೊಪ್ಪ, ಮಾ. 11: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯಾಗಿದ್ದು ಇನ್ನೂ ಜನ ಸಾಮಾನ್ಯರಿಗೆ ಈ ನೀರಿನ ಸೌಲಭ್ಯ ಲಭ್ಯವಾಗಿಲ್ಲ.
ಸುಂಟಿಕೊಪ್ಪ ನಾಡು ಕಚೇರಿ ಒತ್ತಿನಲ್ಲಿ ರಾಜ್ಯ ಸರಕಾರದ ವತಿಯಿಂದ ಶಾಸಕರ ನಿಧಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಈ ಘಟಕದ ಕಾಮಗಾರಿ ನಡೆದು ಹಲವು ತಿಂಗಳುಗಳೇ ಕಳೆದರೂ ಇನ್ನೂ ಉದ್ಘಾಟನೆಯ ಭಾಗ್ಯ ಲಭಿಸಿಲ್ಲ ಬೇಸಿಗೆಯ ಬೇಗೆಯಿಂದ ನೀರಿಗಾಗಿ ಈಗಾಗಲೇ ತತ್ವಾರ ಆರಂಭವಾಗಿದೆ. ನಾರ್ಗಾಣೆ ವಿಭಾಗದಲ್ಲಿ ನಲ್ಲಿಯಿಂದ ಬರುತ್ತಿರುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಕಲುಷಿತ ನೀರು ಬರುತ್ತಿದೆ ಎಂಬ ದೂರು ಗ್ರಾಮಸ್ಥರಿಂದ ಕೇಳಿ ಬಂದಿದೆ. ಬೇಸಿಗೆಯ ಈ ಸಂದರ್ಭದಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಜನರಿಗೆ ಲಭಿಸಿದರೆ ಒಳಿತಾಗುತಿತ್ತು. ಆದರೆ ಖಾಸಗಿ ನೀರು ಸರಬರಾಜುದಾರರ ಒತ್ತಡದಿಂದಲೋ ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯದಿಂದಲೋ ಈ ಶುದ್ಧ ಕುಡಿಯುವ ನೀರು ಜನರಿಗೆ ಇನ್ನೂ ಲಭ್ಯವಾಗಿಲ್ಲ.
ಸುಂಟಿಕೊಪ್ಪ ಹೃದಯ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದರೆ ವಾಹನ ಮಾಲೀಕರಿಗೆ ಜನಸಾಮಾನ್ಯರಿಗೆ ಒಳಿತಾಗುತಿತ್ತು. ಕಂದಾಯ ನಾಡು ಕಚೇರಿ ಒತ್ತಿನಲ್ಲಿ ನೀರು ಘಟಕ ಸ್ಥಾಪಿಸಿರುವದರಿಂದ ಜನರಿಗೆ ಅನಾನುಕೂಲವಾಗಿದೆ ಎಂದು ಬಹಳಷ್ಟು ಮಂದಿಯ ಅಭಿಪ್ರಾಯವಾಗಿದೆ.
ಸುಂಟಿಕೊಪ್ಪ ಹೋಬಳಿಯಲ್ಲಿ ಕೆದಕಲ್, 7ನೇ ಹೊಸಕೋಟೆ, ಸುಂಟಿಕೊಪ್ಪ, ಕಂಬಿಬಾಣೆ, ಕೊಡಗರಹಳ್ಳಿ, ನಾಕೂರು-ಶಿರಂಗಾಲ, ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಒಳಪಡುತ್ತಿದ್ದು, ಈ ವ್ಯಾಪ್ತಿಯ ಜನರು ಪ್ರತಿನಿತ್ಯ ಸುಂಟಿಕೊಪ್ಪಕ್ಕೆ ಕೆಲಸ ಕಾರ್ಯ ನಿಮಿತ್ತ ಬರುತ್ತಿದ್ದಾರೆ. ಶುದ್ಧ ಕುಡಿಯುವ ನೀರು ಘಟಕ ಉದ್ಘಾಟನೆಯಾದರೆ ಜನರಿಗೆ ಪ್ರಯೋಜನವಾಗುತಿತ್ತು.
ಈ ಬಗ್ಗೆ ಸಂಬಂಧಿಸಿದವರು ಶೀಘ್ರದಲ್ಲೇ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ರಕ್ಷಣಾ ವೇದಿಕೆಯ ಹೋಬಳಿ ಅಧ್ಯಕ್ಷ ನಾಗೇಶ್ ಪೂಜಾರಿ ಆಗ್ರಹಿಸಿದ್ದಾರೆ.