ವೀರಾಜಪೇಟೆ, ಫೆ. 1: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಂಗಾಲ ಒಂದನೇ ರುದ್ರಗುಪ್ಪೆಯಲ್ಲಿ ಅನಧಿಕೃತ ಹೋಂಸ್ಟೆ ಕಾರ್ಯನಿರ್ವಹಿಸುತ್ತಿದ್ದು ಹೋಂಸ್ಟೇಗೆ ಬರುವ ಪ್ರವಾಸಿಗರಿಂದ ಗ್ರಾಮಸ್ಥರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಸಂಬಂಧಪಟ್ಟ ಇಲಾಖೆ ಕೂಡಲೇ ಇದನ್ನು ತೆರವು ಮಾಡಿ ಕ್ರಮ ತೆಗೆದುಕೊಳ್ಳುವಂತೆ ಗ್ರಾಮ ಸಮಿತಿ ಅಧ್ಯಕ್ಷ ಚೇಂದ್ರಿಮಾಡ ಗಣೇಶ್ ನಂಜಪ್ಪ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗಣೇಶ್ ನಂಜಪ್ಪ, ಹೋಂಸ್ಟೇ ಮಾಲೀಕರು ಸೂಕ್ತ ವಾಹನ ಪಾರ್ಕಿಂಗ್ ವ್ಯವಸ್ಥೆಗಳನ್ನು ಮಾಡದೆ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ರಸ್ತೆಯ ನೇರಕ್ಕೆ ಪ್ರಕಾಶಮಾನವಾದ ಹಸಿರು ಲೈಟ್‍ಗಳನ್ನು ಅಳವಡಿಸಿರುವರಿಂದ ವಾಹನಗಳು ಅಪಘಾತಕ್ಕಿಡಾಗುತ್ತಿದೆ. ಮಧ್ಯರಾತ್ರಿಯವರೆಗೆ ಕರ್ಕಶ ಧ್ವನಿವರ್ಧಕಗಳನ್ನು ಬಳಸುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಪ್ರವಾಸಿಗರು ಮದ್ಯಪಾನ ಮಾಡಿ ಗ್ರಾಮಸ್ಥರ ಮನೆಗಳ ಮುಂದೆ ಕೂಗಾಡುತ್ತಾರೆ. ರಸ್ತೆಯ ಮಧ್ಯದಲ್ಲಿ ಪ್ರವಾಸಿಗರು ಗುಂಪು ಗುಂಪಾಗಿ ನಿಂತುಕೊಂಡು ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ ಪಡಿಸುತ್ತಾರೆ. ಶನಿವಾರ, ಭಾನುವಾರ ಹಾಗೂ ರಜಾ ದಿನಗಳಲ್ಲಿ 100ಕ್ಕೂ ಅಧಿಕ ಪ್ರವಾಸಿಗರು ವಾಸ್ತವ್ಯ ಹೂಡುತ್ತಿರುವದು ಗ್ರಾಮಸ್ಥರಲ್ಲಿ ಅನುಮಾನ ಮೂಡಿಸುತ್ತಿದೆ. ಈ ವಿಚಾರವನ್ನು ಪ್ರಶ್ನಿಸಿದ ಗ್ರಾಮಸ್ಥರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸುತ್ತಾರೆ. ಈಗಾಗಲೇ ಹೋಂಸ್ಟೇ ವಿರುದ್ಧ ನೂರಕ್ಕೂ ಅಧಿಕ ಗ್ರಾಮಸ್ಥರು ಸಹಿ ಮಾಡಿರುವ ದೂರನ್ನು ವೀರಾಜಪೇಟೆ ಗ್ರಾಮಾಂತರ ಠಾಣೆಗೆ ನೀಡಲಾಗಿದೆ.

ದೂರಿನ ಪ್ರತಿಯನ್ನು ಸಚಿವರು ಪ್ರವಾಸೋದ್ಯಮ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಪೋಲಿಸ್ ವರಿಷ್ಠಾಧಿಕಾರಿಗಳು, ನಿರ್ದೇಶಕರು ಪ್ರವಾಸೋದ್ಯಮ ಇಲಾಖೆ, ಸಾರಿಗೆ ಇಲಾಖೆ, ಅಧ್ಯಕ್ಷರು ಗ್ರಾಮ ಪಂಚಾಯಿತಿ ಬಿಟ್ಟಂಗಾಲ ಇವರುಗಳಿಗೆ ದೂರು ನೀಡಲಾಗಿದೆ. ಒಂದು ವಾರದೊಳಗೆ ಸಂಬಂಧಿಸಿದ ಇಲಾಖೆ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಪ್ರವಾಸೋದ್ಯಮ ಇಲಾಖೆ ಎದುರು ಧರಣಿ ಸತ್ಯಾಗ್ರಹ ಹೂಡಲು ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಸದಸ್ಯರಾದ ಬೊಪ್ಪಂಡ ವಸಂತ್, ಆಲೆಂಗಡ ಜಾನಕ್ಕಿ, ದೇವತಕ್ಕರಾದ ಕುಪ್ಪಂಡ ಚಂಗಪ್ಪ, ಊರು ತಕ್ಕರಾದ ಚೇಂದ್ರಿಮಾಡ ನಾಚಪ್ಪ, ಕಾವೇರಪ್ಪ, ಆಲೆಂಗಡ ದೇವಯ್ಯ ಉಪಸ್ಥಿತರಿದ್ದರು.