ಗೋಣಿಕೊಪ್ಪಲು, ಮೇ.6: ಇತ್ತೀಚೆಗೆ ಹಾತೂರು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಮ್ಮಕೊಡವ ಕ್ರಿಕೆಟ್ ನಮ್ಮೆ ಏ.30, ತಾ.1 ಹಾಗೂ ತಾ.2 ರಂದು ಜರುಗಿದ್ದು ಕ್ರೀಡಾಕೂಟಕ್ಕೆ ಯಾವದೇ ಪೂರ್ವಾನುಮತಿ ಪಡೆದಿಲ್ಲ, ಮೈದಾನದ ಸ್ವಚ್ಛತೆ ಕಾಪಾಡಿಲ್ಲ ಹಾಗೂ ಮೈದಾನ ನಿರ್ವಹಣಾ ವೆಚ್ಚ ನೀಡದೆ ವಂಚನೆ ಮಾಡಲಾಗಿದೆ ಎಂದು ತಾ.5 ರಂದು ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಸಭೆಯಲ್ಲಿ ಚರ್ಚೆಗೊಳಪಟ್ಟು ಮುಂದಿನ ವರ್ಷದಿಂದ ಅಮ್ಮಕೊಡವ ಕುಟುಂಬ ತಂಡಗಳ ನಡುವೆ ನಡೆಯುವ ಕ್ರಿಕೆಟ್ ನಮ್ಮೆಗೆ ಮೈದಾನ ನೀಡದಿರಲು ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಅಮ್ಮಕೊಡವ ಕ್ರಿಕೆಟ್ ನಮ್ಮೆಯ ಅಧ್ಯಕ್ಷ ಬಾನಂಡ ಪ್ರಥ್ಯು ಅವರು ಬಾಳೆಲೆ ಜಿಲ್ಲಾ ಪಂಚಾಯಿತಿ ಸದಸ್ಯರೂ ಆಗಿದ್ದು, ಸ್ವಚ್ಛತೆ ಬಗ್ಗೆ ಗಮನ ಹರಿಸದೆ, ಶಾಲಾಭಿವೃದ್ಧಿ ಸಮಿತಿಯ ಅನುಮತಿಯನ್ನೂ ಹೊಂದದೆ, ಪ್ರೌಢಶಾಲಾ ಮೈದಾನ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮೈದಾನವೆಂದು ತಪ್ಪು ತಪ್ಪಾಗಿ ಹೇಳಿಕೆ ನೀಡಿದ್ದು ಅವಮಾನ ಮಾಡಿರುವದಾಗಿ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಂಭುಲಿಂಗ ಸ್ವಾಮಿ ಅವರು ಸಭೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಅಧ್ಯಕ್ಷರು ಹಾಗೂ ಸುಮಾರು 10 ಮಂದಿ ಸದಸ್ಯರು ಸಭೆ ಸೇರಿ ಅಮ್ಮಕೊಡವ ಕುಟುಂಬವು ಮುಂದಿನ ವರ್ಷ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕ್ರೀಡೆ ಆಯೋಜಿಸಲು ಬಿಡದಿರಲು ತೀರ್ಮಾನ ಕೈಗೊಂಡಿದೆ.

ಕಳೆದ ವರ್ಷವೂ ಅಮ್ಮಕೊಡವ ಸಮಾಜವು ಮೈದಾನ ನಿರ್ವಹಣಾ ವೆಚ್ಚ ನೀಡದೆ ಸತಾಯಿಸಿದ್ದು, ಈ ಬಾರಿ ಸೌಜನ್ಯಕ್ಕಾದರೂ ಪೂರ್ವಾ ನುಮತಿ ಹೊಂದಿಕೊಂಡಿಲ್ಲ.

ಈ ಬಾರಿ ಮೂರು ದಿನಗಳ ಮೈದಾನ ನಿರ್ವಹಣೆಗೆ ಕನಿಷ್ಟ ರೂ.5000 ಮೊತ್ತ ನೀಡುವ ಅಗತ್ಯವಿದ್ದು, ಯಾವದೇ ಆಮಂತ್ರಣ, ತಿಳುವಳಿಕೆ ನೀಡದೆ ಕ್ರೀಡಾಕೂಟ ಆಯೋಜಿಸಲಾಗಿದೆ. ಪ್ರಾಥಮಿಕ ಶಾಲಾ ಮೈದಾನದ ಆವರಣದಲ್ಲಿ ಪ್ಲಾಸ್ಟಿಕ್ ಬಾಟಲಿ, ಲೋಟ, ತಟ್ಟೆ, ಮದ್ಯಪಾನ ಮಾಡಿದ ಬಾಟಲಿಗಳು ಒಳಗೊಂಡಂತೆ ಘನ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆದಿದ್ದು, ಶಾಲಾ ಆವರಣವನ್ನು ಅಶುಚಿಗೊಳಿಸಲಾಗಿದೆ. ಸರ್ಕಾರಿ ಪ್ರಾಥಮಿಕ ಶಾಲೆಗೆ ಸುಮಾರು 10 ಎಕರೆ ನಿವೇಶನವಿದ್ದು, ಅಧ್ಯಕ್ಷರು ಹಾಗೂ ಸದಸ್ಯರನ್ನು, ಮುಖ್ಯೋಪಾ ಧ್ಯಾಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿಯಮಬಾಹಿರವಾಗಿ ಮೈದಾನದ ಹೆಸರಿನಲ್ಲೂ ಲೋಪವೆಸಗಿ ಕ್ರೀಡಾಕೂಟ ನಡೆಸಲಾಗಿದೆ ಎಂದು ಅಧ್ಯಕ್ಷ ಶಂಭುಲಿಂಗಸ್ವಾಮಿ ಸಭೆಯ ನಿರ್ಣಯ ಪ್ರತಿಯನ್ನು ಪತ್ರಿಕೆಗೆ ನೀಡಿ ಆರೋಪಿಸಿದ್ದಾರೆ.

ಸಭೆಯಲ್ಲಿ ಗ್ರಾ.ಪಂ.ಸದಸ್ಯರಾದ ರೂಪಾ ಭೀಮಯ್ಯ, ಸದಸ್ಯರಾದ ಕೆ.ಎ.ರವಿ, ಎ.ಕೆ.ಪಾರ್ವತಿ, ಪಿ.ಆರ್.ಶಿಲ್ಪ, ಸೀತೆ, ವೈ.ಆರ್.ಬೇಬಿ, ವೈ.ಎಂ.ರತಿ, ಲಲಿತ, ಕೆ.ಎ.ಕಾವೇರಪ್ಪ ಹಾಗೂ ಪಿ.ಎಸ್.ಮಣಿ ಉಪಸ್ಥಿತರಿದ್ದರು.