ಸೋಮವಾರಪೇಟೆ, ಡಿ. 24: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಅಂಗವಾಗಿ ಮಕ್ಕಳ ಸಂತೆ ಕಾರ್ಯಕ್ರಮ ನಡೆಯಿತು.

ಅಳತೆಯಲ್ಲಿ ಮೋಸ, ತೂಕದಲ್ಲಿ ಮೋಸ, ಆಹಾರ ಪದಾರ್ಥಗಳಲ್ಲಿ ಕಲಬೆರೆಕೆ, ಪೊಟ್ಟಣದ ಮೇಲೆ ಮುದ್ರಿಸಿದ ಬೆಲೆಗಿಂತ ಹೆಚ್ಚು ಮೊತ್ತವನ್ನು ವಸೂಲು ಮಾಡುವದು, ಕಳಪೆ ಗುಣಮಟ್ಟದ ಸರಕು, ತೀರುವಳಿ ಮಾರಾಟ ಹೀಗೆ ಅನೇಕ ರೀತಿಯಲ್ಲಿ ಗ್ರಾಹಕರಿಗೆ ಮೋಸವಾಗುತ್ತಿತ್ತು. ವಿದ್ಯಾರ್ಥಿಗಳು ಮೋಸ ಹೋಗಬಾರದು ಅಲ್ಲದೆ ಮನೆಯಲ್ಲಿ ಹಿರಿಯರಿಗೂ ತಿಳುವಳಿಕೆ ನೀಡಬೇಕು ಎಂದು ಕಾರ್ಯಕ್ರಮದಲ್ಲಿ ಜಾಗೃತಿ ಮೂಡಿಸಲಾಯಿತು.

ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿ ದೊರೆಯುವ ತರಕಾರಿ, ಕರಿಬೇವಿನ ಸೊಪ್ಪು, ಪುದಿನ, ಗಣಿಕೆಸೊಪ್ಪು ಸೇರಿದಂತೆ ವಿವಿಧ ಬಗೆಯ ಸೊಪ್ಪುಗಳನ್ನು ತಂದು ಮಾರಾಟ ಮಾಡಿದರು. ಸೀಬೆಹಣ್ಣು, ನಿಂಬೆ, ಹಿರಳೆಕಾಯಿಗಳನ್ನು ತಂದು ಮಾರಾಟಕ್ಕಿಟ್ಟಿದ್ದರು. ವಿದ್ಯಾರ್ಥಿಗಳು ಪಟ್ಟಣದ ಅಂಗಡಿಗಳಿಂದ ಖರೀದಿಸಿದ ವಸ್ತುಗಳನ್ನು ಮಾರಾಟ ಮಾಡಿ ನಷ್ಟ ಅನುಭವಿಸಿದ ಬಗ್ಗೆ ಹೇಳಿಕೊಂಡರು. ಉಪಾನ್ಯಾಸಕರು, ಶಿಕ್ಷಕಕರು, ಪೋಷಕರು ಗ್ರಾಹಕರಾಗಿದ್ದರು.

ಬೆಳಿಗ್ಗೆ ನಡೆದ ಮಕ್ಕಳ ಸಂತೆಯ ಉದ್ಘಾಟನಾ ಸಮಾರಂಭದಲ್ಲಿ ಜಿಪಂ ಸದಸ್ಯೆ ಪೂರ್ಣಿಮಾ ಗೋಪಾಲ್, ಎಸ್‍ಡಿಎಂಸಿ ಅಧ್ಯಕ್ಷ ಶೇಖರ್, ಉಪ ಪ್ರಾಂಶುಪಾಲ ಎಚ್.ಬಿ. ತಳವಾರ್, ಉಪನ್ಯಾಸಕರಾದ ತಿಲೋತ್ತಮೆ, ಲಲಿತ, ಮಮತ, ಹೇಮಲತಾ, ಅಕ್ಷರ ದಾಸೋಹದ ಅಧಿಕಾರಿ ಹೇಮಂತ್ ಸೇರಿದಂತೆ ಇತರರು ಭಾಗವಹಿಸಿದ್ದರು.