ಶ್ರೀಮಂಗಲ, ಅ. 20: ಕೊಡವ ಜನಾಂಗದ ಸಹಸ್ರಾರು ಜನರನ್ನು ನಿರ್ಧಯವಾಗಿ ಕೊಂದ ಹಾಗೂ ಹಾಗೆಯೇ ಸಹಸ್ರಾರು ಜನರನ್ನು ಮತಾಂತರ ಮಾಡಿದ ಟಿಪ್ಪು ಸುಲ್ತಾನ್ ಜಯಂತಿಯನ್ನು ಜಿಲ್ಲೆಯಲ್ಲಿ ಆಚರಿಸುವದಕ್ಕೆ ಪೊನ್ನಂಪೇಟೆ ಕೊಡವ ಸಮಾಜ ವಿರೋಧ ವ್ಯಕ್ತಪಡಿಸಿದೆ. ಇದಲ್ಲದೆ ಟಿಪ್ಪು ಜಯಂತಿ ಆಚರಣೆ ಮಾಡಬಾರ ದೆಂದು ಮಡಿಕೇರಿ ಕೊಡವ ಸಮಾಜ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವದಕ್ಕೆ ಬೆಂಬಲ ವ್ಯಕ್ತಪಡಿಸಿ ರುವ ಪೊನ್ನಂಪೇಟೆ ಕೊಡವ ಸಮಾಜ, ಮಡಿಕೇರಿ ಕೊಡವ ಸಮಾಜದ ನಿಲುವನ್ನು ವಿರೋಧಿಸಿ ರುವ ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ. ಸುಬ್ಬಯ್ಯ ಅವರ ಹೇಳಿಕೆ ಯನ್ನು ತೀವ್ರವಾಗಿ ಖಂಡಿಸಿದೆ.

ಈ ಬಗ್ಗೆ ಪೊನ್ನಂಪೇಟೆ ಕೊಡವ ಸಮಾಜ ಲಿಖಿತ ಪತ್ರಿಕಾ ಹೇಳಿಕೆ ನೀಡಿದೆ. ಕೊಡವರು ಹಾಗೂ ಕೊಡವ ಸಮಾಜ ಮುಸ್ಲಿಂ ವಿರೋಧಿಗಳಲ್ಲ. ಮುಸ್ಲಿಮರು ಇತಿಹಾಸ ಹಾಗೂ ವಾಸ್ತವಾಂಶವನ್ನು ಅರಿತು ಟಿಪ್ಪು ಜಯಂತಿ ಜಿಲ್ಲೆಯ ಮಟ್ಟಿಗೆ ಆಚರಣೆ ಬೇಡ ಎನ್ನುವ ಕೊಡವ ಸಮುದಾಯದ ನಿಲುವಿಗೆ ಬೆಂಬಲ ನೀಡಬೇಕು. ಈ ವಿಚಾರದಲ್ಲಿ ಎ.ಕೆ.ಸುಬ್ಬಯ್ಯ ಅವರು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದು, ಇತಿಹಾಸ ಹಾಗೂ ವಾಸ್ತವಾಂಶವನ್ನು ಮರೆಮಾಚಿ ಯಾರನ್ನು ಸಂತುಷ್ಟ ಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕೊಡವ ಸಮಾಜದ ಪ್ರಮುಖರು ಪ್ರಶ್ನಿಸಿದ್ದಾರೆ. ಟಿಪ್ಪುವಿನ ಕ್ರೌರ್ಯದ ಬಗ್ಗೆ ದೇವಟ್ ಪರಂಬು ಹತ್ಯಾಕಾಂಡ, ಅದಲ್ಲದೇ ಟಿಪ್ಪು ಸುಲ್ತಾನ್ ನಡೆಸಿರುವ ಮತಾಂತರಕ್ಕೆ ಈಗಿರುವ ಕೊಡವ ಮಾಪಿಳ್ಳೆಗಳೇ ಸಾಕ್ಷಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ತಲಕಾವೇರಿಯಲ್ಲಿ ತೀರ್ಥ ಬರುವದಿಲ್ಲ, ಕೊಡಗಿಗೆ ಮಾರಕವಾದ ಬರಪೊಳೆ ಯೋಜನೆ, ಹೈಟೆನ್ಷನ್ ಮಾರ್ಗ, ಪಾಕಿಸ್ತಾನ ಧ್ವಜಾರೋಹಣ ವಿಚಾರಗಳಿಗೆ ಬೆಂಬಲಿಸಿದ ವ್ಯಕ್ತಿಯಿಂದ ಇದೀಗ ಇತಿಹಾಸ ಹಾಗೂ ವಾಸ್ತವಾಂಶವನ್ನು ಮರೆ ಮಾಚುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿರುವ ಕೊಡವÀ ಸಮಾಜ ಕೊಡಗಿನ ಹೊರಗೆ ಟಿಪ್ಪು ಸುಲ್ತಾನ್ ಒಳ್ಳೆಯ ಕೆಲಸ ಮಾಡಿದ್ದರೆ ಅಲ್ಲಿ ಅವರ ಜಯಂತಿ ಆಚರಿಸಲಿ. ಕಳೆದ ಬಾರಿ ವಿರೋಧದ ನಡುವೆ ಟಿಪ್ಪು ಜಯಂತಿ ಆಚರಣೆಯಿಂದ ಜಿಲ್ಲೆಯಲ್ಲಿ ಅಮಾಯಕರು ಜೀವ ಕಳೆದುಕೊಂಡರು ಹಾಗೂ ಶಾಂತಿಯುತವಾದ ಕೊಡಗಿನಲ್ಲಿ ಸೌಹಾರ್ಧತೆಗೆ ಧಕ್ಕೆ ಉಂಟಾಗಿ ಪ್ರೀತಿ ವಿಶ್ವಾಸದಿಂದಿದ್ದ ಎರಡು ಸಮುದಾಯಗಳು ಪರಸ್ಪರ ಸಂಶಯದಿಂದ ನೋಡು ವಂತಾಯಿತು. ಸರಕಾರ ಜಯಂತಿಯ ಆಚರಣೆಗೆ ಮುಂದಾದ ಪರಿಣಾಮ ಒಬ್ಬರು ಗುಂಪು ಘರ್ಷಣೆಗೆ ಬಲಿಯಾದರೆ ಮತ್ತೊಬ್ಬರು ಗುಂಡೇಟಿಗೆ ಬಲಿಯಾಗಿದ್ದರು. ಅಂದಿನಿಂದ ಕೊಡಗಿನಲ್ಲಿ ಪರಸ್ಪರ ದ್ವೇಷ ಹೊಗೆಯಾಡುತ್ತಲೇ ಇದೆ. ಹೀಗಿರುವಾಗ ಮತ್ತೆ ಟಿಪ್ಪು ಜಯಂತಿ ಆಚರಿಸಿದರೆ ಜನಾಂಗೀಯ ಘರ್ಷಣೆಗೆ ಸರಕಾರವೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಸರಕಾರ ಈ ನಿಟ್ಟಿನಲ್ಲಿ ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.

ಕೊಡವ ಸಮಾಜದ ಅಧ್ಯಕ್ಷ ಸುಳ್ಳಿಮಾಡ ಗೋಪಾಲ್ ತಿಮ್ಮಯ್ಯ, ಉಪಾಧ್ಯಕ್ಷ ಕರ್ನಲ್ ಆಲೆಮಾಡ ಕರುಂಬಯ್ಯ, ಗೌ. ಕಾರ್ಯದರ್ಶಿ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ, ಖಜಾಂಚಿ ಮೂಕಳೇರ ಲಕ್ಷ್ಮಣ, ಸಹ ಕಾರ್ಯದರ್ಶಿ ಚೆಪ್ಪುಡಿರ ಬೋಪಣ್ಣ, ನಿರ್ದೇಶಕರು ಗಳಾದ ಪೊನ್ನಿಮಾಡ ಸುರೇಶ್, ಮೂಕಳೆರ ಮಧು, ಕೋದೆಂಗಡ ನರೇಂದ್ರ, ಮುಂಡುಮಾಡ ಗಣೇಶ್, ಚೆಪ್ಪುಡಿರ ಕಿಟ್ಟು ಅಯ್ಯಪ್ಪ, ಕೇಚಟ್ಟಿರ ಕಾಮುಣಿ ಪೂಣಚ್ಚ, ಚೆಪ್ಪುಡಿರ ರೂಪ ಉತ್ತಪ್ಪ, ಮುಕ್ಕಾಟಿರ ಸರಸು ಅವರು ಲಿಖಿತ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಟಿಪ್ಪು ಜಯಂತಿ ಆಚರಣೆಗೆ ಪೊನ್ನಂಪೇಟೆ ಕೊಡವ ಸಮಾಜ ವಿರೋಧ