ಸೋಮವಾರಪೇಟೆ, ಆ. 8: ತಾಲೂಕಿನ ಯಡವನಾಡು ಹಾಗೂ ಅತ್ತೂರು ಗ್ರಾಮಗಳ ಜನರು ಕಳೆದ 44 ವರ್ಷಗಳಿಂದ ಅನುಭವಿಸುತ್ತಿದ್ದ ಮಾನಸಿಕ ಸಂಕಷ್ಟ ಇದೀಗ ಕೊನೆಗೊಂಡಿದೆ. ನಾಲ್ಕುದಶಕಗಳ ಕಾಲ ಚಾತಕಪಕ್ಷಿಯಂತೆ ಕಾಯುತ್ತಿದ್ದ ಈ ಭಾಗದ ನೂರಾರು ಕುಟುಂಬಗಳ ಕನಸು ನನಸಾದಂತಾಗಿದೆ. ಯಡವನಾಡು ಮತ್ತು ಅತ್ತೂರು ಗ್ರಾಮಗಳನ್ನು ಕಂದಾಯ ಭೂಮಿಯನ್ನಾಗಿ ಪರಿವರ್ತಿಸಲು ಸರ್ಕಾರದ ಅರ್ಜಿ ಸಮಿತಿ ಆದೇಶಿಸಿರುವದೇ ಈ ಸಂಭ್ರಮಕ್ಕೆ ಕಾರಣವಾಗಿದೆ.
ಜಿಲ್ಲೆಯ ಹಾರಂಗಿ ಜಲಾಶಯ ನಿರ್ಮಾಣ ಸಂದರ್ಭ ಮನೆ ಮಠ ಕಳೆದುಕೊಂಡು ನಿರ್ವಸತಿಗರಾದ ಕುಟುಂಬಗಳನ್ನು ಸಮೀಪದ ಯಡವನಾಡು ಹಾಗೂ ಅತ್ತೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ನೆಲೆಸುವಂತೆ ಸರ್ಕಾರ ಸೂಚಿಸಿತ್ತು. 1970ರಲ್ಲಿ ಈ ಭಾಗದಲ್ಲಿ ನೆಲೆಸಿದ ಮಂದಿಗೆ ತಮ್ಮ ಜಾಗಕ್ಕೆ ಸಂಬಂಧಿಸಿದಂತೆ ಯಾವದೇ ದಾಖಲೆಗಳು ಇರಲಿಲ್ಲ. ಇದುವರೆಗೂ ಯಡವನಾಡು ಮೀಸಲು ಅರಣ್ಯವೆಂದೇ ದಾಖಲಾತಿಗಳಲ್ಲಿ ನಮೂದಾಗಿತ್ತು.
ಇದರಿಂದಾಗಿ ಸರ್ಕಾರದ ಯಾವದೇ ಸೌಲಭ್ಯಗಳು ದೊರಕುತ್ತಿರಲಿಲ್ಲ. ಭೂಮಿ ಇದ್ದೂ ಸವಲತ್ತುಗಳಿಂದ ವಂಚಿತರಾಗಿ ಜೀವನ ಸಾಗಿಸುತ್ತಿದ್ದರು. ಕೃಷಿ ಫಸಲು ಅತಿವೃಷ್ಟಿ ಅಥವಾ ಅನಾವೃಷ್ಟಿಗೆ ಹಾಳಾದರೂ, ಕಾಡು ಪ್ರಾಣಿಗಳ ಧಾಳಿಗೆ ಸಿಲುಕಿ ನಷ್ಟಗೊಂಡರೂ ಈ ಭಾಗದ ಜನರಿಗೆ ಸರ್ಕಾರದಿಂದ ಕಿಂಚಿತ್ತೂ ಪರಿಹಾರ ಲಭಿಸುತ್ತಿರಲಿಲ್ಲ. ಜತೆಗೆ ಭೂಮಿಯ ಆಧಾರದ ಮೇಲೆ ಬ್ಯಾಂಕ್‍ಗಳಿಂದ ಸಾಲವೂ ದೊರಕದ ಹಿನ್ನೆಲೆ ಸಂಕಷ್ಟದ ಬದುಕು ಮಾಮೂಲಾಗಿತ್ತು.
1971ರಿಂದಲೂ ಹಲವಷ್ಟು ಚುನಾವಣೆಗಳು ನಡೆದಿದ್ದು, ನೂರಾರು ಜನಪ್ರತಿನಿಧಿಗಳು, ಅಧಿಕಾರಿಗಳು ಯಡವನಾಡು-ಅತ್ತೂರು ಗ್ರಾಮಕ್ಕೆ ದಯಮಾಡಿಸಿ ಭರವಸೆಯ ಮಾತುಗಳನ್ನು ಆಡಿ ತೆರಳಿದವರು ನಂತರ ಯಾವದೇ ಕ್ರಮ ಕೈಗೊಂಡಿರಲಿಲ್ಲ. ಪರಿಣಾಮ ಈ ಭಾಗದ ಜನರ ದಶಕಗಳ ಕೂಗು ಹಾಗೆಯೇ ಇತ್ತು. ಇದೀಗ ರಾಜ್ಯದ ಅರ್ಜಿ ಸಮಿತಿ ಯಡವನಾಡು-ಅತ್ತೂರು ಗ್ರಾಮಕ್ಕೆ ಸಂಬಂಧಿಸಿದ ಅರ್ಜಿಯನ್ನು ವಿಲೇವಾರಿ ಮಾಡಿದ್ದು, ಡೆಪ್ಯೂಟಿ ಸ್ಪೀಕರ್ ಶಿವಶಂಕರ್ ಅವರು ಈ ಎರಡೂ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಒಟ್ಟಾರೆ ಗ್ರಾಮಸ್ಥರ ಬಹುಕಾಲದ ಬೇಡಿಕೆ ಈಡೇರಿದ್ದು, ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭವೂ ಹಲವು ನಾಯಕರು ಇಲ್ಲಿಗೆ ಭೇಟಿ ನೀಡಿ ಕ್ರಮದ ಮಾತುಗಳನ್ನಾಡಿದ್ದರು. ಶಾಸಕರು ಹಾಗೂ ಉಸ್ತುವಾರಿ ಸಚಿವರೂ ಸಹ ಪರಿಶೀಲನೆ ನಡೆಸಿದ್ದರು. ಈ ಹಿಂದೆ ಸೋಮವಾರಪೇಟೆ ಕ್ಷೇತ್ರದಿಂದ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಅಪ್ಪಚ್ಚು ರಂಜನ್ ಅವರು (1994ರಲ್ಲಿ) ಗ್ರಾಮಕ್ಕೆ ಭೇಟಿ ನೀಡಿ ಕಂದಾಯ ಭೂಮಿಯನ್ನಾಗಿ ಪರಿವರ್ತಿಸುವ ಭರವಸೆ ನೀಡಿದ್ದರು. ನಂತರ ಅವರೇ ಅರ್ಜಿಗಳ ಸಮಿತಿಯ ಅಧ್ಯಕ್ಷರೂ ಆದರು. ಇದೀಗ ಮಡಿಕೇರಿ ಕ್ಷೇತ್ರದ ಶಾಸಕರಾಗಿರುವ ಸಂದರ್ಭದಲ್ಲಿ 22 ವರ್ಷಗಳ ದೀರ್ಘಕಾಲದ ಅವಿರತ ಶ್ರಮದ ನಂತರ ಯಡವನಾಡು ಮತ್ತು ಅತ್ತೂರು ಗ್ರಾಮಗಳು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಯಾಗುತ್ತಿರುವ ಹಿನ್ನೆಲೆ ಗ್ರಾಮಸ್ಥರು ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.
ನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯ ಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿದ ನಂತರ ಮಾತನಾಡಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು, ಈ ಬಗೆಗಿನ ಪ್ರಕ್ರಿಯೆಗಳ ಬಗ್ಗೆ ಸವಿವರ ಮಾಹಿತಿ ನೀಡಿದರು.
1994ರ ಚುನಾವಣೆ ಸಂದರ್ಭ ಈ ಬಗ್ಗೆ ಭರವಸೆ ನೀಡಿದ್ದೆ. ಗೆದ್ದ ನಂತರ ಕಂದಾಯ ಗ್ರಾಮವನ್ನಾಗಿ ಪರಿವರ್ತಿಸಲು ಎಷ್ಟೊಂದು ಕಷ್ಟವಿದೆ ಎಂಬದು ಅರಿವಾಯಿತು. ಕಾನೂನು ತಜ್ಞರನ್ನು, ಅಧಿಕಾರಿಗಳನ್ನು ಭೇಟಿ ಮಾಡಿ ವಿಚಾರಿಸಿದೆ. ಗ್ರಾಮಸ್ಥರಿಂದ ಅರ್ಜಿ ತಯಾರಿಸಿ ರಾಜ್ಯ ವಿಧಾನ ಸಭೆಯ ಅರ್ಜಿಗಳ ಸಮಿತಿಗೆ ಸಲ್ಲಿಸಿದ ಮೇರೆ ಸರ್ಕಾರಿ ಮಟ್ಟದ ಕ್ರಮಗಳು ಪ್ರಾರಂಭವಾಯಿತು. ಅರ್ಜಿಗಳ ಸಮಿತಿಗೆ ಡೆಪ್ಯೂಟಿ ಸ್ಪೀಕರ್ ಅಧ್ಯಕ್ಷರಾಗಿದ್ದು, ನಮ್ಮ ಸರ್ಕಾರದ ಅವಧಿಯಲ್ಲಿ ಕೆಲಕಾಲ ತನಗೇ ಅಧ್ಯಕ್ಷ ಸ್ಥಾನ ಸಿಕ್ಕಿದ್ದರಿಂದ ಅರ್ಜಿಯ ವಿಚಾರಣೆ ತೀವ್ರಗತಿಯಲ್ಲಿ ನಡೆಯಿತು ಎಂದು ಶಾಸಕರು ಗ್ರಾಮಸ್ಥರಿಗೆ ಮಾಹಿತಿ ನೀಡಿದರು.
ಮುಖ್ಯಮಂತ್ರಿ ಮತ್ತು ಅರಣ್ಯ ಸಚಿವರೇ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಆ ಸಂದರ್ಭದಲ್ಲಿ ಅವರಿಂದ ಕಂದಾಯ ಗ್ರಾಮವನ್ನಾಗಿ ಮಾರ್ಪಡಿಸಲು ಸಾಧ್ಯವಾಗಿರಲಿಲ್ಲ ಎಂದ ರಂಜನ್, ತಾನು ಶಾಸಕನಾಗಿ ಆಯ್ಕೆಯಾದ ನಂತರ 27.08.1999, 22.4.2010, 10.06.2010, 11.05.2011, 31.05.2012, 21.06.2012, 20.12.2012, 05.09.2013, 20.05.2014, 03.09.2015, 03.05.2016 ಮತ್ತು 17.05.2016ರಂದು ಸಮಿತಿ ಸಭೆಗಳು ನಡೆದಿದ್ದು, ಅಂತಿಮವಾಗಿ ಕಂದಾಯ ಗ್ರಾಮವನ್ನಾಗಿ ಮಾರ್ಪಡಿಸುವ ಅದೇಶವನ್ನು ಡೆಪ್ಯೂಟಿ ಸ್ಪೀಕರ್ ಜಿಲ್ಲಾಧಿಕಾರಿಗೆ ನೀಡಿದ್ದಾರೆ ಎಂದರು.
ಸಭೆಯಲ್ಲಿ ಪರಿಸರ ಮತ್ತು ಅರಣ್ಯ ಇಲಾಖೆ, ಕಂದಾಯ ಇಲಾಖೆಗಳ ಪ್ರಿನ್ಸಿಪಲ್ ಸೆಕ್ರೇಟರಿ, ಎಡಿಎಲ್‍ಆರ್ ಸೇರಿದಂತೆ ಇತರ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ತಂಡ ಭಾಗವಹಿಸಿ, ಹಲವು ಸರ್ವೆಗಳ ನಂತರ ಈ ಐತಿಹಾಸಿಕ ತೀರ್ಮಾನಕ್ಕೆ ಬರಲಾಗಿದೆ ಎಂದರು. ನೂತನ ಆದೇಶದಿಂದ ಯಡವನಾಡು ಗ್ರಾಮದ 1055 ಏಕರೆ ಮತ್ತು ಅತ್ತೂರು ಗ್ರಾಮದ 900 ಏಕರೆ ಕಂದಾಯ ಭೂಮಿಯಾಗಿ ಪರಿವರ್ತನೆಯಾಗಲಿದೆ ಎಂದರು.
ಕಾಂಗ್ರೆಸ್ ಪಕ್ಷದ ಕೆಲವರು ಯಡವನಾಡು ಕಂದಾಯ ಗ್ರಾಮ ತಮ್ಮ ಸರ್ಕಾರದ ಸಾಧನೆ ಎಂದು ಬಿಂಬಿಸಿಕೊಳ್ಳುವ ಯತ್ನ ನಡೆಸುತ್ತಿದ್ದಾರೆ. ಇವರುಗಳು ವಿಧಾನಸೌಧಕ್ಕೆ ತೆರಳಿ ದಾಖಲೆ ಪಡೆಯಲಿ. ಕಳೆದ ಸಭೆಗಳಲ್ಲಿ ನಡೆಸಿದ ಚರ್ಚೆಯ 500 ಪುಟಗಳ ವರದಿ ವಿಧಾನಸೌಧದಲ್ಲಿದೆ. ಅರ್ಜಿಗಳ ವಿಚಾರಣೆಗೆ ಇಷ್ಟೊಂದು ದೀರ್ಘ ಸಮಯ ಬೇಕಾಯಿತು ಎಂದರು. ಕಂದಾಯ ಗ್ರಾಮಕ್ಕೆ ಆದೇಶಿಸಿದ ಡೆಪ್ಯೂಟಿ ಸ್ಪೀಕರ್ ಹಾಗೂ ಸದಸ್ಯರು, ಸಂಬಂಧಿತ ಅಧಿಕಾರಿಗಳನ್ನು ಸೆಪ್ಟೆಂಬರ್ ತಿಂಗಳಲ್ಲಿ ಯಡವನಾಡು ಗ್ರಾಮಕ್ಕೆ ಕರೆತಂದು ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ಶಾಸಕರನ್ನು ಅಭಿನಂದಿಸಿದ ಯಡವನಾಡು ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎಂ. ಗಣೇಶ್ ಮಾತನಾಡಿ, 40 ವರ್ಷದಿಂದ ನೆಮ್ಮದಿ ಕೆಡಿಸಿದ್ದ ಸಮಸ್ಯೆ ಬಗೆಹರಿದಿದೆ. ನಮ್ಮ ಕನಸು ನನಸಾಗಿದೆ. ಈ ಹಿಂದೆ ಗ್ರಾಮದ ಸರ್ವೆ ಕಾರ್ಯ ಹಾಗೂ ಸರ್ವೆ ಕಲ್ಲುಗಳನ್ನು ನೆಡಲು 3 ಲಕ್ಷ
ರೂ. ವ್ಯಯವಾಗಿದ್ದು, ಅಪ್ಪಚ್ಚು ರಂಜನ್ ಅವರು ವೈಯುಕ್ತಿಕವಾಗಿ 40 ಸಾವಿರ ರೂ. ಇದಕ್ಕಾಗಿ ಖರ್ಚು ಮಾಡಿದ್ದಾರೆ. ಇವರಿಗೆ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಮಾಜೀ ಅಧ್ಯಕ್ಷ ಜಿ.ಕೆ. ಸುಬ್ರಮಣಿ, ಗ್ರಾ.ಪಂ. ಸದಸ್ಯ ಡಿ.ಎಂ. ಗಣೇಶ್, ಪ್ರಮುಖರಾದ ಉಮೇಶ್ ರಾಜೇ ಅರಸ್, ಟಿ.ಕೆ. ರಮೇಶ್ ಸೇರಿದಂತೆ ಗ್ರಾಮಸ್ಥರುಗಳು ಭಾಗವಹಿಸಿ ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.