ಮಡಿಕೇರಿ,ಆ.8: ಕನ್ನಡ ಸಾಹಿತ್ಯ ಪರಿಷತ್ತು ಮಡಿಕೇರಿ ತಾಲೂಕು ಘಟಕದ ವತಿಯಿಂದ ಮಳೆಗಾಲದ ಕಾರ್ಯ ಕ್ರಮದ ಅಂಗವಾಗಿ ಕೆಸರುಗದ್ದೆ ಗ್ರಾಮೀಣ ಕ್ರೀಡೆ ಹಾಗೂ ಕೃಷಿ ಚಟುವಟಿಕೆ ಕುರಿತಾಗಿ ಕವಿಗೋಷ್ಠಿ ಏರ್ಪಡಿಸುವಂತೆ ಹಾಗೂ ಮಕ್ಕಳ ಕವನ ಸಂಕಲನ ಹೊರತರಲು ನಿರ್ಧರಿಸಲಾಗಿದೆ.

ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಯೊಂದಿಗೆ ಗ್ರಾಮೀಣ ಕೆಸರುಗದ್ದೆ ಕ್ರೀಡಾಕೂಟ ಗಳು ನಡೆಯುತ್ತಿರು ವದರಿಂದ ಅದರ ಕುರಿತಾಗಿ ಕವಿಗೋಷ್ಠಿ ಏರ್ಪಡಿಸುವ ಬಗ್ಗೆ ಪದಾಧಿಕಾರಿಗಳು ಸಲಹೆ ನೀಡಿದ ಹಿನ್ನೆಲೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಕಾರ್ಯಕ್ರಮ ವನ್ನು ಗ್ರಾಮೀಣ ಭಾಗದಲ್ಲಿ ಕೊಡವ ಹಾಗೂ ಅರೆಭಾಷೆ ಅಕಾಡೆಮಿಗಳ ಸಹಯೋಗ ದೊಂದಿಗೆ ಆಯೋಜಿಸಲು ಅಕಾಡೆಮಿ ಗಳೊಂದಿಗೆ ವ್ಯವಹರಿಸುವಂತೆ ನಿರ್ಧರಿಸಲಾಯಿತು.

ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಮೂಡಿಸುವದರೊಂದಿಗೆ ಸಾಹಿತ್ಯ ಪರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಲು ಪ್ರೋತ್ಸಾಹಿಸುವ ಸಲುವಾಗಿ ಮಕ್ಕಳ ಸ್ವರಚಿತ ಕವಿಗೋಷ್ಠಿ ಏರ್ಪಡಿಸಿ ಉತ್ತಮವಾದವುಗಳನ್ನು ಆಯ್ಕೆ ಮಾಡಿ ಕವನ ಸಂಕಲನ ಹೊರತರುವ ಬಗ್ಗೆ ಗೌರವ ಸಲಹೆಗಾರ ಬಾಳೆಯಡ ಕಿಶನ್ ಪೂವಯ್ಯ ಸಲಹೆ ನೀಡಿದರು. ಸಭೆ ಇದಕ್ಕೆ ಸಮ್ಮತಿ ಸೂಚಿಸಿತ್ತಲ್ಲದೆ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅವರವರ ಭಾವನೆಗಳಿಗುಣವಾಗಿ ಕವನ ರಚಿಸುವಂತೆ, ಕಾಲೇಜು ಮಕ್ಕಳಿಗೆ ಸಮಿತಿ ನೀಡುವ ವಿಷಯದಲ್ಲಿ ಸ್ಥಳದಲ್ಲಿಯೇ ಕವನ ರಚನೆ ಮಾಡುವ ಬಗ್ಗೆ ತೀರ್ಮಾನಿಸಿತು. ನವೆಂಬರ್ ತಿಂಗಳಿನಲ್ಲಿ ಈ ಕಾರ್ಯಕ್ರಮ ನಡೆಸುವದಲ್ಲದೆ, ಜಿಲ್ಲಾ ಸಮಿತಿಯ ಸಹಕಾರದೊಂದಿಗೆ ಸಂಕಲನ ಹೊರ ತರುವ ಬಗ್ಗೆ ನಿರ್ಧರಿಸಲಾಯಿತು.

ಜಿಲ್ಲಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿರುವ ಕನ್ನಡ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಮಳೆ ಕಡಿಮೆಯಾದ ಬಳಿಕ ಆರಂಭಿಸುವ ಬಗ್ಗೆ ತೀರ್ಮಾನಿಸಲಾಯಿತು. ಸಭೆಯಲ್ಲಿ ಗೌರವ ಕಾರ್ಯದರ್ಶಿ ಕೂಡಕಂಡಿ ದಯಾನಂದ್, ಪದಾಧಿಕಾರಿಗಳಾದ ಬಿ.ಬಿ.ಸರಸ್ವತಿ, ಎಸ್.ಡಿ.ಅನಿತಾ, ಡಿ.ಹೆಚ್.ಪುಷ್ಪ, ಪಿ.ಎಂ.ರವಿ, ಟಿ.ಬಿ.ಪೂರ್ಣಿಮ ಇನ್ನಿತರರು ಪಾಲ್ಗೊಂಡಿದ್ದರು.