ಚೆಟ್ಟಳ್ಳಿ, ಅ. 19: ಕಳೆದ ಒಂದು ತಿಂಗಳಿಂದ ಚೆಟ್ಟಳ್ಳಿಯ ಬಿಎಸ್ಎನ್ಎಲ್ ದೂರವಾಣಿ ಸಂಪರ್ಕ ಆಗಿಂದಾಗ್ಗೆ ಕಡಿತಗೊಳ್ಳುತ್ತಿದೆ. ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ದೂರವಾಣಿಯನ್ನು ಸ್ವೀಕರಿಸದಿದ್ದಾಗ ರೊಚ್ಚಿಗೆದ್ದ ಸಾರ್ವಜನಿಕರು ದೂರವಾಣಿ ಸಿಬ್ಬಂದಿಗೆ ಮುತ್ತಿಗೆ ಹಾಕಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಘಟನೆ ನಿನ್ನೆ ನಡೆಯಿತು.
ಬೆಳಿಗ್ಗೆ ಚೆಟ್ಟಳ್ಳಿಯ ದೂರವಾಣಿ ಇಲಾಖೆಯ ಜನರೇಟರನ್ನು ಸರಿಪಡಿಸಲು ಮಡಿಕೇರಿಯಿಂದ ದೂರವಾಣಿ ಸಿಬ್ಬಂದಿಗಳು ಆಗಮಿಸಿರುವ ವಿಷಯ ತಿಳಿದ ಸಾರ್ವಜನಿಕರು ಅವರುಗಳನ್ನು ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರ ಒತ್ತಾಯಕ್ಕೆ ಮಣಿದ ಸಿಬ್ಬಂದಿಗಳು ಮೇಲಧಿಕಾರಿಗಳನ್ನು ಸಂಪರ್ಕಿಸುವಂತೆ ದೂರವಾಣಿ ಸಂಖ್ಯೆಯನ್ನು ನೀಡಿದರು.
ಚೆಟ್ಟಳ್ಳಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ವರ್ತಕ ಸುರೇಶ್ ಬಾಬು ಅಧಿಕಾರಿಯನ್ನು ದೂರವಾಣಿ ಮುಖಾಂತರ ತರಾಟೆಗೆ ತೆಗೆದು ಕೊಂಡು ಹಳೆಯ ಜನರೇಟರನ್ನು ದುರಸ್ತಿ ಮಾಡದೇ ಹೊಸ ಜನರೇಟರನ್ನು ಅಳವಡಿಸಬೇಕೆಂದು ಒತ್ತಾಯಿಸಿದರು.
ಒಂದು ತಿಂಗಳೊಳಗೆ ಹೊಸ ಜನರೇಟರನ್ನು ಅಳವಡಿಸುವ ಬಗ್ಗೆ ಅಧಿಕಾರಿ ಭರವಸೆ ನೀಡಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮುಳ್ಳಂಡ ಸನ್ನಿ ಅಯ್ಯಪ್ಪ ಮಾತನಾಡಿ, ಚೆಟ್ಟಳ್ಳಿಯಲ್ಲಿ ದೂರವಾಣಿ ಸಂಪರ್ಕ ಸರಿಯಾಗಿ ಕೆಲಸ ಮಾಡದರಿಂದ ಬ್ಯಾಂಕ್ ಹಾಗೂ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಅಧಿಕಾರಿಗಳು ಸರಿಪಡಿಸದಿದ್ದರೆ ದೂರವಾಣಿ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.