ಸೋಮವಾರಪೇಟೆ, ಮೇ 7: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮಲ್ಲಳ್ಳಿ ಜಲಪಾತ ಅಭಿವೃದ್ಧಿ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಭೂ ಸೇನಾ ನಿಗಮದಿಂದ ಕಾಮಗಾರಿ ಪ್ರಾರಂಭವಾಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ನಡೆಯದೇ ಇರುವದರಿಂದ ಪ್ರಸಕ್ತ ಸಾಲಿನ ಮಳೆಗಾಲ ಪ್ರಾರಂಭವಾಗುವದ ರೊಳಗೆ ಕಾಮಗಾರಿ ಪೂರ್ಣ ಗೊಳ್ಳುವದು ಅನುಮಾನವಾಗಿದೆ.

ರಾಜ್ಯ ಪ್ರವಾಸಿ ತಾಣಗಳಲ್ಲಿ ಒಂದಾದ ಮಲ್ಲಳ್ಳಿ ಜಲಪಾತದ ಅಭಿವೃದ್ಧಿಯ ಹಲವು ವರ್ಷದ ಕೂಗಿಗೆ ಸ್ಪಂದಿಸಿರುವ ಸರ್ಕಾರ ಪ್ರವಾಸೋಧ್ಯಮ ಇಲಾಖೆಯ ಮೂಲಕ ಪುಷ್ಪಗಿರಿ ಮುಖ್ಯ ರಸ್ತೆಯಿಂದ 2-3 ಕಿ.ಮೀ. ರಸ್ತೆ ಸೇರಿದಂತೆ ಇತರ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯ ಮುಖಾಂತರ 3.19 ಕೋಟಿ ಹಾಗೂ ಜಲಪಾತಕ್ಕೆ ಇಳಿಯುವ ಮೆಟ್ಟಿಲು ಸೇರಿದಂತೆ ಇನ್ನಿತರ ಕಾಮಗಾರಿ ಗಾಗಿ ಭೂಸೇನಾ ನಿಗಮದ ಮುಖಾಂತರ 2 ಕೋಟಿ ರೂ. ಅನುದಾನ ಒದಗಿಸಿದ್ದು, ಕಳೆದ 6 ತಿಂಗಳ ಹಿಂದೆ ಶಾಸಕ ಅಪ್ಪಚ್ಚು ರಂಜನ್ ಭೂಮಿಪೂಜೆ ನೆರವೇರಿಸಿದ್ದರು.

ಈ ಬಾರಿಯ ಮಳೆಗಾಲದ ಒಳಗೆ ಕಾಮಗಾರಿ ಮುಗಿಯ ಬೇಕೆಂಬ ಇಲಾಖೆಯ ಉದ್ದೇಶ ಹಾಗೂ ಜನರ ನಿರೀಕ್ಷೆ ಇದೀಗ ಹುಸಿಯಾಗಿದೆ.

ಈ ಜಲಪಾತವನ್ನು ಹತ್ತಿರದಿಂದ ನೋಡಲು ಅನುಕೂಲ ವಾಗುವಂತೆ ಬಾಕಿ ಉಳಿದಿದ್ದ ಮೆಟ್ಟಿಲುಗಳು, ಅಪಾಯಕಾರಿ ಸ್ಥಳಗಳಲ್ಲಿ ರೈಲಿಂಗ್ಸ್, ಶೌಚಾಲಯ, ಆರು ವಾಣಿಜ್ಯ ಮಳಿಗೆಗಳು, ವಾಹನ ನಿಲುಗಡೆ ಸ್ಥಳಗಳಿಗೆ ಇಂಟರ್ ಲಾಕ್ ಹಾಗೂ ಗೇಟ್ ನಿರ್ಮಾಣ ಒಳಗೊಂಡಂತೆ 2 ಕೋಟಿ ವೆಚ್ಚದ ಕಾಮಗಾರಿಯನ್ನು ಕೈಗೆತ್ತಿಕೊಂಡ ಭೂಸೇನಾ ನಿಗಮ ಕಾಮಗಾರಿಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು, ತನ್ನ ಜವಾಬ್ದಾರಿಯನ್ನೇ ಮರೆತಂತಿದೆ.

ಮಳೆಗಾಲದೊಳಗೆ ಕಾಮಗಾರಿ ಯನ್ನು ಮುಗಿಸಿಯೇ ತೀರುತ್ತೇವೆ ಎಂದು ಭರವಸೆ ನೀಡಿದ್ದ ಅಧಿಕಾರಿಗಳು ಕೇವಲ 50 ಮೆಟ್ಟಿಲು ನಿರ್ಮಿಸುವದರೊಳಗೆ ನಾಪತ್ತೆ ಯಾಗಿದ್ದಾರೆ.

ಇದರೊಂದಿಗೆ ಮೆಟ್ಟಿಲು ಸಹ ಕಳಪೆಯಾಗಿದ್ದು, ಈಗಾಗಲೇ ಬಿರುಕು ಬಿಟ್ಟಿವೆ. ಈ ಬಗ್ಗೆ ಸ್ಥಳೀಯ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಶಾಸಕ ರಂಜನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾಮಗಾರಿ ಕಳಪೆ ಹಾಗೂ ಪ್ರಸ್ತುತ ಸ್ಥಗಿತಗೊಂಡಿರುವ ಬಗ್ಗೆ ಶಾಸಕರು ಪ್ರಶ್ನಿಸಿದ ಸಂದರ್ಭ ಇಲಾಖೆಯ ಸಹಾಯಕ ಕಾರ್ಯಪಾಲ ಅಭಿಯಂತರ ಪಾಟೀಲ್ ಹಾಗೂ ಅಭಿಯಂತರ ಪ್ರಮೋದ್ ಉತ್ತರಿಸಲು ತಡಬಡಾ ಯಿಸಿದರು.

ಮಾಡಿರುವ ಅಲ್ಪ ಸ್ವಲ್ಪದ ಕೆಲಸವನ್ನು ತೋರಿಸಿ ಕೆಲಸಗಾರರು ಹೊರಗಿನವರು ಊರಿಗೆ ಹೋಗಿದ್ದಾರೆ ಎಂಬೆಲ್ಲಾ ಸಬೂಬು ಹೇಳುವ ಮೂಲಕ ಶಾಸಕರನ್ನು ಮೆಚ್ಚಿಸಲು ಪ್ರಯತ್ನಿಸಿದರು. ಈ ಸಂದರ್ಭ ಮೆಟ್ಟಿಲು ಕಾಮಗಾರಿ ಪರಿಶೀಲಿಸಿದ ಶಾಸಕ ರಂಜನ್ ಕಳಪೆಯಾಗಿರುವದನ್ನು ಮನಗಂಡು ತಕ್ಷಣವೇ ಸರಿಪಡಿಸುವಂತೆ ಸೂಚಿಸಿದರಲ್ಲದೆ, ಮುಂದೆ ಹೀಗಾಗದಂತೆ ಎಚ್ಚರಿಸಿದರು.

ಅಪಾಯಕಾರಿ ಸ್ಥಳಗಳಲ್ಲಿರುವ ಮೆಟ್ಟಿಲುಗಳ ಬಗ್ಗೆ ಸ್ಟೈನ್‍ಲೆಸ್ ಸ್ಟೀಲ್ ರೈಲಿಂಗ್ಸ್‍ಗಳನ್ನೇ ಅಳವಡಿಸಬೇಕು. ಜಲಪಾತಕ್ಕೆ ಜನರು ಇಳಿಯದಂತೆ ರಕ್ಷಣಾ ಬೇಲಿ ನಿರ್ಮಿಸಬೇಕು. ಕಾಮಗಾರಿಯನ್ನು ಮಳೆಗಾಲದ ಒಳಗೆ ಮುಗಿಸಬೇಕೆಂದು ತಾಕೀತು ಮಾಡಿದರು.

ಲೋಕೋಪಯೋಗಿ ಇಲಾಖೆ ಮೂಲಕ 3.19 ಕೋಟಿ ವೆಚ್ಚದ ರಸ್ತೆ ಕಾಮಗಾರಿ ಬಿರುಸಿನಿಂದ ನಡೆಯುತ್ತಿದ್ದು, ಈ ಕಾಮಗಾರಿಯನ್ನೂ ಶಾಸಕ ರಂಜನ್ ಪರೀಶಿಲಿಸಿದರು. ಅಗತ್ಯವಿರುವೆಡೆ ಹೆಚ್ಚುವರಿ ಮೋರಿಗಳನ್ನು ನಿರ್ಮಿಸುವ ಮೂಲಕ ನೀರು ರಸ್ತೆ ಮೇಲೆ ಹರಿಯದಂತೆ ಎಚ್ಚರ ವಹಿಸಬೇಕೆಂದು ಸೂಚಿಸಿದರು. ನಬಾರ್ಡ್‍ನ ಆರ್.ಐ.ಡಿ.ಎಫ್. 20ರ ಯೋಜನೆಯಡಿಯಲ್ಲಿ 2.3.ಕಿಮೀ. ಕಾಂಕ್ರಿಟ್ ರಸ್ತೆ, ಏಳು ಮೋರಿಗಳು. 18 ಮೀ. ಹಾಗೂ 40 ಮೀ.ನ ಎರಡು ತಡೆಗೋಡೆಗಳ ನಿರ್ಮಾಣ ಒಳಗೊಂಡ 3.19 ಕೋಟಿ ವೆಚ್ಚದ ಕಾಮಗಾರಿ ಈ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿದೆ.

ಶಾಸಕರ ಭೇಟಿಯ ಸಂದರ್ಭ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಶಿವಣ್ಣ, ಪ್ರಮುಖರಾದ ಮೃತ್ಯುಂಜಯ, ಶಾಸಕರ ಆಪ್ತ ಸಹಾಯಕ ರವಿ ಸೇರಿದಂತೆ ಇತರರು ಹಾಜರಿದ್ದರು.