ಸೋಮವಾರಪೇಟೆ, ನ. 16: ರಾಷ್ಟ್ರ ರಕ್ಷಣೆಯಲ್ಲಿರುವ ಸೈನಿಕರ ಕಲ್ಯಾಣ ಹಾಗೂ ಶ್ರೇಯೋಭಿವೃದ್ಧಿ ಗಾಗಿ ಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು.

ಇಲ್ಲಿನ ವೀರಶೈವ ಸಮಾಜದ ಆಶ್ರಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ದೀಪ ಬೆಳಗಿಸಿ ಸೈನಿಕರ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸ ಲಾಯಿತು. ಈ ಸಂದರ್ಭ ಪಟ್ಟಣದ ವಿರಕ್ತ ಮಠದ ಮಠಾಧೀಶ ವಿಶ್ವೇಶ್ವರ ಸ್ವಾಮೀಜಿ ಮಾತನಾಡಿ, ಈ ದೇಶದಲ್ಲಿ ಪ್ರಜೆಗಳು ನೆಮ್ಮದಿಯ ಜೀವನ ನಡೆಸಲು ನಮ್ಮ ದೇಶದ ಸೈನಿಕರು ಕಾರಣರಾಗಿದ್ದಾರೆ. ರಾಷ್ಟ್ರದ ಗಡಿ ಭಾಗದಲ್ಲಿ ಅನ್ಯ ರಾಷ್ಟ್ರದ ವ್ಯಕ್ತಿಗಳ ನುಸುಳುವಿಕೆ, ವೈರಿಗಳ ಧಾಳಿಯನ್ನೆದುರಿಸಲು ಹಗಲು ರಾತ್ರಿಯೆನ್ನದೆ ತಮ್ಮ ಪ್ರಾಣದ ಹಂಗನ್ನು ತೊರೆದು ಕಾಯುತ್ತಿರುವದರಿಂದ ದೇಶದ ಒಳಗಿರುವ ನಾವು ಯಾವದೇ ಭೀತಿ ಇಲ್ಲದೆ ಜೀವಿಸುವಂತಾಗಿದೆ ಎಂದರು.

ದೀಪಾವಳಿ ಎಂಬದು ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವದು. ಹಾಗೆಯೇ ಸೈನಿಕರ ಹಾಗೂ ಅವರ ಕುಟುಂಬದವರ ಬಾಳಿನಲ್ಲೂ ಸಂಕಷ್ಟವೆಂಬ ಕತ್ತಲು ಸರಿದು ಸುಖ, ನೆಮ್ಮದಿ, ಸಮೃದ್ದಿ ಎಂಬ ಬೆಳಕು ಪಸರಿಸಲಿ ಎಂದು ಆಶಿಸಿದರು.

ಈ ಸಂದರ್ಭ ಅರ್ಚಕ ಯೋಗೇಶ್ ಅವರ ಪೌರೋಹಿತ್ವದಲ್ಲಿ ಅಷ್ಟೋತ್ರ, ಅರ್ಚನೆ ನಂತರ ಮಹಾಮಂಗಳಾರತಿ ನಡೆದು ಪ್ರಸಾದ ವಿನಿಯೋಗ ನಡೆಯಿತು. ವೀರಶೈವ ಸಮಾಜದ ಯಜಮಾನ್ ಕೆ.ಎನ್. ಶಿವಕುಮಾರ್, ಶೆಟ್ರು ಕೆ.ಎನ್. ತೇಜಸ್ವಿ, ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಮಹೇಶ್, ಕಾರ್ಯದರ್ಶಿ ಚಂದ್ರು ಮುಂತಾದವರು ಹಾಜರಿದ್ದರು.