ಸೋಮವಾರಪೇಟೆ, ಫೆ. 1: ದಡಾರ ಹಾಗೂ ರುಬೆಲ್ಲಾ ಕಾಯಿಲೆಗಳನ್ನು 2020ರೊಳಗೆ ಸಂಪೂರ್ಣವಾಗಿ ನಿರ್ಮೂಲನೆ ಗೊಳಿಸಲು ಸರ್ಕಾರ ಚಿಂತನೆ ನಡೆಸಿದ್ದು, ಈ ಸಂಬಂಧ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಇಲ್ಲಿನ ಸರ್ಕಾರಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಜಸ್ವಂತ್ ತಿಳಿಸಿದರು. ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು,ಶುಶ್ರೂಷಕಿಯರು ಹಾಗೂ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಿಗೆ ಆಯೋಜಿಸಿದ್ದ ದಡಾರ-ರುಬೆಲ್ಲಾ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ದಡಾರ ಕಾಯಿಲೆಯು ಮಾರಣಾಂತಿಕ ಕಾಯಿಲೆಯಾಗಿದ್ದು, ಅದರ ಸೋಂಕು ಹೆಚ್ಚಾಗಿ ಮಕ್ಕಳನ್ನು ಬಾಧಿಸುತ್ತದೆ. ಮಕ್ಕಳಿಗೆ ಜ್ವರ, ಮೂಗುಸೋರುವಿಕೆ, ಕಣ್ಣಿನಲ್ಲಿ ನೀರು ಬರುವದು, ಮೈತುಂಬಾ ಗಂಧೆಗಳು ಮುಂತಾದ ಲಕ್ಷಣಗಳನ್ನು ಕಾಣಬಹುದು. ಈ ಸೋಂಕು ತಗುಲಿದರೆ ಮಕ್ಕಳಲ್ಲಿ ನ್ಯುಮೋನಿಯ, ಅಪೌಷ್ಠಿಕತೆ, ಕಿವಿ ಸೋರುವಿಕೆ, ಅತಿಸಾರಭೇದಿ ಮುಂತಾದ ಅಪಾಯವನ್ನುಂಟುಮಾಡುವ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ವಿವರವಾಗಿ ತಿಳಿಸಿದರು.
ಗರ್ಭಾವಸ್ಥೆಯಲ್ಲಿರುವ ಮಗುವಿಗೂ ರುಬೆಲ್ಲಾ ತಗುಲುವ ಸಾಧ್ಯತೆಯಿದ್ದು, ಹುಟ್ಟಿನ ನಂತರ ಕುರುಡು, ಮಾನಸಿಕ ಅಸ್ವಸ್ಥತೆ, ಕಿವುಡುತನ, ಹೃದಯ ಸಂಬಂಧಿ ನ್ಯೂನತೆಗಳು, ಕೆಲವೊಮ್ಮೆ ಹೊಟ್ಟೆಯಲ್ಲೇ ಸಾಯುವದು, ಗರ್ಭಪಾತ ಮುಂತಾದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಪೋಷಕರು ಸರ್ಕಾರಿ ಆಸ್ಪತ್ರೆಯಲ್ಲಿ ದೊರೆಯುವ ಎಂ.ಆರ್ (ಮೀಸಲ್ಸ್-ರುಬೆಲ್ಲಾ) ಲಸಿಕೆಯನ್ನು ಹಾಕಿಸುವ ಮೂಲಕ ತಡೆಗಟ್ಟಲು ಮುಂದಾಗಬೇಕು ಎಂದು ಸಲಹೆ ನೀಡಿದರು. ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಬಿ.ಎಂ.ಅನಿತಾ ಮಾತನಾಡಿ, ದಡಾರ-ರುಬೆಲ್ಲಾ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸುವಲ್ಲಿ ಶಿಕ್ಷಣ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪಾತ್ರವು ಪ್ರಮುಖವಾಗಿದೆ. ಅಲ್ಲದೇ ಶಾಲೆಗಳಲ್ಲಿ ಮಕ್ಕಳಿಗೆ ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸುವ ಮೂಲಕ ಜಾಗೃತಿ ಮೂಡಿಸಬೇಕು ಎಂದು ಶಿಕ್ಷಕರಲ್ಲಿ ಮನವಿ ಮಾಡಿದರು.