ಮಡಿಕೇರಿ, ಮೇ 4 : ಟಿಪ್ಪು ಜಯಂತಿ ಸಂದರ್ಭ ನಡೆದ ಗಲಭೆಗೆ ಸಂಬಂಧಿಸಿದಂತೆ ತಾವು ನೀಡಿದ ದೂರಿಗೆ “ಬಿ” ರಿಪೋರ್ಟ್ ನೀಡುವ ಮೂಲಕ ಪೊಲೀಸರು ಬಿಜೆಪಿ ನಾಯಕರನ್ನು ರಕ್ಷಿಸುವ ಕಾರ್ಯ ಮಾಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಪ್ರಮುಖ ವಿ.ಪಿ.ಶಶಿಧರ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕುಶಾಲನಗರದಲ್ಲಿ ತಮ್ಮ ವಾಹನವನ್ನು ಜಖಂ ಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ನೀಡಿದ್ದ ದೂರಿಗೆ ಇದೀಗ “ಬಿ” ರಿಪೋರ್ಟ್ ನೀಡಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಜಿಲ್ಲೆಯಲ್ಲಿ ಬಿಜೆಪಿ ತನ್ನ ಪ್ರಭಾವವನ್ನು ಮೆರೆಯುತ್ತಿದೆ ಎಂದು ಆರೋಪಿಸಿದರು. ಟಿಪ್ಪು ಜಯಂತಿ ದಿನ ಬಂದ್‍ಗೆ ಕರೆ ನೀಡಿ ಕಷ್ಟ ನಷ್ಟಗಳಿಗೆ ಕಾರಣರಾದವರ ವಿರುದ್ಧ ತಾವು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದು, ಇದೀಗ ಪೊಲೀಸರು “ಬಿ” ರಿಪೋರ್ಟ್ ನೀಡಿದ ನಂತರ ಈ ಮೊಕದ್ದಮೆಗೆ ಬೆಲೆ ಇಲ್ಲದಾಗಿದೆ. ಅಲ್ಲದೆ ವಾಹನ ಜಖಂಗೊಂಡು ಹಾನಿಗೊಳಗಾದ ತಮಗೆ ನ್ಯಾಯ ಸಿಗುವ ಭರವಸೆ ದೂರವಾಗಿದೆ. ಈ ಬೆಳವಣಿಗೆಯಿಂದ ಪೊಲೀಸರ ಕಾರ್ಯವೈಖರಿ ಬಗ್ಗೆ ಸಂಶಯಗಳು ಮೂಡುತ್ತಿವೆ ಎಂದು ವಿ.ಪಿ. ಶಶಿಧರ್ ಆರೋಪಿಸಿದರು.

ಬಂದ್ ವೇಳೆ ಬಿಜೆಪಿ ಕಾನೂನನ್ನು ಉಲ್ಲಂಘಿಸುತ್ತಿದ್ದರೂ, ತಾನು ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರತಿರೋದವೊಡ್ಡಲು ಪ್ರಚೋದನೆ ನೀಡಿಲ್ಲ. ಕಾನೂನಿನ ಚೌಕಟ್ಟಿನಲ್ಲೇ ಪೊಲೀಸರಿಗೆ ಸಹಕಾರ ನೀಡಿದ್ದರೂ ನನಗೆ ನ್ಯಾಯ ದೊರಕಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಿದ್ದರೆ ಇಂತಹ ಬೆಳವಣಿಗೆಗಳ ಬಗ್ಗೆ ಆಶ್ಚರ್ಯವಾಗುತ್ತಿರಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರವಿದ್ದೂ ಬಿಜೆಪಿ ತನ್ನ ಪ್ರಭಾವವನ್ನು ಬೀರುತ್ತಿದೆ ಎಂದರೆ ಕಾಂಗ್ರೆಸ್ ಬಗ್ಗೆ ನಿರಾಶೆ ಮೂಡುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೊಡಗರಹಳ್ಳಿ ಗ್ರಾ.ಪಂ. ಅಧ್ಯಕ್ಷ ಅಬ್ಬಾಸ್, ಐಗೂರು ಗಾ.ಪಂ. ಸದಸ್ಯ ದಿನೇಶ್, ಕಂಬಿಬಾಣೆ ಗ್ರಾ.ಪಂ. ಮಾಜಿ ಸದಸ್ಯ ಭುವನ್ ಹಾಗೂ ಹೊಸಕೋಟೆಯ ಅಬ್ದುಲ್ ರಜಾಕ್ ಉಪಸ್ಥಿತರಿದ್ದರು.