ಮಡಿಕೇರಿ, ಅ. 19: ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಪ್ರಾರಂಭಗೊಂಡ ‘ಸಾಂತ್ವನ ಮಹಿಳಾ ಸಹಾಯವಾಣಿ’ ಕೊಡಗಿನಾದ್ಯಂತ ಸಮಾಜದ ನೊಂದ ಮಹಿಳೆಯರು ಪ್ರತಿಯೊಂದು ಸ್ತರದಲ್ಲಿ ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ದಾಖಲಿಸಿಕೊಂಡು ತಕ್ಷಣಕ್ಕೆ ಸರಿಯಾದ ಸಲಹೆ ಸೂಚನೆಗಳನ್ನು ನೀಡಿ ನೆರವು ಕಲ್ಪಿಸುತ್ತಾ ಬಂದಿದೆ. ಸಾಂತ್ವನ ಕೇಂದ್ರದಲ್ಲಿ ಈವರೆಗೆ 2655 ವಿವಿಧ ಸ್ವರೂಪದ ಪ್ರಕರಣಗಳು ದಾಖಲಾಗಿದ್ದು, 2607 ಪ್ರಕರಣಗಳು ಇತ್ಯರ್ಥಗೊಂಡಿರುತ್ತದೆ. 2016-17ನೇ ಆರ್ಥಿಕ ಸಾಲಿನಲ್ಲಿ ಒಟ್ಟು 154 ಪ್ರಕರಣಗಳು ದಾಖಲಾಗಿ 127 ಪ್ರಕರಣಗಳು ಇತ್ಯರ್ಥಗೊಂಡು ಉಳಿದ 27 ಪ್ರಕರಣಗಳು ಇತ್ಯರ್ಥದ ಹಂತದಲ್ಲಿದೆ.
ಇಲ್ಲಿಯವರೆಗೆ ವಿವಿಧ ಸ್ವರೂಪದ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ರೂ. 7,70,000 ಗಳನ್ನು ಸಾಂತ್ವನ ಕೇಂದ್ರದ ಮೂಲಕ 2016-17ನೇ ಸಾಲಿನಲ್ಲಿ ಕೊಡಿಸಿಕೊಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ 08272- 229004 ದೂರವಾಣಿಯನ್ನು ಸಂಪರ್ಕಿಸಬಹುದು.