ಮಡಿಕೇರಿ, ಮೇ 3: ನಗರದ ಕರ್ಣಂಗೇರಿ ಕ್ಷೇತ್ರದ ಶ್ರೀರಾಜರಾಜೇಶ್ವರಿ ದೇವಾಲಯದ ವಾರ್ಷಿಕೋತ್ಸವ ಹಾಗೂ ರಥೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.

ಸೋಮವಾರ ಸಂಜೆ ಶ್ರೀವೆಂಕಟರಮಣ ಸ್ವಾಮಿಯ ಹರಿಸೇವೆಯೊಂದಿಗೆ ವಾರ್ಷಿಕ ಜಾತ್ರೋತ್ಸವ ಆರಂಭಗೊಂಡಿತು. ಮಂಗಳವಾರ ಗಣಪತಿ ಹೋಮ, ದೇವಿಗೆ ಅಭಿಷೇಕ, ಹೂವಿನ ಅಲಂಕಾರ, ತೀರ್ಥಸ್ನಾನ, ಕಳಸ ಪೂಜೆ, ಮಹಾಮಂಗಳಾರತಿ ಹಾಗೂ ದೇವಿಯ ರಥೋತ್ಸವ ಭಕ್ತರ ಹರ್ಷೋದ್ಘಾರದೊಂದಿಗೆ ನಡೆಯಿತು. ನಂತರ ತುಲಾಭಾರ, ತಲೆಮುಡಿ ತೆಗೆಯುವದು, ತೀರ್ಥಸ್ನಾನ, ಉರುಳು ಸೇವೆ, ಕುಂಕುಮಾರ್ಚನೆ, ತಾಯಿದರ್ಶನ ಹಾಗೂ ಮಹಾಮಂಗಳಾರತಿ ಜರುಗಿತು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಎರಡು ದಿನಗಳ ಜಾತ್ರಾ ಮಹೋತ್ಸವಕ್ಕೆ ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಕೊಡಗು ಜಿಲ್ಲೆಯಲ್ಲೇ ಅತಿ ಎತ್ತರದ 52 ಅಡಿಯ ಶಿವನ ಮೂರ್ತಿ ಇತ್ತೀಚೆಗೆ ದೇವಾಲಯದ ಆವರಣದಲ್ಲಿ ಲೋಕಾರ್ಪಣೆ ಗೊಂಡಿದ್ದು, ಭಕ್ತರನ್ನು ಆಕರ್ಷಿಸುತ್ತಿದೆ.