ಕುಶಾಲನಗರ, ಮಾ. 5: ಕೊಡಗು ಜಿಲ್ಲೆಯ ಮತದಾರರು ಮುಂದಿನ ಚುನಾವಣೆಯಲ್ಲಿ ಎರಡೂ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯತ್ತ ಒಲವು ತೋರಿಸಿ ಜಯಶೀಲರನ್ನಾಗಿಸಬೇಕೆಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್.ಸೀತಾರಾಂ ಕರೆ ನೀಡಿದರು.

ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಕುಶಾಲನಗರದ ಕಾರು ನಿಲ್ದಾಣದಲ್ಲಿ ತಾ. 4 ರಂದು ಬಹಿರಂಗ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಜನ ವೇದನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಿಲ್ಲೆಯ ಬಿಜೆಪಿಯ ಇಬ್ಬರು ಶಾಸಕರು ಜಿಲ್ಲೆಗೆÉ ಯಾವದೇ ರೀತಿಯ ಅಭಿವೃದ್ಧಿ ಬಗ್ಗೆ ಚಿಂತನೆ ಹರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪಕ್ಷದ ಮುಖಂಡರು ಚುನಾವಣೆ ಸಂದರ್ಭ ಹೊರತುಪಡಿಸಿ ಇತರೆ ಸಮಯದಲ್ಲೂ ಕೂಡ ಜನತೆಯ ಸಂಕಷ್ಟಗಳನ್ನು ಆಲಿಸಿ ಪರಿಹಾರಕ್ಕೆ ಮುಂದಾಗಬೇಕಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ರೇಷ್ಮೆ ಮಂಡಳಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಮಾತನಾಡಿ, ಬಿಜೆಪಿ ಪಕ್ಷದಿಂದ ದೇಶದ ಜನತೆ ಇಂದು ಸಂಕಷ್ಟ ಅನುಭವಿಸುತ್ತಿದ್ದಾರೆ. ಕಪ್ಪು ಹಣ ನಿಯಂತ್ರಣ ಹಾಗೂ ದೇಶದ ಅಭಿವೃದ್ಧಿ ಹೆಸರಲ್ಲಿ ಪ್ರಧಾನಿ ಮೋದಿ ಕೈಗೊಂಡ ನೋಟು ಅಮಾನ್ಯಕರಣ ಚಿಂತನೆ ಹುಸಿಯಾಗಿದ್ದು ಸಾಮಾನ್ಯ ಜನತೆಯನ್ನು ಸಂಕಷ್ಟಕ್ಕೆ ದೂಡಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ದೇಶದ ಜನತೆಯನ್ನು ಭ್ರಮೆಯ ಅಲೆ ಹಾಗೂ ಮಾತಿನ ಮೋಡಿಯ ಮೂಲಕ ಮರುಳು ಮಾಡಿ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ. ಆದರೆ ಅಧಿಕಾರಕ್ಕೆ ಬಂದು 3 ವರ್ಷಗಳು ಕಳೆಯುತ್ತಾ ಬಂದರೂ ಯಾವೊಂದು ಭರವಸೆಗಳೂ ಕೂಡ ಇದುವರೆಗೆ ಈಡೇರಿಲ್ಲ ಎಂದರು.

ಕಾರ್ಯಕರ್ತರು ಅಸಮಾಧಾನ

ಕಾರ್ಯಕ್ರಮದಲ್ಲಿ ಇಂಟೆಕ್ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಅವರಿಗೆ ಮಾತನಾಡಲು ಅವಕಾಶ ನೀಡದ ಹಿನ್ನಲೆಯಲ್ಲಿ ಕೆಲವು ಕಾರ್ಯಕರ್ತರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿ ಸಭೆಯಿಂದ ಹೊರ ನಡೆಯಲು ಮುಂದಾದಾಗ ನಂತರ ಉಸ್ತುವಾರಿ ಸಚಿವರು ಕಾರ್ಯಕರ್ತರನ್ನು ಸಮಾಧಾನಿಸಿ ದರು.

ಈ ಸಂದರ್ಭ ಕೆಪಿಸಿಸಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹುಸೇನ್, ಮಾಜಿ ಸಚಿವರಾದ ಸಿದ್ದರಾಜು, ಅರಣ್ಯ ಅಭಿವೃದ್ಧಿ ನಿಗಮ ಉಪಾಧ್ಯಕ್ಷರಾದ ಪದ್ಮಿನಿ ಪೊನ್ನಪ್ಪ, ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಚಂಗಪ್ಪ, ಕೆ.ಕೆ.ಮಂಜುನಾಥ್‍ಕುಮಾರ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಕೆ.ಪಿ.ಚಂದ್ರಕಲಾ, ಸುನಿತಾ, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ್ ಗುಂಡೂರಾವ್, ಮಾಜಿ ಅಧ್ಯಕ್ಷ ಎಸ್.ಎನ್.ನರಸಿಂಹಮೂರ್ತಿ, ಪಟ್ಟಣ ಪಂಚಾಯ್ತಿ ಸದಸ್ಯರಾದ ಹೆಚ್.ಜೆ.ಕರಿಯಪ್ಪ, ಪ್ರಮೋದ್ ಮುತ್ತಪ್ಪ, ಶಿವಶಂಕರ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರುಗಳಾದ ಲೋಕೇಶ್, ಬಿ.ಎಸ್.ಚಂದ್ರಶೇಖರ್, ಪ್ರಮುಖರಾದ ಪುಷ್ಪಲತಾ, ಚಂದ್ರಮೌಳಿ ಮತ್ತಿತರರು ಇದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬೈಚನಹಳ್ಳಿಯ ಮಾರಿಯಮ್ಮ ದೇವಾಲಯದಿಂದ ಮೆರವಣಿಗೆ ಹೊರಟ ಕಾರ್ಯಕರ್ತರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಬಿಜೆಪಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.