ಮಡಿಕೇರಿ, ಜು. 29: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಬಳಸಿಕೊಂಡಿರುವ ಕಳ್ಳರು ಹಾಡಹಗಲೇ ಮನೆಯೊಂದಕ್ಕೆ ನುಗ್ಗಿ ಚಿನ್ನಾಭರಣ ಅಪಹರಿಸಿರುವ ಪ್ರಕರಣ ವರದಿಯಾಗಿದೆ.
ಕುಶಾನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಚಿಕ್ಕಬೆಟ್ಟಗೇರಿಯಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ನಿವಾಸಿ ಕೆ.ಕೆ. ಗಣೇಶ್ ಹಾಗೂ ಅವರ ಪತ್ನಿ ನಿನ್ನೆ ಕೆಲಸಕ್ಕೆ ತೆರಳಿದ್ದರು. ಮಕ್ಕಳೂ ಶಾಲೆಗೆ ತೆರಳಿದ್ದರು. ಸಂಜೆ ಮಕ್ಕಳು ಮನೆಗೆ ಬರುವ ಸಂದರ್ಭ ಮನೆಯಲ್ಲಿ ಬಾಗಿಲು ಒಡೆದು ಕಳ್ಳತನ ನಡೆಸಿರುವದು ತಿಳಿದು ಬಂದಿದೆ. ಕಳ್ಳರು 28 ಗ್ರಾಂ. ಚಿನ್ನಾಭರಣ ಅಪಹರಿಸಿದ್ದು, ಈ ಬಗ್ಗೆ ಗಣೇಶ್ ನೀಡಿದ ದೂರಿನಂತೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ.