ಕುಶಾಲನಗರ, ಮಾ. 11: ಧಾರ್ಮಿಕ ಕಾರ್ಯಕ್ರಮಗಳಿಗೆ ಇತ್ತೀಚಿನ ದಿನಗಳಲ್ಲಿ ಕೆಲವು ಪೊಲೀಸ್ ಅಧಿಕಾರಿಗಳಿಂದ ಕಿರುಕುಳವಾಗುತ್ತಿರುವ ಬಗ್ಗೆ ಕುಶಾಲನಗರ ದೇವಾಲಯಗಳ ಒಕ್ಕೂಟ ಆತಂಕ ವ್ಯಕ್ತಪಡಿಸಿದೆ. ಕುಶಾಲನಗರದ ಕನ್ನಿಕಾ ಇಂಟರ್‍ನ್ಯಾಷನಲ್ ಸಭಾಂಗಣದಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ಈ ಬಗ್ಗೆ ಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಧಾರ್ಮಿಕ ಕಾರ್ಯಕ್ರಮಗಳಿಗೆ ಪೊಲೀಸ್ ಅಧಿಕಾರಿಯೊಬ್ಬರು ಅಡ್ಡಿಪಡಿಸುತ್ತಿರುವ ಕ್ರಮವನ್ನು ವಿರೋಧಿಸಿದ್ದಾರೆ.
ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯ ಮಂದಿರ, ಮಸೀದಿ, ಚರ್ಚ್‍ಗಳ ಮೂಲಕ ಹಲವು ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದು ಈ ನಡುವೆ ಸ್ಥಳೀಯ ಪೊಲೀಸ್ ವೃತ್ತ ನಿರೀಕ್ಷಕರು ಅನವಶ್ಯಕ ಗೊಂದಲ ಮೂಡಿಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳ ಬಳಿ ತೆರಳಿ ವಾಸ್ತವಾಂಶವನ್ನು ತಿಳಿಸುವ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಈ ತಿಂಗಳ 12 ರಂದು ಹೋಳಿ ಹುಣ್ಣಿಮೆ ಅಂಗವಾಗಿ ಕಾವೇರಿ ನದಿಗೆ 63ನೇ ಮಹಾ ಆರತಿ ಸಂದರ್ಭ ವಿವಿಧ ಸಂಘಟನೆ ಗಳೊಂದಿಗೆ ದೇವಾಲಯಗಳ ಒಕ್ಕೂಟದ ವತಿಯಿಂದ ಮಳೆಗಾಗಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲು ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ನಿರ್ಧರಿಸಲಾಯಿತು.
ಒಕ್ಕೂಟದ ಅಧ್ಯಕ್ಷ ಕೆ.ಆರ್. ಶಿವಾನಂದನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ಥಳೀಯ ದೇವಾಲಯಗಳ ಆಡಳಿತ ಮಂಡಳಿಗಳ ಪ್ರಮುಖರಾದ ವಿ.ಎನ್. ವಸಂತಕುಮಾರ್, ಶ್ರೀನಿವಾಸರಾವ್, ಕೆ.ಕೆ. ದಿನೇಶ್, ಬಿ.ಆರ್. ನಾಗೇಂದ್ರಪ್ರಸಾದ್, ರಾಮ್‍ದಾಸ್, ಎಂ.ಕೆ. ದಿನೇಶ್, ಎಂ.ಎಸ್. ಶಿವಾನಂದ್, ವಿ.ಪಿ. ನಾಗೇಶ್, ಎಂ.ಎಸ್. ಮೊಗಣ್ಣೇಗೌಡ, ವಾಮನಭಂಡಾರಿ ಮತ್ತಿತರರು ಸಲಹೆ ಸೂಚನೆ ನೀಡಿದರು.
ಸಭೆಯಲ್ಲಿ ಕುಶಾಲನಗರ ಮತ್ತು ಮುಳ್ಳುಸೋಗೆ ವ್ಯಾಪ್ತಿಯ 19 ದೇವಾಲಯಗಳ ಸಮಿತಿಯ ಅಧ್ಯಕ್ಷರುಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಒಕ್ಕೂಟದ ಕಾರ್ಯದರ್ಶಿ ಡಿ.ಆರ್. ರಾಜೇಶ್ ಸ್ವಾಗತಿಸಿದರು, ಎಂ.ಎನ್. ಚಂದ್ರಮೋಹನ್ ಪ್ರಾಸ್ತಾವಿಕ ನುಡಿಗಳಾಡಿದರು. ಡಿ.ಆರ್. ಸೋಮಶೇಖರ್ ವಂದಿಸಿದರು.