ಅಮ್ಮತ್ತಿ, ಮೇ 3: ಅಮ್ಮತ್ತಿ ಕಾವಾಡಿ ಗ್ರಾಮದ ನವೀಕರಣಗೊಂಡಿರುವ ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ಪುನಃ ಪ್ರತಿಷ್ಠಾಬಂಧ ಬ್ರಹ್ಮಕಲಶೋತ್ಸವ ತಾ. 3 ರಿಂದ ಆರಂಭಗೊಂಡು ತಾ. 9ರ ವರೆಗೆ ನಡೆಯಲಿದೆ. ದೇವತಾ ಕಾರ್ಯದ ಕೈಂಕರ್ಯಗಳು ಬ್ರಹ್ಮಶ್ರೀ ವೇದಮೂರ್ತಿ ಪೊಳಲಿ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ದೇವತಕ್ಕ ಮಾಚಿಮಂಡ ಸಿ. ಅಪ್ಪಚ್ಚು ತಿಳಿಸಿದ್ದಾರೆ.

ಶ್ರೀ ಭದ್ರಕಾಳಿ ದೇವಸ್ಥಾನವು ಕಾವಾಡಿ ಗ್ರಾಮದಲ್ಲಿರುವ ಶ್ರೀ ಭಗವತಿ ದೇವಸ್ಥಾನದ ಆಡಳಿತ ಮಂಡಳಿಗೆ ಒಳಪಟ್ಟಿದ್ದು, ತಕ್ಕ ಮುಖ್ಯಸ್ಥರ ಮತ್ತು ಊರಿನವರ ಸಹಕಾರದಿಂದ ಧಾರ್ಮಿಕ ವಿಧಿ ವಿÀಧಾನದಲ್ಲಿ ಪೂಜಾ ಕಾರ್ಯವನ್ನು ನಡೆಸುತ್ತಾ ಬರುತ್ತಿದೆ. ದೇವಸ್ಥಾನಕ್ಕೆ ಸುಮಾರು 800 ವರ್ಷಗಳ ಇತಿಹಾಸ ಇರುವದಾಗಿ ಹೇಳಲಾಗುತ್ತಿದೆ. ಇದು ಕಾಳಿ ಕ್ಷೇತ್ರವಾಗಿದ್ದು, ಮೇ ತಿಂಗಳ 3ನೇ ವಾರದಲ್ಲಿ ವಾರ್ಷಿಕೋತ್ಸವವು ನಡೆಯುತ್ತದೆ.

ಈ ಹಿಂದೆ ಅಷ್ಟಮಂಗಲ ಪ್ರಶ್ನೆಯಲ್ಲಿ ತಿಳಿಸಿದ ಹಾಗೆ ಶ್ರೀ ಭಗವತಿ ದೇವಸ್ಥಾನವನ್ನು ಪುನಃ ನಿರ್ಮಾಣ ಮಾಡಿ ಬ್ರಹ್ಮಕಲಶೋತ್ಸವವನ್ನು 2012ರಲ್ಲಿ ನೆರವೇರಿಸಿದ್ದು, ನಂತರ ಶ್ರೀ ಭದ್ರಕಾಳಿ ದೇವಸ್ಥಾನವನ್ನು ಪುನಃ ನಿರ್ಮಾಣ ಮಾಡಬೇಕೆಂದು ತೀರ್ಮಾನಿಸಲಾಗಿತ್ತು. 2013ರಲ್ಲಿ ದೇವಸ್ಥಾನದ ಕೆಲಸವನ್ನು ಪ್ರಾರಂಭಿಸಲಾಯಿತು. ಊರಿನ ಮಹಾಸಭೆಯಲ್ಲಿ ತೀರ್ಮಾನಿಸಿದಂತೆ ದೊಡ್ಡಬಳ್ಳಾಪುರದಿಂದ ತರಿಸಿಕೊಂಡ ಶಿಲೆಗಳಿಂದ ಕೆತ್ತನೆ ಆರಂಭಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆ ಸುಬ್ರಹ್ಮಣ್ಯದ ವಾಸ್ತು ಶಿಲ್ಪಿ ಮಹೇಶ್ ಮುನಿಯಂಗಳ ಅವರ ಮಾರ್ಗದರ್ಶನದಲ್ಲಿ ಮುರುಡೇಶ್ವರದ ಶಿಲ್ಪಿ ಕೃಷ್ಣ ಅವರು ಚಿತ್ರಕಲೆಗಳನ್ನೊಳಗೊಂಡ ಕಾಮಗಾರಿಯನ್ನು ನಿರ್ವಹಿಸಿದ್ದು, ಮೇಲ್ಛಾವಣಿಯನ್ನು ಕೂಡ ಶಿಲೆಗಳಿಂದ ನಿರ್ಮಿಸಲಾಗಿದೆ. ಇದರ ಜೊತೆಗೆ ಶಾಸ್ತಾವು, ಚಿತ್ರಕೂಟ, ಮಾರಿ ದೇವಸ್ಥಾನವನ್ನು ಶಿಲೆಗಳಿಂದ ಕೆತ್ತನೆ ಮಾಡಿಸಲಾಗಿದೆ.

ಎಲ್ಲಾ ಕೆಲಸಗಳಿಗೆ ಸುಮಾರು ರೂ. 50 ಲಕ್ಷ ವ್ಯಯಿಸಲಾಗಿದ್ದು, ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ರೂ. 8 ಲಕ್ಷ ರೂಪಾಯಿ ಅವಶ್ಯವಿದೆ. ತಾ. 4 ರಂದು (ಇಂದು) ಬೆಳಿಗ್ಗೆ 7.30 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಗಣಪತಿ ಹೋಮ, ಮೃತ್ಯುಂಜಯ ಹೋಮ, ಶಾಂತಿ ಪ್ರಾಯಶ್ಚಿತ್ತ ಹೋಮಗಳು, ಹೋಮ ಕ¯ಶಾಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಮತ್ತು ಸಂಜೆ ದುರ್ಗಾಪೂಜೆ, ಅಂಕುರ ಪೂಜೆ ನಡೆಯಲಿದೆ. ತಾ. 5 ರಂದು ಬೆಳಿಗ್ಗೆ 7.30ರಿಂದ ವಿವಿಧ ಪೂಜಾ ಕೈಂಕರ್ಯಗಳು, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಂಜೆ 6 ಗಂಟೆಯಿಂದ ಅಂಕುರ ಪೂಜೆ, ದುರ್ಗಾಪೂಜೆ, ಅನುಜ್ಞಾ ಕಲಶ ಪೂಜೆ, ಅಧಿವಾಸ ಹೋಮ ಕಲಶಾಧಿವಾಸಾಭಿಷೇಕ ನೆರವೇರಲಿದೆ. ಅಂದು ಬೆಳಿಗ್ಗೆ 7.30 ರಿಂದ ಪುಣ್ಯಾಹ, ಗಣಪತಿ ಹೋಮ, ಶಾಂತಿ ಪ್ರಾಯಶ್ಚಿತ ಹೋಮಗಳು, ಕ¯ಶಾಭಿಷೇಕ, ಅನುಜ್ಞಾ ಕಲಶಾಭಿಷೇಕ, ಅನುಜ್ಞಾ ಪ್ರಾರ್ಥನೆ ನಡೆಯಲಿದೆ.

ಸಂಜೆ 5 ಗಂಟೆಯಿಂದ ಅಂಕುರ ಪೂಜೆ, ದುರ್ಗಾಪೂಜೆ, ಮಂಟಪ ಸಂಸ್ಕಾರ ನಡೆಯಲಿದೆ.

ತಾ. 7 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಹಾರ ತತ್ವ ಹೋಮ, ಕಲಶ ಪೂಜೆ, ಕುಂಬೇಶ ಕರ್ಕರಿ ಪೂಜೆ, ಧಾನ್ಯಾದಿ ವಾಸಗಳು ಶಿರಸತ್ವ ಹೋಮ, ಮಂಡಲ ಪೂಜೆ, ಅಧಿವಾಸ ಹೋಮ ನಡೆಯಲಿದೆ. ತಾ.8 ರಂದು ಬೆಳಿಗ್ಗೆ 7.30 ರಿಂದ ಪುಣ್ಯಾಹ, ಗಣಪತಿ ಹೋಮ, ಪವಮಾನ ಹೋಮ, ಆಶ್ಲೇಷಬಲಿ, ಪೂರ್ವಾಹ್ನ 10.10ಕ್ಕೆ ಮಿಥುನ ಲಗ್ನದಲ್ಲಿ ಭದ್ರಕಾಳಿ ಪ್ರತಿಷ್ಠೆ ಅಷ್ಟಬಂಧ, ಶಾಸ್ತಾ ಪ್ರತಿಷ್ಠೆ, ನಾಗ ಪ್ರತಿಷ್ಠೆ ಮಾಡಲಾಗುವದು. ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಕುಂಬೇಶ ಕರ್ಕರಿ ಪೂಜೆ, ಸಂಜೆ 5 ರಿಂದ ಬ್ರಹ್ಮಕಲಶ ಪೂಜೆ, ಪರಿಕಲಶ ಪೂಜೆ, ಕಲಶಾಧಿವಾಸ ಹೋಮ ನಡೆಯಲಿದೆ.

ತಾ. 9 ರಂದು ಬೆಳಿಗ್ಗೆ 6 ಗಂಟೆಯಿಂದ ಪುಣ್ಯಾಹ, ಗಣಪತಿ ಹೋಮ, ಕಲಶಾಭಿಷೇಕ, 9.30 ರಿಂದ 10 ಗಂಟೆಯವರೆಗೆ ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಪುನಃ ಪ್ರತಿಷ್ಠಾಬಂಧ ಬ್ರಹ್ಮಕಲಶೋತ್ಸವ ನಡೆಯುವ ಪ್ರತಿದಿನ ಅನ್ನಸಂತರ್ಪಣೆ ನಡೆಯಲಿದೆ. ಅನ್ನಸಂತರ್ಪಣೆ ಮತ್ತು ಧನ ಸಹಾಯ ಮಾಡಬಯಸುವವರು ಆಡಳಿತ ಮಂಡಳಿಯನ್ನು ಸಂಪರ್ಕಿಸ ಬಹುದೆಂದು ಹಾಗೂ ದೇವಸ್ಥಾನದ ಧಾರ್ಮಿಕ ಕಾರ್ಯಗಳಿಗೆ ಕಾಣಿಕೆ ರೂಪದಲ್ಲಿ ಅಕ್ಕಿ, ಬೆಲ್ಲ, ತೆಂಗಿನಕಾಯಿ, ಎಳನೀರು, ತರಕಾರಿ, ಹಾಲು, ಜೇನು, ತುಪ್ಪ, ಅಡಿಕೆ ಹೂ, ಬಾಳೆಗೊನೆ ಹೂ, ತುಳಸಿ ಹಾಗೂ ಇತರ ಎಲ್ಲಾ ಪೂಜಾ ಸಾಮಗ್ರಿಗಳನ್ನು ಕೃತಜ್ಞಾಪೂರ್ವಕವಾಗಿ ಸ್ವೀಕರಿಸಲಾಗುವದೆಂದು ಮತ್ತು ಸರ್ವ ಭಕ್ತಾದಿಗಳು ಈ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವತಕ್ಕ ಮಾಚಿಮಂಡ ಸಿ. ಅಪ್ಪಚ್ಚು ತಿಳಿಸಿದ್ದಾರೆ. -ಈಶಾನ್ವಿ