ಸೋಮವಾರಪೇಟೆ, ಮೇ 5: ಹಾಕಿ ಇಂಡಿಯಾ ಆಶ್ರಯದಲ್ಲಿ ಛತ್ತಿಸ್‍ಘಡದ ರಾಯ್‍ಪುರದಲ್ಲಿ ನಡೆಯುತ್ತಿರುವ ಕಿರಿಯರ ರಾಷ್ಟ್ರೀಯ ಹಾಕಿ ಲೀಗ್ ಪಂದ್ಯಾಟದಲ್ಲಿ ಕೊಡಗು ತಂಡ ಚಂಡೀಗಡ ತಂಡದ ವಿರುದ್ಧ 2-4 ಗೋಲುಗಳಿಂದ ಪರಾಭವಗೊಂಡಿದೆ.

ರಾಯ್‍ಪುರದ ಸರ್ದಾರ್ ವಲ್ಲಬಾಯಿ ಪಟೇಲ್ ಅಂತರ್ರಾಷ್ಟ್ರೀಯ ಹಾಕಿ ಕ್ರಿಡಾಂಗಣದಲ್ಲಿ ನಡೆಯುತ್ತಿರುವ ಲೀಗ್‍ನÀ ಮೊದಲ ಪಂದ್ಯದಲ್ಲಿ ಚಂಡಿಗಡ್ ತಂಡದ ಬಿರುಸಿನ ಆಟದ ಮುಂದೆ ಕೊಡಗು ತಂಡ ಸೋಲೊಪ್ಪಿಕೊಂಡಿತು. ಆರಂಭದ 7 ನಿಮಿಷದಲ್ಲಿ ಕೊಡಗು ತಂಡದ ಸೋಮಣ್ಣ ಗೋಲು ದಾಖಲಿಸುವ ಮೂಲಕ ಖಾತೆ ತೆರೆದರೆ ಇದರಿಂದ ಎಚ್ಚೆತ್ತ ಚಂಡಿಗಡ್ ತಂಡ ಮೊದಲಾರ್ಧದಲ್ಲಿಯೇ 2 ಗೋಲು ಬಾರಿಸಿ ಕೊಡಗು ತಂಡಕ್ಕೆ ಆಘಾತ ನೀಡಿತು. ನಂತರ ಪಂದ್ಯದ ದ್ವಿತಿಯಾರ್ಧದಲ್ಲಿ ಲಿಖಿತ್ ಮತ್ತೊಂದು ಗೋಲು ಬಾರಿಸುವ ಮೂಲಕ ಸ್ಕೋರ್ ಸಮಬಲ ಸಾಧಿಸಿದರು. ನಂತರ ಚಂಡಿಗಡ್ ತಂಡ ಆಟಗಾರರ ಸಂಘಟಿತ ಆಟದಿಂದ ಮತ್ತೆರಡು ಗೋಲು ಬಾರಿಸುವ ಮೂಲಕ ಒಟ್ಟು ನಾಲ್ಕು ಗೋಲು ಗಳಿಸಿದರು. ಕೊಡಗು ತಂಡಕ್ಕೆ ಗೋಲುಗಳಿಸುವ ಮುಕ್ತ ಅವಕಾಶಗಳು ದೊರೆತರೂ ಸದುಪಯೋಗ ಪಡಿಸಿಕೊಳ್ಳಲಿಲ್ಲ.

ಶುಕ್ರವಾರ ನಡೆಯುವ 2ನೇ ಲೀಗ್ ಪಂದ್ಯದಲ್ಲಿ ಕೊಡಗು ತಂಡ ಉತ್ತರಾಖಂಡ ತಂಡವನ್ನು ಎದುರಿಸಲಿದೆ. ತರಬೇತುದಾರ ಲಾಲ ಅಯ್ಯಣ್ಣ, ವ್ಯವಸ್ಥಾಪಕ ಅಶೋಕ್, ನೇತೃತ್ವದಲ್ಲಿ ಕೊಡಗು ತಂಡ ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದೆ.