ಮಾನ್ಯರೆ,

ಕೃಷಿ ಇಲಾಖೆ, ಜಿಲ್ಲಾ ಪಂಚಾಯಿತಿ, ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯಡಿ ರೈತರ ಅನುಕೂಲಕ್ಕಾಗಿ ಕೆಲವು ನಿಗದಿತ ಸ್ಥಳದಲ್ಲಿ ಯಂತ್ರೋಪಕರಣಗಳನ್ನು ಇಟ್ಟು ಕಡಿಮೆ ದರದ ಬಾಡಿಗೆಗೆ ನೀಡುತ್ತಾರೆ. ಇದೊಂದು ಉತ್ತಮ ಯೋಜನೆ. ಕೆಲವು ಯಂತ್ರಗಳನ್ನು ಹೊರ ರಾಜ್ಯದಿಂದ ತರಿಸುತ್ತಾರೆ.

ಅದರಲ್ಲಿ ಕೆಲವು ಕೊಡಗಿನ ಭೌಗೋಳಿಕ ಲಕ್ಷಣಗಳಿಂದಾಗಿ ಇಲ್ಲಿಯ ಭೂಮಿಗೆ ಹೊಂದಾಣಿಕೆ ಆಗುವದಿಲ್ಲ. ಇನ್ನು ದುರಸ್ತಿಗೆ ಬಂದರೆ ಗೋಣಿಕೊಪ್ಪದ ಸರಬರಾಜುದಾರರಿಗೆ ತಿಳಿಸಿ (ಅವರು ಸಮಿತಿ ಸದಸ್ಯರು ಎಂಬ ಮಾತು ಕೇಳಿಬರುತ್ತಿದೆ) ನಂತರ ಅವರ ಮುಖಾಂತರ ಸಂಸ್ಥೆಗೆ ತಿಳಿಸಿ ಅವರ ತಂತ್ರಜ್ಞರು ಬರುವವರೆಗೆ ವಾರಗಟ್ಟಲೆ ಕಾಯಬೇಕಾದ ಪರಿಸ್ಥಿತಿ. ಭತ್ತ ಕೊಯ್ಲು, ಒಕ್ಕಣೆ, ಗದ್ದೆ ಉಳುಮೆ ಮುಂತಾದ ಕೆಲಸ ಆಯಾಯ ಸಮಯದಲ್ಲೇ ನಡೆಯಬೇಕು. ಬಹಳ ದಿನ ಕಾಯಲು ಸಾಧ್ಯವಾಗದು. ರೈತರು ನಷ್ಟ ಅನುಭವಿಸಬೇಕಾಗುತ್ತದೆ. ಜೊತೆಗೆ ಚಾಲಕರ ಕೊರತೆಯೂ ಇದೆ.

ದಯವಿಟ್ಟು ಕೊಡಗಿನ ಗದ್ದೆಗಳಿಗೆ ಹೊಂದಾಣಿಕೆಯಾಗುವ ಗಾಲಿ ಚಾಲ್ತಿಯಲ್ಲಿರುವ ಉತ್ತಮ ಮಾದರಿಯ ಯಂತ್ರೋಪಕರಣಗಳನ್ನು ತರಿಸುವದು ಸೂಕ್ತ. ಜೊತೆಗೆ ಅಗತ್ಯ ಚಾಲಕರ ಮತ್ತು ಮೆಕಾನಿಕ್ ನೇಮಕಾತಿಯನ್ನು ಮಾಡಿದರೆ ಯೋಜನೆ ಇನ್ನಷ್ಟು ಸಫಲತೆಯನ್ನು ಕಾಣಬಹುದು.

- ನಾಟೋಳಂಡ ಚರ್ಮಣ, ಕಡಿಯತ್ತೂರು.