ಮಡಿಕೇರಿ,ಮೇ 4 : ಅಭಿವೃದ್ಧಿಯ ನೆಪವೊಡ್ಡಿ ಭಾಗಮಂಡಲ-ತಲಕಾವೇರಿ ಕ್ಷೇತ್ರದ ಪಾವಿತ್ರ್ಯತೆಗೆ ದಕ್ಕೆ ಉಂಟು ಮಾಡಲಾಗುತ್ತಿದ್ದು, ಶ್ರೀಭಗಂಡೇಶ್ವರ ದೇವಾಲಯದ ಅಭಿವೃದ್ಧಿಯನ್ನು ಕಡೆಗಣಿಸಲಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾಗಮಂಡಲ ಗ್ರಾಮದ ಹಿರಿಯರಾದ ಕೆ.ಜೆ.ಭರತ್ ಜಲಮೂಲವಾಗಿರುವ ಭಾಗಮಂಡಲ ದಲ್ಲಿ ಕೆಲವರು ಮಣ್ಣಿನ ರಾಶಿ ಹಾಕಿ ಕಟ್ಟಡ ನಿರ್ಮಿಸಲು ಮುಂದಾಗಿದ್ದಾರೆ. ಇಲ್ಲಿ ಕಟ್ಟಡ ನಿರ್ಮಾಣಗೊಂಡರೆ ಮಳೆಗಾಲದಲ್ಲಿ ಪ್ರವಾಹದ ನೀರು ಭಗಂಡೇಶ್ವರ ದೇವಾಲಯವನ್ನು ಪ್ರವೇಶಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಮಳೆಗಾಲಕ್ಕೂ ಮುನ್ನ ಮಣ್ಣನ್ನು ತೆರವುಗೊಳಿಸದಿದ್ದಲ್ಲಿ ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದರು.

ಬಾಗಿಲುಗಳಿಲ್ಲದ ದೇವಾಲಯ : ಶ್ರೀಭಗಂಡೇಶ್ವರ ದೇವಾಲಯದ ಮುಂಭಾಗ ಮತ್ತು ಹಿಂಭಾಗದ ಮಹಾ ಬಾಗಿಲುಗಳಿಲ್ಲದೆ ಕಾವಲುಗಾರರು ಆತಂಕವನ್ನು ಎದುರಿಸುತ್ತಿದ್ದಾರೆ. ಬಾಗಿಲು ನಿರ್ಮಾಣಕ್ಕೆ ಪ್ರಾಯೋಜ ಕರನ್ನು ಹುಡುಕುತ್ತಿರುವದು ಬೇಸರದ ವಿಚಾರವಾಗಿದೆ. ಅರ್ಚಕರ ಕೋಣೆ ಮಳೆಗಾಲ ಸೋರುತ್ತಿದ್ದು, ಇಲ್ಲಿ ವಾಸ ಮಾಡುವದೇ ಕಷ್ಟವಾಗಿದೆ. ಕೋಣೆ ತುಂಬಾ ನೀರು ನಿಲ್ಲುತ್ತಿದ್ದು, ಅವ್ಯವಸ್ಥೆಗಳ ಬಗ್ಗೆ ಆಡಳಿತ ವ್ಯವಸ್ಥೆಗೆ ತಿಳಿದಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ. ಮೇಲ್ಚಾವಣಿಗೆ ಸೋರದಂತೆ ತಡೆಯಲು ತಾಮ್ರದ ಲೇಪನ ಮಾಡಲು ರೂ.5 ಲಕ್ಷದ ಯೋಜನೆ ರೂಪಿಸಲಾಗಿತ್ತಾದರೂ ಇದನ್ನು ಕೈಬಿಡಲಾಗಿದೆ. ದೇವಾಲಯ ಸಮಿತಿಯ ಖಾತೆಯಲ್ಲಿ ಸುಮಾರು 2 ಕೋಟಿ ರೂ. ಹಣವಿದ್ದರೂ ಅಭಿವೃದ್ಧಿಗೆ ವಿನಿಯೋಗಿಸುತ್ತಿಲ್ಲವೆಂದು ಭರತ್ ಆರೋಪಿಸಿದರು.

ಸ್ಥಳೀಯ ತಾವೂರು ಗ್ರಾಮದ ಚೆದುಕಾರು ಸೇತುವೆ ಕಳಪೆ ಗುಣಮಟ್ಟದಿಂದ ಕೂಡಿದ್ದು, ಇದೀಗ ಶಿಥಿಲಾವಸ್ಥೆಗೆ ತಲುಪಿದೆ. ಕೇವಲ ಹತ್ತು ವರ್ಷಗಳಲ್ಲೇ ಸೇತುವೆ ಮುರಿದಿದ್ದು, ನೂರು ವರ್ಷಗಳ ಹಿಂದಿನ ಬ್ರಿಟಿಷರ ಕಾಲದ ಸೇತುವೆಯನ್ನು ಇದೀಗ ಬಳಸಲಾಗುತ್ತಿದೆ. ಕಳಪೆ ಗುಣಮಟ್ಟದ ಸೇತುವೆಯನ್ನು ನಿರ್ಮಿಸಿದ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಮತ್ತು ಮಳೆಗಾಲದ ಒಳಗೆ ಸೇತುವೆಯನ್ನು ದುರಸ್ತಿ ಪಡಿಸಬೇಕೆಂದು ಭರತ್ ಒತ್ತಾಯಿಸಿದರು. ತಪ್ಪಿದಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದರು.

ಮೇಲು ಸೇತುವೆ ಸದ್ಯಕ್ಕಿಲ್ಲ : ಮಳೆಗಾಲದಲ್ಲಿ ದ್ವೀಪದಂತಾಗುವ ಭಾಗಮಂಡಲದಲ್ಲಿ ಮೇಲು ಸೇತುವೆ ನಿರ್ಮಿಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದ್ದರಾದರೂ ಈ ಯೋಜನೆ ಯನ್ನು ಅನುಷ್ಠಾನ ಗೊಳಿಸುವ ಇಚ್ಛಾಶಕ್ತಿ ಸ್ಥಳೀಯರಿಗಿಲ್ಲ ವೆಂದು ಭರತ್ ಆರೋಪಿಸಿದರು. ಇದೀಗ ಅಧಿಕಾರಿಗಳು ಸುಮಾರು 4 ಕಿ.ಮೀ. ದೂರದವರೆಗೆ ನದಿ ವಿಸ್ತರಣೆ ಕಾರ್ಯ ಕೈಗೆತ್ತಿಕೊಳ್ಳುವದಾಗಿ ಹೇಳುತ್ತಿದ್ದು, ಸೇತುವೆ ಯೋಜನೆ ನೆನೆಗುದಿಗೆ ಬೀಳುವ ಮುನ್ಸೂಚನೆ ದೊರೆತಿದೆ ಎಂದು ಅಭಿಪ್ರಾಯಪಟ್ಟರು.

ಮಳೆಗಾಲದಲ್ಲಿ ಭಾಗಮಂಡಲದ ತ್ಯಾಜ್ಯ ಕಾವೇರಿ ನದಿಯನ್ನು ಸೇರುತ್ತಿದ್ದು, ಸುಸಜ್ಜಿತವಾದ ಒಳಚರಂಡಿ ವ್ಯವಸ್ಥೆಯ ಯೋಜನೆ ಮತ್ತು ಶೌಚಾಲಯದ ಸೆಪ್ಟಿಕ್ ಟ್ಯಾಂಕ್‍ನ ವೈಜ್ಞಾನಿಕ ನಿರ್ಮಾಣದ ಕಾರ್ಯ ನೆನೆಗುದಿಗೆ ಬಿದ್ದಿದೆ. ಇದು ಅನೇಕ ವರ್ಷಗಳ ಹಿಂದಿನ ಯೋಜನೆಯಾಗಿದ್ದು, ಈ ಬಗ್ಗೆ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ತಿಳಿದಿದ್ದರೂ ಯಾವದೇ ಸ್ಪಂದನ ದೊರೆಯುತ್ತಿಲ್ಲ ವೆಂದು ಭರತ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಭಾಗಮಂಡಲ ಗ್ರಾ.ಪಂ ಸದಸ್ಯ