ನಡುರಾತ್ರಿಯಲ್ಲಿ ಒಂಟಿ ಮಹಿಳೆಯರಿದ್ದ ಮನೆಯ ಬಳಿ ಸುಳಿದಾಡಿ, ಅಂಗಡಿಗೆ ಕನ್ನ ಹಾಕಲು ಯತ್ನಿಸಿದ ವ್ಯಕ್ತಿಯ ಚಲನ-ವಲನ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸ್ಥಳೀಯ ವ್ಯಕ್ತಿ ಇರಬೇಕೆಂಬ ಶಂಕೆ ಗ್ರಾಮಸ್ಥರÀಲ್ಲಿ ಮೂಡಿದೆ.ಇಲ್ಲಿಗೆ ಸಮೀಪದ ಮರಗೋಡುವಿನಲ್ಲಿ ಮೊನ್ನೆ ರಾತ್ರಿ ಒಂಟಿ ಮಹಿಳೆಯರು ವಾಸವಿರುವ ಮನೆಗಳ ಬಳಿ ಅಪರಿಚಿತರು ಸುಳಿದಾಡಿದ್ದಲ್ಲದೆ, ಅಲ್ಲಿನ ಬೇಕರಿಯೊಂದಕ್ಕೆ ನುಸುಳಲು ಯತ್ನಿಸಿದ ಪ್ರಸಂಗ ನಡೆದಿತ್ತು. ಈ ಬಗ್ಗೆ ಅಲ್ಲಿನ ವಿಎಸ್‍ಎಸ್‍ಎನ್ ಅಧ್ಯಕ್ಷ, ಗ್ರಾ.ಪಂ. ಸದಸ್ಯ ಬಾಳೆಕಜೆ ಯೋಗೇಂದ್ರ ಅವರಿಗೆ ಸೇರಿದ ಕಾಫಿ ಗೋದಾಮಿನಲ್ಲಿ ಅಳವಡಿಸಲಾಗಿರುವ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ರಾತ್ರಿ 11 ಗಂಟೆ 16ನಿಮಿಷದ ಸಮಯದಲ್ಲಿ ವ್ಯಕ್ತಿಯೋರ್ವ ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ರಸ್ತೆಯಲ್ಲಿ ಹೋಗುತ್ತಿರುವ ದೃಶ್ಯ ಗೋಚರಿಸಿದೆ. ಈತ ಸ್ಥಳೀಯ ವ್ಯಕ್ತಿಯಾಗಿರಬೇಕೆಂಬ ಸಂಶಯ ಗ್ರಾಮಸ್ಥರಲ್ಲಿ ವ್ಯಕ್ತಗೊಂಡಿದ್ದು, ಆತನನ್ನು ಸೆರೆಹಿಡಿಯುವ ಬಗ್ಗೆ ಸಮಾಲೋಚಿಸುತ್ತಿದ್ದಾರೆ.ಯಾವ ಕಾರಣಕ್ಕಾಗಿ ಆ ವ್ಯಕ್ತಿ ಈ ರೀತಿಯಾಗಿ ವರ್ತಿಸಿದ್ದಾನೆಂಬದರ ಬಗ್ಗೆಯೂ ಸಂಶಯ ವ್ಯಕ್ತಗೊಂಡಿದೆ. ಪ್ರಕರಣ ನಡೆದು 24 ಗಂಟೆ ಕಳೆದರೂ, ಈ ಬಗ್ಗೆ ಮಾಧ್ಯಮದಲ್ಲಿ ಪ್ರಕಟಗೊಂಡಿದ್ದರೂ ಸಂಬಂಧಿಸಿದ ಪೊಲೀಸ್ ಇಲಾಖೆ ಈ ಬಗ್ಗೆ ಗಮನ ಹರಿಸದಿರುವ ಬಗ್ಗೆ ಗ್ರಾಮಸ್ಥರು ಅಸಮಾಧಾನಗೊಂಡಿದ್ದಾರೆ. ಕನಿಷ್ಟ ಪೊಲೀಸ್ ಸಿಬ್ಬಂದಿಗಳಾದರೂ ಭೇಟಿ ನೀಡಿ ಮಾಹಿತಿ ಪಡೆಯಲು ಕೂಡ ಆಸಕ್ತಿ ತೋರದಿರುವದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. - ಸಂತೋಷ್