ಕೂಡಿಗೆ, ಅ. 20: ರಾಜ್ಯದಲ್ಲಿ ತಲೆದೋರಿರುವ ಬರಗಾಲದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ಹಾಗೂ ವೀರಾಜಪೇಟೆ ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶವನ್ನಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದ್ದರೂ, ಸೋಮವಾರಪೇಟೆ ತಾಲೂಕು ವಿಭಾಗಕ್ಕೆ ಮಳೆ ಹೆಚ್ಚು ಬಿದ್ದಿದೆ ಎಂಬ ತಪ್ಪು ಮಾಹಿತಿಯಿಂದ ಹಾಗೂ ಹಾರಂಗಿ ಅಣೆಕಟ್ಟೆಯಿಂದ ಕೊಡಗಿನ ಗಡಿಭಾಗ ಶಿರಂಗಾಲದವರೆಗೆ ನೀರು ಹರಿಸಿದರೂ ಪ್ರಯೋಜನವಿಲ್ಲದೆ, 10 ದಿನಗಳಿಗೊಮ್ಮೆ ನಾಲೆಗಳಿಗೆ ನೀರು ಹರಿಸಿದ ಪರಿಣಾಮ ಈ ವ್ಯಾಪ್ತಿಯ ರೈತರ ಭತ್ತದ ಬೆಳೆಯು ಒಣಗುತ್ತಿದೆ. ಅದಲ್ಲದೆ, ತಾಲೂಕಿನಲ್ಲಿ ಕಾಫಿ ಮತ್ತು ಇತರೆ ಬೆಳೆಗಳು ಸಮರ್ಪಕವಾಗಿ ಬಾರದೆ ಇರುವ ಹಿನ್ನೆಲೆಯಲ್ಲಿ ಈ ತಾಲೂಕನ್ನು ಬರಗಾಲ ಪೀಡಿತ ತಾಲೂಕು ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಬೇಕೆಂದು ಹೆಬ್ಬಾಲೆಯಲ್ಲಿ ನಡೆದ ಹೋಬಳಿ ಮಟ್ಟದ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾವಿರಾರು ರೈತರು ಸಭೆಗೆ ಆಗಮಿಸಿದ್ದ ಜಿ.ಪಂ. ಹಾಗೂ ತಾ.ಪಂ. ಜನಪ್ರತಿನಿಧಿಗಳನ್ನು ಆಗ್ರಹಿಸಿದರು.
ಈ ಸಂದರ್ಭ ಜಿಲ್ಲಾ ಪಂಚಾಯ್ತಿಯ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷ ಹೆಚ್.ಎಸ್. ಶ್ರೀನಿವಾಸ್ ರೈತರೊಂದಿಗೆ ಮಾತನಾಡಿ, ತಾಲೂಕು ಬರಗಾಲ ಪೀಡಿತ ಪ್ರದೇಶವಾಗಿ ಘೋಷಿಸಲು ಕ್ಷೇತ್ರದ ಶಾಸಕರ ಪ್ರಯತ್ನ ಸ್ವಾಗತಾರ್ಹ. ಆದರೆ, ಇದಕ್ಕೆ ಸ್ಪಂದಿಸದಿದ್ದಲ್ಲಿ ಹೋಬಳಿ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿ ್ತಗಳಲ್ಲಿ ನಿರ್ಣಯ ಕೈಗೊಳ್ಳುವದರ ಮೂಲಕ ರೈತರನ್ನೊಳಗೊಂಡಂತೆ ಜಿಲ್ಲೆಯ ಉಸ್ತುವಾರಿ ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವದು. ಈ ವ್ಯಾಪ್ತಿಯ ರೈತ ಮುಖಂಡರುಗಳ ನೇತೃತ್ವದಲ್ಲಿ ತಾಲೂಕಿನ ಎಲ್ಲಾ ಜನಪ್ರತಿನಿಧಿಗಳು ಒಳಗೊಂಡಂತೆ ಜಿಲ್ಲಾಧಿಕಾರಿಯ ಕಚೇರಿಯ ಎದುರು ಪ್ರತಿಭಟನೆ ಮಾಡಲಾಗುವದು ಎಂದು ತಿಳಿಸಿದರು.
ಹೋಬಳಿ ವ್ಯಾಪ್ತಿ ರೈತ ಮುಖಂಡರುಗಳಾದ ಶ್ರೀನಿವಾಸ್, ಗಣೇಶ್, ಸೋಮಣ್ಣ, ನಾಗರಾಜ್ ಹಾಗೂ ರೈತರು ಹಾರಂಗಿ ಅಣೆಕಟ್ಟೆಯಿಂದ ನಾಲೆಯ ಮೂಲಕ ಕೊಡಗಿನ ಗಡಿಭಾಗ ಶಿರಂಗಾಲದ ವರೆಗೆ ಸ್ಪಲ್ಪ ನೀರಾದರೂ ಹರಿಸಿ ಒಣಗುತ್ತಿರುವ ಭತ್ತದ ಬೆಳೆಯನ್ನು ಸಂರಕ್ಷಿಸಲು ಸಹಕಾರಿಯಾಗಬೇಕೆಂದು ಒತ್ತಾಯಿಸಿದ್ದಾರೆ.