ಮಡಿಕೇರಿ, ಅ. 23: ಹಾಕಿ ಪಟುಗಳು ಸಮರ್ಥ ಆಟಗಾರರಾಗಲು ಟರ್ಫ್ ಮೈದಾನ ಅತ್ಯಗತ್ಯ ಎಂದು ಹಾಕಿ ಒಲಂಪಿಯನ್ ಎಸ್.ವಿ. ಸುನಿಲ್ ನುಡಿದರು.ನಿನ್ನೆದಿನ ಇಲ್ಲಿನ ರೋಟರಿ ಮಿಸ್ಟಿಹಿಲ್ಸ್ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೊಡಗಿನ ಹಾಕಿ ಪ್ರತಿಭೆಗಳು ಮೇಲ್ಬರಬೇಕಾದರೆ ಮಡಿಕೇರಿ, ಪೊನ್ನಂಪೇಟೆ ಹಾಗೂ ಸೋಮವಾರಪೇಟೆಯಲ್ಲಿ ಕನಿಷ್ಟ ಎರೆಡೆರಡು ಟರ್ಫ್ ಮೈದಾನಗಳು ಬೇಕು, ಸಂಬಂಧಿಸಿದವರು ಇತ್ತ ಚಿತ್ತ ಹರಿಸಬೇಕೆಂದರು. ಮಣ್ಣಿನ ಮೈದಾನ ದಲ್ಲಿ ಅಭ್ಯಸಿಸಿ ಸ್ಪರ್ಧೆಗೆ ಟರ್ಫ್ ಮೈದಾನದಲ್ಲಿ ಇಳಿದು ಗೆಲ್ಲುವದು ಅಸಾಧ್ಯ ಎಂದು ಹೇಳಿದರು.
ಸೋಮವಾರಪೇಟೆಯಲ್ಲಿ ಅರ್ಧಕ್ಕೆ ನಿಂತಿರುವ ಟರ್ಫ್ ಮೈದಾನ ಕೆಲಸದ ಕುರಿತು, ಮಡಿಕೇರಿಯಲ್ಲಿ ಹಳೆಯದಾದ ಟರ್ಫ್ ಕುರಿತು ಹಾಗೂ ಪೊನ್ನಂಪೇಟೆಯ ಮೈದಾನದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ಈ ಕುರಿತು ತಾನು ಪ್ರತಿಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಹೇಳುತ್ತಿದ್ದರೂ ಅವರು ಮನವಿಯನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದು ಸುನಿಲ್ ಹೇಳಿದರು.
ಇತ್ತೀಚೆಗೆ ಒಲಂಪಿಕ್ ಪಂದ್ಯಾಟ ದಲ್ಲಿ ಸಣ್ಣಪುಟ್ಟ ತಪ್ಪುಗಳಿಂದಾಗಿ ಅರ್ಹತೆ ಹೊಂದಲಿಲ್ಲ ಎಂದ ಅವರು, ಬಳಿಕ ವೀಡಿಯೋ ಅನಲೈಜಿಂಗ್, ಸಭೆಗಳನ್ನು ನಡೆಸಿ ಆತ್ಮಾವಲೋಕನ ನಡೆಸಿದ್ದೇವೆ. ತಿದ್ದಿಕೊಂಡಿದ್ದೇವೆ. ಅದರ ಪರಿಣಾಮವಾಗೇ ಜಪಾನ್ ವಿರುದ್ಧ ಹತ್ತು ಗೋಲ್ ಹೊಡೆದಿದ್ದೇವೆ ಎಂದರು.
ಒಳ್ಳೆಯ ಮೈದಾನ, ಉತ್ತಮ ತರಬೇತುದಾರರು ಇಲ್ಲದಿದ್ದರೆ ಕೊಡಗಿನ ಹಾಕಿ ಪ್ರತಿಭೆಗಳು ಹಿಂದೆ ಉಳಿದರು ಅಚ್ಚರಿಯಿಲ್ಲ ಎಂದು ಮಿತ ಮಾತಿನ ಸುನಿಲ್ ಎಚ್ಚರಿಸಿದರು.
ಭಾರತ-ಪಾಕ್ ನಡುವೆ ಬಿಕ್ಕಟ್ಟಿದೆ. ಅಲ್ಲಿನ ಸಿನೆಮಾ, ಅಲ್ಲಿನ ನಟರ ಸಿನೆಮಾ ಇಲ್ಲಿ ತೋರಿಸಬಾರದೆಂಬ ಕೂಗಿದೆ. ಹೀಗಿರುವಾಗ ಮಲೇಷಿಯಾ ದಲ್ಲಿ ಪಾಕ್ ತಂಡದೊಂದಿಗೆ ಆಡಿದುದು ಸರಿಯೆ ಎಂದು ‘ಶಕ್ತಿ’ ಸುನಿಲ್ ಅವರನ್ನು ಪ್ರಶ್ನಿಸಿತು. ಹಾಕಿಯಲ್ಲಿ ರಾಜಕೀಯ ಬೇಡ. ನಾವು ಕೇವಲ ಆಟಗಾರರಷ್ಟೆ. ಫೆಡರೇಷನ್ ತೀರ್ಮಾನದಂತೆ ನಾವು ಆಡುತ್ತೇವೆ. ಅಷ್ಟಕ್ಕೂ ಪಾಕ್ ವಿರುದ್ಧ 3-2 ಗೋಲಿನಿಂದ ನಾವಿಂದು ಜಯ ಗಳಿಸಿದುದು ಅತ್ಯಂತ ಸಂತಸ ತಂದಿದೆ ಎಂದು ಸುನಿಲ್ ಹೇಳಿದರು.